ಕರಾವಳಿ

ಪಾಳು ಬಿಟ್ಟ ಜಮೀನುಗಳಲ್ಲಿ ಯುವ ರೈತರ ಗುಂಪಿನ ಮೂಲಕ ಭತ್ತದ ಕೃಷಿ ಬಗ್ಗೆ ಸಮಾಲೋಚನೆ

Pinterest LinkedIn Tumblr

ಮಂಗಳೂರು ಜುಲೈ 05 : ಭತ್ತದ ಬೆಳೆ ಕಡೆಮೆ ಆಗುತ್ತಿರುವ ಈ ಅವಧಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನಲ್ಲಿ ಒಂದು ಹೊಸ ಪ್ರಯತ್ನವನ್ನು ಕೈಗೊಳ್ಳಲಾಗಿದೆ.

ಈ ಹಿಂದೆ ಮಂಗಳೂರು ತಾಲೂಕಿನಲ್ಲಿ ಒಟ್ಟು ಭತ್ತ ಬೆಳೆಯುವ ಕ್ಷೇತ್ರ 10,000 ಹೆಕ್ಟೇರ್ ಇದ್ದು, ಈಗ ಕೇವಲ 4600 ಹೆಕ್ಟೇರ್‍ಗಳಲ್ಲಿ ಬೆಳೆಯಲಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲಿಯಲ್ಲಿ ರೈತರು ಭತ್ತದ ಬೆಳೆ ಲಾಭದಾಯಕವಲ್ಲ ಹಾಗೂ ಕೂಲಿ ಆಳುಗಳ ಸಮಸ್ಯೆಯಿಂದ ಅಡಿಕೆ ಹಾಗೂ ತೆಂಗು ಬೆಳೆಗಳಿಗೆ ಮೊರೆ ಹೋಗುತ್ತಿದ್ದಾರೆ, ಆದರೆ ರೈತರು ಭತ್ತ ಬೆಳೆಯದಿದ್ದರೆ ಜನರ ಹಸಿವನ್ನು ನಿವಾರಿಸುವವರು ಯಾರು?

ಆದುದರಿಂದ ಈ ನಿಟ್ಟಿನಲ್ಲಿ ಕೃಷಿ ಇಲಾಖೆಯು 100 ಎಕರೆ ಪಾಳು ಬಿಟ್ಟ ಜಮೀನುಗಳನ್ನು ಗುರುತಿಸಿ, ರೈತರ ಗುಂಪುಗಳ ಸಹಾಯದಿಂದ ಭತ್ತ ಬೆಳೆಯುವ ಕ್ಷೇತ್ರವನ್ನು ಹೆಚ್ಚಿಸುವ ಪ್ರಯತ್ನದಲ್ಲಿ ತೊಡಗಿದೆ. ಈಗಾಗಲೆ ಸುರತ್ಕಲ್ ಹೋಬಳಿಯ ಪ್ರಗತಿ ಪರ ರೈತ ಸದಾಶಿವ ಶೆಟ್ಟಿ ಇವರ ಮಾರ್ಗದರ್ಶನದಲ್ಲಿ ಯುವ ರೈತರ ಗುಂಪೊಂದನ್ನು ರಚಿಸಲಾಗಿದೆ.

ಈ ಗುಂಪಿನಲ್ಲಿ ಇರುವ ರೈತರು ಪಾಳು ಬಿಟ್ಟ ಭತ್ತದ ಗದ್ದೆಯಲ್ಲಿ ಯಾಂತ್ರೀಕೃತವಾಗಿ ಭತ್ತದ ಕೃಷಿಯನ್ನು ಕೈಗೊಳ್ಳಲು ಮುಂದಾಗಿದ್ದಾರೆ. ಇವರ ಚಟುವಟಿಕೆಗಳನ್ನು ವೀಕ್ಷಿಸಲು ದ.ಕ ಜಿಲ್ಲಾ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ. ಸೆಲ್ವಮಣಿ ಆರ್. ಮಂಗಳೂರು ತಾಲೂಕಿನ ಎಕ್ಕಾರು ಗ್ರಾಮದಲ್ಲಿ ರೈತರೊಂದಿಗೆ ಸಮಾಲೋಚನೆ ನಡೆಸಿದರು.

ನಂತರ ಪಾಳುಬಿಟ್ಟ ಭೂಮಿಯಲ್ಲಿ ಭತ್ತ ಕೃಷಿ ನಾಟಿ ಯಾಂತ್ರೀಕೃತವಾಗಿ ಹಾಗೂ ಸಾಂಪ್ರದಾಯಕವಾಗಿ ಮಾಡಿದ ಬಗ್ಗೆ ಅತಿಕಾರಿಬೆಟ್ಟು ಗ್ರಾಮದಲ್ಲಿ ವೀಕ್ಷಿಸಿದರು. ಭತ್ತದ ನಾಟಿಯನ್ನು ಯಂತ್ರದಲ್ಲಿ ಮಾಡಿದಲ್ಲಿ ಕೇವಲ 2.5 ಗಂಟೆಯಲ್ಲಿ 1 ಎಕರೆ ಗದ್ದೆ ನಾಟಿ ಕಾರ್ಯ ಪೂರ್ಣಗೊಳ್ಳುವುದನ್ನು ನೋಡಿ ಶ್ಲಾಘಿಸಿದರು.

