ಮಂಗಳೂರು, ಜುಲೈ.02 : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಮತ್ತೊಮ್ಮೆ ದಾಖಲೆಯ ಕೊರೋನಾ ಪ್ರಕರಣ ಪತ್ತೆಯಾಗಿದ್ದು, ಇಂದು ಮತ್ತೆ 90 ಮಂದಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಕರ್ನಾಟಕದಲ್ಲಿ ಪ್ರತಿದಿನದ ಕೊರೋನ ಪಾಸಿಟಿವ್ ಪ್ರಕರಣಗಳ ಪೈಕಿ ಇಂದು ಮತ್ತೊಮ್ಮೆ ಅತೀ ಹೆಚ್ಚು ಪ್ರಕರಣಗಳು ವರದಿಯಾಗಿದ್ದು, ಇಂದು ಮತ್ತೆ ಒಂದೇ ದಿನ ಬರೋಬ್ಬರಿ 1502 ಮಂದಿಯಲ್ಲಿ ಕೊರೋನ ವೈರಸ್ ಸೋಂಕು ದೃಢಪಟ್ಟಿದೆ. ಈ ಮೂಲಕ ರಾಜ್ಯದಲ್ಲಿ ಇಂದು ಸೋಂಕಿತರ ಒಟ್ಟು ಸಂಖ್ಯೆ 18,016ಕ್ಕೆ ಏರಿಕೆಯಾಗಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂದು ಸಂಜೆ ಬಿಡುಗಡೆಗೊಳಿಸಿದ ಬುಲೆಟಿನ್ ನಲ್ಲಿ ರಾಜ್ಯದಲ್ಲಿ ಬುಧವಾರ ಒಂದೇ ದಿನ 1502 ಕೋವಿಡ್ ಪ್ರಕರಣಗಳು ಪಾಸಿಟಿವ್ ಬಂದಿರುವುದಾಗಿ ಮಾಹಿತಿ ನೀಡಿದೆ. ಇದರಲ್ಲಿ ದ.ಕ. ಜಿಲ್ಲೆಯಲ್ಲಿಬರೋಬ್ಬರಿ 90 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿರುವುದಾಗಿ ವರದಿಯಾಗಿದೆ.
ಸೋಂಕು ಖಚಿತಗೊಂಡ ಪ್ರಕರಣಗಳ ಪೈಕಿ ಬೆಂಗಳೂರು ನಗರ 889, ದಕ್ಷಿಣ ಕನ್ನಡ 90, ಮೈಸೂರು 68, ಬಳ್ಳಾರಿ 65, ಧಾರವಾಡ 47, ವಿಜಯಪುರ 39, ರಾಮನಗರ 39, ಕಲಬುರಗಿ 38, ಬೀದರ್ 32, ತುಮಕೂರು 26, ಶಿವಮೊಗ್ಗ 23, ಮಂಡ್ಯ 19, ಉತ್ತರ ಕನ್ನಡ 17, ಹಾಸನ 15, ಉಡುಪಿ 14, ಕೋಲಾರ 12, ರಾಯಚೂರು 11, ಬಾಗಲಕೋಟೆ 10, ದಾವಣಗೆರೆ 8, ಯಾದಗಿರಿ 7, ಬೆಳಗಾವಿ 7, ಕೊಡಗು 6, ಬೆಂಗಳೂರು ಗ್ರಾಮಾಂತರ 5, ಹಾವೇರಿ, ಕೊಪ್ಪಳದಲ್ಲಿ ತಲಾ 4, ಚಿತ್ರದುರ್ಗದಲ್ಲಿ 3, ಗದಗ 2, ಚಿಕ್ಕಮಗಳೂರು ಮತ್ತು ಚಿಕ್ಕಬಳ್ಳಾಪುರದಲ್ಲಿ ತಲಾ 1 ಪ್ರಕರಣ ಪಾಸಿಟಿವ್ ಬಂದಿದೆ.
ದ.ಕ. ಜಿಲ್ಲೆಯಲ್ಲಿ ಒಂದು ಸಾವು :
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾಕ್ಕೆ ಜು.2 ರ ಗುರುವಾರ ಮತ್ತೊಂದು ಬಲಿಯಾಗಿದೆ. ಬಂಟ್ವಾಳ ತಾಲೂಕಿನ ಕಲ್ಕಡ್ಕ ನಿವಾಸಿಯಾಗಿರುವ 49 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 18ಕ್ಕೇರಿಕೆಯಾಗಿದೆ.
