ಕರಾವಳಿ

ದಕ್ಷಿಣ ಕನ್ನಡ: ಕೋವಿಡ್ ಪರಿಸ್ಥಿತಿ ಪರಿಶೀಲಿಸಿದ ಡಿಸಿಎಂ – ಆಮ್ಲಜನಕಯುಕ್ತ ಬೆಡ್ ಸಂಖ್ಯೆ ಹೆಚ್ಚಿಸಲು ಸೂಚನೆ

Pinterest LinkedIn Tumblr

ಮಂಗಳೂರು / ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಸ್ಪತ್ರೆ ಹಾಗೂ ತಾಲ್ಲೂಕು ಹಾಗೂ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಆಮ್ಲಜನಕಯುಕ್ತ ಬೆಡ್’ಗಳ ಸಂಖ್ಯೆಯನ್ನು ಕೂಡಲೇ ಹೆಚ್ಚಿಸಬೇಕು ಎಂದು ಉಪ ಮುಖ್ಯಮಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ.

ಬೆಂಗಳೂರಿನಿಂದಲೇ ದ.ಕ ಜಿಲ್ಲೆಯ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಮತ್ತಿತರೆ ಅಧಿಕಾರಿಗಳ ಜತೆ ವಿಡಿಯೋ ಸಂವಾದ ನಡೆಸಿದ ಅವರು, ಜಿಲ್ಲಾಸ್ಪತ್ರೆ ವೆನ್’ಲಾಕ್ ಹಾಗೂ ಎಲ್ಲ ತಾಲ್ಲೂಕು ಆಸ್ಪತ್ರೆಗಳಲ್ಲಿ ಆಕ್ಸಿಜನೇಟೆಡ್ ಬೆಡ್’ಗಳನ್ನು ಕೂಡಲೇ ಹೆಚ್ವಿಸಬೇಕು. ದಿನೇದಿನೇ ಸೋಂಕಿತರು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ವ್ಯವಸ್ಥೆ ಮಾಡುವುದು ತುರ್ತು ಅಗತ್ಯವಾಗಿದೆ ಎಂದು ತಿಳಿಸಿದರು.

ವೆನ್’ಲಾಕ್ ಆಸ್ಪತ್ರೆಯಲ್ಲಿ ಈಗಾಗಲೇ 150 ಹಾಸಿಗೆಗಳಿಗೆ ಆಮ್ಲಜನಕ ವ್ಯವಸ್ಥೆ ಇರುವ ಅಂಶವನ್ನು ಜಿಲ್ಲಾಧಿಕಾರಿಗಳು ಡಿಸಿಎಂ ಗಮನಕ್ಕೆ ತಂದರು. “ಸದ್ಯಕ್ಕೆ ಇಷ್ಟು ಪ್ರಮಾಣದ ಆಕ್ಸಿಜನೇಟೆಡ್ ಬೆಡ್ಡುಗಳು ಸಾಕಾಗುವುದಿಲ್ಲ. ಈ ಪ್ರಮಾಣವನ್ನು 450ಕ್ಕೆ ಹೆಚ್ಚಿಸಿ. ಕೂಡಲೇ ಈ ಕುರಿತ ಪ್ರಸ್ತಾವನೆಯನ್ನು ಆರೋಗ್ಯ ಆಯುಕ್ತರಿಗೆ ಕಳಿಸಿ. ನಾನೂ ಅವರ ಜತೆ ಮಾತನಾಡಿ ಆದಷ್ಟು ಬೇಗ ಮಂಜೂರಾತಿ ಕೊಡಿಸುತ್ತೇನೆ. ಇದರ ಜತೆಗೆ ಜಿಲ್ಲೆಯ ಎಲ್ಲ ತಾಲ್ಲೂಕು ಆಸ್ಪತ್ರೆಗಳಲ್ಲೂ ಇಂಥ ಬೆಡ್ಡಿನ ವ್ಯವಸ್ಥೆ ಆಗಲೇಬೇಕು ಎಂದು ಡಿಸಿ ಅವರಿಗೆ ಸೂಚಿಸಿದರು.

