ಮಂಗಳೂರು, ಜುಲೈ.05 : ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಮಂಗಳೂರಿನ ಹೊರವಲಯದ ಗುರುಪುರ ಕೈಕಂಬದ ಬಂಗ್ಲಗುಡ್ಡೆ ಎಂಬಲ್ಲಿ ಗುಡ್ಡ ಕುಸಿತ ಉಂಟಾಗಿದ್ದು, ಇಬ್ಬರು ಮಕ್ಕಳು ಮಣ್ಣಿನಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ಒಂದು ಮನೆ ಕುಸಿತದ ಬಳಿಕ ಆ ಮನೆಯ ಮೇಲಿನ ಭಾಗದಲ್ಲಿ ಇದ್ದ ಮತ್ತೊಂದು ಮನೆಯೂ ಕುಸಿದಿದೆ. ಮೊದಲು ಧರೆಶಾಯಿಯಾದ ಮನೆಯಲ್ಲಿದ್ದ ಇಬ್ಬರು ಮಣ್ಣಿನಡಿ ಸಿಲುಕಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಇನ್ನೂ ಎಂಟು ಮನೆಗಳು ಅಪಾಯದಲ್ಲಿದೆ ಎಂದು ಹೇಳಲಾಗಿದೆ. ನಿರಂತರವಾಗಿ ಗುಡ್ಡ ಕುಸಿಯುತ್ತಿದ್ದು ಸ್ಥಳೀಯರು ಮಣ್ಣು ತೆರವು ಗೊಳಿಸುತ್ತಿದ್ದಾರೆ. ಮಣ್ಣಿನ ಸಿಲುಕಿರುವವರ ಹೊರತೆಗೆಯಲು ಪ್ರಯತ್ನಿಸುತ್ತಿದ್ದಾರೆ.
ದ.ಕ.ಜಿಲ್ಲೆಯ ಮಂಗಳೂರಿನ ಹೊರವಲಯದಲ್ಲಿರುವ ಗುರುಪುರ ಕೈಕಂಬದ ಬಂಗ್ಲಗುಡ್ಡೆಯಲ್ಲಿ ಇಂದು ಮಧ್ಯಾಹ್ನ 2:30 ರ ಸುಮಾರಿಗೆ ಈ ಘಟನೆ ಸಂಭವಿಸಿದ್ದು ನಾಲ್ಕು ಮನೆಗಳು ನೆಲಸಮವಾಗಿವೆ ಎನ್ನಲಾಗಿದೆ. ಗುಡ್ಡ ಕುಸಿತದಲ್ಲಿ ಇಬ್ಬರು ಮಕ್ಕಳು ಮಣ್ಣಿನಡಿ ಸಿಲುಕಿದ್ದು ಎನ್ಡಿಆರ್ಎಫ್ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಈ ಮಕ್ಕಳು 12ರಿಂದ 16 ವರ್ಷದೊಳಗಿನ ಮತ್ತು 8ರಿಂದ10 ವರ್ಷದ ಓಲಗಿನ ಬಾಲಕರಾಗಿದ್ದು ಅವರು ಮಾವನ ಮನೆಗೆ ಬಂದಿದ್ದರು ಎನ್ನಲಾಗಿದೆ.
ಸದ್ಯಕ್ಕೆ,ಮನೆಗಳಲ್ಲಿ ಇದ್ದವರ ರಕ್ಷಣೆ ಮಾಡಲಾಗಿದೆ. ಇದೀಗ, ಇಬ್ಬರು ಬಾಲಕರನ್ನ ರಕ್ಷಿಸಲು ಕಾರ್ಯಾಚರಣೆ ಭರದಿಂದ ಸಾಗಿದೆ. ಸುಮಾರು 25 ಅಡಿಯಷ್ಟು ಮಣ್ಣು ಕುಸಿದಿದೆ ಎಂದು ಅಗ್ನಿಶಾಮಕ ತಂಡದ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಗುಡ್ಡ ಕುಸಿಯುವಾಗ ಮನೆಯಿಂದ ಅಲ್ಲಿನ ಜನರು ಹೊರಗೆ ಓಡಿಬಂದಿದ್ದಾರೆ. ಆದರೆ, ಈ ವೇಳೆ ಮಕ್ಕಳನ್ನು ಬಿಟ್ಟು ಬಂದಿದ್ದರು ಎಂದು ತಿಳಿದುಬಂದಿದೆ. ಜೊತೆಗೆ ನೀರಿನ ಸೆಲೆ ಹೆಚ್ಚಾಗಿ ಮಣ್ಣು ಸಡಿಲವಾಗಿ ಗುಡ್ಡ ಕುಸಿದಿದೆ ಎಂಬ ಮಾಹಿತಿ ದೊರೆತಿದೆ.
ಗುಡ್ಡ ಕುಸಿದಿರುವ ಜಾಗ ಸರ್ಕಾರಿ ಜಮೀನಾಗಿದ್ದು ಇಲ್ಲಿ ಬಡವರಿಗೆ ಸೈಟ್ಗಳನ್ನು ನೀಡಲಾಗಿತ್ತು, 30 ಮನೆಗಳನ್ನು ಬಡವರು ನಿರ್ಮಿಸಿಕೊಂಡಿದ್ದರು, ಸುಮಾರು ಹತ್ತು ವರ್ಷಗಳಿಂದಲೂ ಇಲ್ಲಿಯೇ ವಾಸವಾಗಿದ್ದರು ಎನ್ನಲಾಗಿದೆ.
15 ಮನೆಯ ಜನರನ್ನು ಸ್ಥಳಾಂತರಿಸಲು ಸೂಚನೆ ನೀಡಲಾಗಿದ್ದು ದುರ್ಘಟನೆ ನಡೆದ ಸ್ಥಳದಿಂದ ಪೊಲೀಸರು ಜನರನ್ನ ದೂರ ಕಳುಹಿಸುವ ಮೂಲಕ ಹೆಚ್ಚಿನ ಅಪಾಯ ಸಂಭವಿಸದಂತೆ ಮುನ್ನೆಚ್ಚರಿಕೆ ತೆಗೆದುಕೊಂಡಿದ್ದಾರೆ. ರಕ್ಷಣಾ ಕಾರ್ಯಕ್ಕೆ 3 ಜೆಸಿಬಿಗಳನ್ನು ಬಳಸಿಕೊಳ್ಳಲಾಗಿದೆ.
ಸುಮಾರು 200 ರಿಂದ 250 ರಷ್ಟು ಮಂದಿ ಸ್ಥಳದಲ್ಲಿ ಸೇರಿದ್ದು ಸಾರ್ವಜನಿಕರು ಸ್ಥಳಕ್ಕೆ ಬರದಂತೆ ಪೊಲೀಸರು ತೆರಳಿ ಎಚ್ಚರಿಕೆ ನೀಡಿದ್ದಾರೆ. ಹಾಗೆಯೇ ಅಲ್ಲಿ ವಾಸವಿರುವವರನ್ನು ಸ್ಥಳಾಂತರ ಮಾಡುವಂತಹ ಕ್ರಮವನ್ನು ಕೂಡಾ ಕೈಗೊಳ್ಳಲಾಗಿದೆ.
ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಭೇಟಿ ನೀಡಿ ಮಾಹಿತಿ ಪಡೆದರು. ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲು ಹಾಗೂ ಮಾಜಿ ಸಚಿವ ಯು.ಟಿ. ಖಾದರ್ ಸಹ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Comments are closed.