ಕರಾವಳಿ

ಉಡುಪಿ ಜಿಲ್ಲೆಯಲ್ಲಿ ಮಳೆಗೆ ಮೊದಲ ಬಲಿ-ಹೊಸಂಗಡಿಯಲ್ಲಿ ನೀರಿನಲ್ಲಿ ಕೊಚ್ಚಿ ಹೋಗಿ ವ್ಯಕ್ತಿ ಸಾವು

Pinterest LinkedIn Tumblr

ಕುಂದಾಪುರ: ಕಳೆದ 2 ದಿನಗಳ ಹಿಂದೆ ಸುರಿಯುತ್ತಿದ್ದ ಮಳೆಯ ರಭಸಕ್ಕೆ ನದಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದ ಹೊಸಂಗಡಿ ಗ್ರಾಮದ ಕಂಠಗದ್ದೆ ಎಂಬಲ್ಲಿನ ವಿಠಲ ಗೊಲ್ಲ (42) ಎನ್ನುವವರ ಶವ ಗುರುವಾರ ಪತ್ತೆಯಾಗಿದೆ.

ತಾಲ್ಲೂಕಿನ ಹೊಸಂಗಡಿ ಗ್ರಾಮದ ಕಂಠಗದ್ದೆ ಎಂಬಲ್ಲಿನ ಕೂಲಿ ಕಾರ್ಮಿಕ ವಿಠಲ ಗೊಲ್ಲ ಬುಧವಾರ ಮಧ್ಯಾಹ್ನ ಮನೆ ಸಮೀಪ ಹರಿಯುವ ಹೊಳೆ ಬದಿಗೆ ಮೂತ್ರ ವಿಸರ್ಜನೆಗೆಂದು ಹೋಗಿದ್ದರು. ಈ ವೇಳೆ ಹೊಳೆ ದಂಡೆಯ ಸಮೀಪದಲ್ಲಿನ ಕಲ್ಲಿನ ಮೇಲೆ ಆಕಸ್ಮಿಕವಾಗಿ ಕಾಲು ಇಟ್ಟಾಗ ಮಣ್ಣು ಸಡಿಲಗೊಂಡು, ನಿಯಂತ್ರಣ ತಪ್ಪಿ ರಭಸವಾಗಿ ಹರಿಯುತ್ತಿದ್ದ ಹೊಳೆಗೆ ಬಿದ್ದ ಕಾರಣದಿಂದ ವಿಠಲ ಗೊಲ್ಲ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದರು.

ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದ ಅವರ ಪತ್ತೆಗಾಗಿ ಸಾಕಷ್ಟು ಹುಡುಕಾಟ ನಡೆಸಿದ್ದರು ಪತ್ತೆಯಾಗಿರಲಿಲ್ಲ. ಗುರುವಾರ ಮನೆಯಿಂದ 3 ಕಿ. ಮೀ ದೂರದಲ್ಲಿನ ಶಂಕರನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿಯ ಕೆರೆಕಟ್ಟೆ ಬಳಿಯಲ್ಲಿ ಅವರ ಶವ ಪತ್ತೆಯಾಗಿದೆ. ಮೃತರಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ.

ಕಳೆದ ಕೆಲವು ದಿನಗಳಿಂದ ಆರಂಭವಾಗಿರುವ ಈ ಬಾರಿಯ ಮಳೆಗಾಲಕ್ಕೆ ಜಿಲ್ಲೆಯಲ್ಲಿ ಮೊದಲ ಬಲಿಯಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದವರು, ಜಿ.ಪಂ ಸದಸ್ಯ ರೋಹಿತ್ ಶೆಟ್ಟಿ ಮೊದಲಾದವರು ಭೇಟಿ ನೀಡಿದ್ದಾರೆ.

ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.