ಬೆಡ್ ಪಡೆಯಲು ಸೂಚನೆ:

ಜಿಲ್ಲೆಯಲ್ಲಿ 8 ವೈದ್ಯಕೀಯ ಕಾಲೇಜುಗಳಿವೆ. ಸಾಕಷ್ಟು ಖಾಸಗಿ ಆಸ್ಪತ್ರೆಗಳಿವೆ. ಹೀಗೆ ಕಾಲೇಜು, ಸರಕಾರಿ-ಖಾಸಗಿ ಆಸ್ಪತ್ರೆ ಸೇರಿ ಎಲ್ಲೆಡೆ ಕನಿಷ್ಟ 8 ಸಾವಿರಕ್ಕೂ ಹೆಚ್ಚು ಬೆಡ್ಡುಗಳಿವೆ. ಕೂಡಲೇ ಇವರಿಂದ ಅವುಗಳನ್ನು ಸರಕಾರದ ವಶಕ್ಕೆ ಪಡೆದುಕೊಳ್ಳಬೇಕು. ತತ್;ಕ್ಷಣವೇ ಆಯಾ ಮ್ಯಾನೇಜುಮೆಂಟುಗಳ ಜತೆ ಮಾತನಾಡಿ ಅಗ್ರಿಮೆಂಟ್ ಮಾಡಿಕೊಳ್ಳಿ ಎಂದು ಜಿಲ್ಲಾಧಿಕಾರಿಗೆ ಡಿಸಿಎಂ ಸೂಚಿಸಿದರು.

ಸರಕಾರಿ, ಖಾಸಗಿ ಯಾವುದೇ ಆಸ್ಪತ್ರೆ ಇರಲಿ, ಸರ್ಕಾರದಿಂದ ಶಿಫಾರಸ್ಸಾದ ರೋಗಿಗಳಿಗೆ ಚಿಕಿತ್ಸೆ ಸಂಪೂರ್ಣ ಉಚಿತ. ಖಾಸಗಿ ಆಸ್ಪತ್ರೆಗಳಿಗೆ ಆ ವೆಚ್ಚವನ್ನು ಸರಕಾರವೇ ಭರಿಸುತ್ತದೆ. ಯಾರೂ ಕೂಡ ರೋಗಿಗಳಿಂದ ಹಣ ಪಡೆಯುವಂತಿಲ್ಲ. ಮುಖ್ಯವಾಗಿ ಗ್ರಾಮೀಣ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ರೋಗಿಗಳನ್ನು ನೇರವಾಗಿ ಚಿಕಿತ್ಸೆ ಲಭ್ಯವಿರುವ ಆಸ್ಪತ್ರೆಗಳಿಗೇ ಕಳಿಸಬೇಕು. ವಿನಾಕಾರಣ ರೋಗಿಯನ್ನು ಸುತ್ತಿಸಬಾರದು.

ಆಸ್ಪತ್ರೆಗೆ ಬರುವ ರೋಗಿಗೆ ಕೂಡಲೇ ಬೆಡ್ ಹಂಚಿಕೆಯಾಗಬೇಕು ಎಂದು ಅವರು ಸಲಹೆ ನೀಡಿದರು. ಇದೇ ವೇಳೆ ಜಿಲ್ಲೆಯ ಕೋವಿಡ್ ಕೇರ್ ಸೆಂಟರುಗಳಲ್ಲಿ 250 ಹಾಸಿಗೆಗಳು ಸಿದ್ಧವಾಗಿದ್ದು, ಕೆಲವೇ ದಿನಗಳಲ್ಲಿ 3,800 ಹಾಸಿಗೆಗಳು ಲಭ್ಯವಾಗಲಿವೆ ಎಂಬ ಅಂಶವನ್ನು ಜಿಲ್ಲಾಧಿಕಾರಿಯವರು ಡಿಸಿಎಂ ಗಮನಕ್ಕೆ ತಂದರು.