ಸಾಂಪ್ರದಾಯಕವಾಗಿ ಅಂದರೆ ಬೀಜ ಎರಚಿ ಮಾಡುವ ಭತ್ತದ ಕೃಷಿಯಲ್ಲಿ ಭತ್ತದೆ ಗಿಡಗಳು ಸಮಾನವಾಗಿ ಬೆಳೆಯುವುದಿಲ್ಲ ಹಾಗೂ ಕಳೆಗಳ ನಿರ್ವಹಣೆ ಕಷ್ಟ ಸಾಧ್ಯವಾಗುವುದು ಮತ್ತು ಪಿಲ್ಲೆಗಳು ಹೆಚ್ಚಿನ ಮಟ್ಟಿಗೆ ಬಾರದೆ ಇರುವುದರಿಂದ ಇಳುವರಿಯ ಪ್ರಮಾಣ ಗಣನೀಯವಾಗಿ ಕಡಿಮೆ ಆಗುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ.

ಆದ್ದರಿಂದ ಸಾಲು ನಾಟಿ ಅಥವಾ ಯಾಂತ್ರೀಕೃತ ನಾಟಿ ಮಾಡುವುದರಿಂದ ಹೆಚ್ಚಿನ ಇಳುವರಿಯನ್ನು ಪಡೆಯಬಹುದು ಹಾಗೂ ಕೂಲಿ ಆಳುಗಳ ಸಮಸ್ಯೆಯನ್ನು ಸಹ ನಿವಾರಿಸಬಹುದು. ರೈತರು ಗದ್ದೆಗಳನ್ನು ಪಾಳು ಬಿಡದೆ ಈ ಕೋವಿಡ್ ಸಮಯದಲ್ಲಿ ಆರ್ಥಿಕ ಮಟ್ಟವನ್ನು ಹೆಚ್ಚಿಸಲು ತಮ್ಮ ತಮ್ಮ ಗದ್ದೆಗಳನ್ನು ಉಳುಮೆಮಾಡಿ ಭತ್ತವನ್ನು ಬೆಳೆಯುವುದು ಉತ್ತಮ.

ಇದರಿಂದ ಭೂಮಿಯು ಫಲವತ್ತಾಗಿರುವುದಲ್ಲದೆ, ಸ್ವಂತ ಉಪಯೋಗಕ್ಕಾಗಿ ಅಕ್ಕಿಯು ಸಹ ಸಿಗುವುದು. ನವೀನ್ ಪ್ರಭು, ಅತೀಕಾರಿಬೆಟ್ಟು ಗ್ರಾಮ ಇವರು ಭತ್ತ ನಾಟಿಯಂತ್ರವನ್ನು ಕೃಷಿ ಇಲಾಖೆಯಿಂದ ಸಹಾಯಧನದಲ್ಲಿ ಪಡೆದು ಯಾಂತ್ರೀಕೃತ ನಾಟಿಯಲ್ಲಿ ಭತ್ತದ ಕೃಷಿಯನ್ನು ಮಾಡುವುದನ್ನು ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯವರು ವೀಕ್ಷಿಸಿದರು.

ಈ ರೈತರು ತಮ್ಮ ಜಮೀನಿನಲ್ಲಿ ಅಲ್ಲದೆ ಬೇರೆ ರೈತರಿಗೆ ಟ್ರೇನಲ್ಲಿ ನರ್ಸರಿಯನ್ನು ತಯಾರುಮಾಡಿ ಅವರ ಜಮೀನಿನಲ್ಲಿ ಯಾಂತ್ರೀಕೃತ ನಾಟಿಯನ್ನು ಸಹ ಬಾಡಿಗೆಗೆ ಮಾಡಿಕೊಡುತ್ತಿದ್ದು, ಇಚ್ಛೆ ಇದ್ದಲ್ಲಿ ರೈತರು ಲಾಭದಾಯಕವಾಗಿ ಭತ್ತದ ಕೃಷಿಯನ್ನು ಮಾಡಬಹುದು ಎಂದು ತೋರಿಸಿರುತ್ತಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭತ್ತದ ಕೃಷಿ ನಾಶವಾಗಲು ಬಿಡದೆ ರೈತರು ಭತ್ತದ ಕೃಷಿಯಲ್ಲಿ ತೊಡಗಿಸಿಕೊಂಡು ಕೃಷಿ ಇಲಾಖೆಯಿಂದ ಸಿಗುವ ಎಲ್ಲಾ ಸವಲತ್ತುಗಳನ್ನು ಹಾಗೂ ತಾಂತ್ರಿಕತೆಗಳನ್ನು ಪಡೆದು ಲಾಭದಾಯಕವಾಗಿ ಭತ್ತದ ಕೃಷಿಯನ್ನು ಮಾಡುವುದು ಉತ್ತಮ ಎಂದು ಮಂಗಳೂರು ತಾಲೂಕು ಸಹಾಯಕ ಕೃಷಿ ನಿರ್ದೇಶಕರೆ ಪ್ರಕಟಣೆ ತಿಳಿಸಿದೆ.

Comments are closed.