ಡ್ಯಾಷ್’ಬೋರ್ಡ್ ವ್ಯವಸ್ಥೆಗೆ ಸೂಚನೆ:

ಕೋವಿಡ್ ನಿರ್ವಹಣೆಯನ್ನು ಪರಿಣಾಮಕಾರಿಯಾಗಿ ಮಾಡಬೇಕಾದರೆ ಡ್ಯಾಷ್’ಬೋರ್ಡ್ ವ್ಯವಸ್ಥೆಯನ್ನು ಉತ್ತಮವಾಗಿ ಮಾಡಿಕೊಳ್ಳಬೇಕು. ಎಲ್ಲಿ ಬೆಡ್ಡುಗಳಿವೆ? ರೋಗಿಗಳು ಎಷ್ಟಿದ್ದಾರೆ? ಮೂಲಸೌಕರ್ಯಗಳ ವ್ಯವಸ್ಥೆ ಇತ್ಯಾದಿ ಸೇರಿದಂತೆ ಎಲ್ಲವೂ ಈ ಡ್ಯಾಷ್’ಬೋರ್ಡ್ ನಲ್ಲೇ ಸಿಗಬೇಕು. ಯಾವುದೇ ವ್ಯಕ್ತಿಗೆ ಸೋಂಕು ಪಾಸಿಟೀವ್ ಬಂದರೆ ಆ ವಿಷಯವನ್ನು ಜನರಿಗೆ ತಿಳಿಸಿ. ಆಗ ಜನರಲ್ಲಿ ಆತಂಕ, ಗೊಂದಲ ತಪ್ಪುತ್ತದೆ. ಜತೆಯಲ್ಲೇ ನಾನ್ ಕೋವಿಡ್ ರೋಗಿಗಳಿಗೆ ಆದ್ಯತೆಯ ಮೇರೆಗೆ ಚಿಕಿತ್ಸೆ ಸಿಗುವಂತೆ ಆಗಬೇಕು. ಸೆಂಟ್ರಲೈಸ್ಡ್ ರಿಪೋರ್ಟಿಂಗ್ ಸಿಸ್ಟಂ ಅನ್ನು ಅಳವಡಿಸಿಕೊಳ್ಳಬೇಕು ಎಂದು ಉಪ ಮುಖ್ಯಮಂತ್ರಿ ಹೇಳಿದರು.

ಜಿಲ್ಲೆಯಲ್ಲಿ ಸದ್ಯಕ್ಕೆ 59 ಆಂಬುಲೆನ್ಸುಗಳಿದ್ದು, ಮತ್ತಷ್ಟು ಖರೀದಿಸಿ, ಹೆಚ್ಚುವರಿಯಾಗಿ ಚಾಲಕರನ್ನು ನೇಮಿಸಿಸಕೊಳ್ಳಿ. ಊಟ, ಔಷಧಿ, ಪಿಪಿಎ ಕಿಟ್ಟುಗಳು ಕೊರತೆಯಾಗದಂತೆ ನೋಡಿಕೊಳ್ಳಿ. ಹೋಮ್ ಕೇರ್ ಬಗ್ಗೆ ಮತ್ತಷ್ಟು ಅರಿವು ಮೂಡಿಸಿ ಎಂದು ಅವರು ಸೂಚಿಸಿದರು. ಈಗಾಗಲೇ ಜಿಲ್ಲೆಯಾದ್ಯಂತ 430 ಜನರು ಹೋಮ್ ಕೇರ್’ಗಳಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಅನೇಕರು ತಮ್ಮ ಮನೆಗಳಲ್ಲಿಯೇ ಚಿಕಿತ್ಸೆ ಪಡೆಯುವ ಒಲವು ತೋರುತ್ತಿದ್ದಾರೆಂದು ಡಿಸಿ ಸಿಂಧೂ ಅವರು ಮಾಹಿತಿ ನೀಡಿದರು.ಇದರ ಜತೆಯಲ್ಲೇ ಸೋಂಕಿತರ ಪರೀಕ್ಷೆಯ ಪ್ರಮಾಣವನ್ನು ಹೆಚ್ಚು ಮಾಡುವಂತೆ ಡಿಸಿಎಂ ಸೂಚಿಸಿದರು.

ಸದ್ಯಕ್ಕೆ ದಿನವೊಂದಕ್ಕೆ 750 ಟೆಸ್ಟ್ ಆಗುತ್ತಿದೆ. ಈವರೆಗೂ 38 ಸಾವಿರ ಜನರಿಗೆ ಪರೀಕ್ಷೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

Comments are closed.