ಕಳೆದ 20 ದಿನಗಳಿಂದ ಮನೆಯಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದರು. ಈ ಹಿನ್ನಲೆಯಲ್ಲಿ ಅವರನ್ನು ಶನಿವಾರ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಿಡ್ನಿ, ಟಿ.ಬಿ.ಹಾಗೂ ಲಿವರ್ ನ ಸಮಸ್ಯೆಯಿಂದ ಬಳಲುತ್ತಿದ್ದ ಇವರಲ್ಲಿ ಸೊಂಕು ಪತ್ತೆಯಾಗಿತ್ತು.
ದ.ಕ. ಜಿಲ್ಲೆಯಲ್ಲಿ ಕೊರೋನ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಜಿಲ್ಲೆಯಲ್ಲಿ ಇದುವರೆಗಿನ ಒಟ್ಟು ಸೋಂಕಿತರ ಸಂಖ್ಯೆ 923ಕ್ಕೆ ಏರಿಕೆಯಾಗಿದೆ. ಕೊರೋನ ಸೋಂಕು ಮಕ್ಕಳು, ವೃದ್ಧರಲ್ಲೇ ಹೆಚ್ಚು ಕಾಣಿಸಿಕೊಳ್ಳುತ್ತಿರುವುದು ಸಾರ್ವಜನಿಕ ವಲಯದಲ್ಲಿ ಆತಂಕಕ್ಕೆ ಕಾರಣವಾಗಿದೆ.
ದುಬೈನಿಂದ ಬಂದಿದ್ದ ಮೂರು ವರ್ಷದ ಬಾಲಕ, ಪಿ-11386ರ ಸಂಪರ್ಕಿತ ಎರಡು, ಮೂರು, ಆರು, ಎಂಟು, 13 ವರ್ಷದ ಬಾಲಕರು ಹಾಗೂ 12 ವರ್ಷದ ಬಾಲಕಿ, ಪಿ-12382ರ ಸಂಪರ್ಕಿತ ಏಳು ವರ್ಷದ ಬಾಲಕಿ, ಐಎಲ್‌ಐ ಪ್ರಕರಣದಲ್ಲಿ 15 ವರ್ಷದ ಬಾಲಕಿ, ಕಾಂಟ್ಯಾಕ್ಟ್ ಅಂಡರ್ ಟ್ರೇಸಿಂಗ್‌ನಲ್ಲಿ 15 ವರ್ಷದ ಬಾಲಕಿಗೆ ಕೊರೋನ ಸೋಂಕು ತಗುಲಿದೆ.
ಸೋಂಕಿತರ ಪೈಕಿ 15 ಮಂದಿ ಕುವೈತ್, ಸೌದಿ ಅರೇಬಿಯ, ದುಬೈಯಿಂದ ಬಂದವರು. ಐಎಲ್‌ಐ 16, ಎಸ್‌ಎಆರ್‌ಐ ಎಂಟು, ಮೂಲ ಪತ್ತೆಯಾಗದ 17, ಪ್ರಾಥಮಿಕ ಸಂಪರ್ಕ ಹೊಂದಿದ 31 ಮಂದಿಗೆ ಸೋಂಕು ತಗುಲಿದೆ. 33 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ತಿಳಿಸಿದ್ದಾರೆ.
ವೃದ್ಧರನ್ನೂ ಕೊರೋನ ಸೋಂಕು ಇನ್ನಿಲ್ಲದಂತೆ ಕಾಡುತ್ತಿದೆ. ಆರೋಗ್ಯ ಇಲಾಖೆಯ ಪ್ರಕಟಿಸಿದ ಬುಲೆಟಿನ್‌ನಲ್ಲಿ ಗುರುವಾರ 11 ವೃದ್ಧರಲ್ಲಿ ಸೋಂಕು ದೃಢಪಟ್ಟಿದೆ. ಐಎಲ್‌ಐ ಪ್ರಕರಣದ 75, 67, 62, 65 ವರ್ಷದ ಪುರುಷ, 68 ವರ್ಷದ ಹೆಂಗಸು ಹಾಗೂ ಎಸ್‌ಎಆರ್‌ಐ ಪ್ರಕರಣದಲ್ಲಿ 82 ವರ್ಷದ ಮಹಿಳೆ, 75, 75, 74, 65 ವರ್ಷದ ಪುರುಷರು, ಪಿ-10588ರ ಪ್ರಾಥಮಿಕ ಸಂಪರ್ಕದಲ್ಲಿದ್ದ 62 ವರ್ಷದ ಪುರುಷನಲ್ಲಿ ಸೋಂಕು ಇರುವುದು ಪತ್ತೆಯಾಗಿದೆ.
ರಾಜ್ಯದಲ್ಲಿ ಇಂದು 19 ಮಂದಿ ಕೊರೋನಾಕ್ಕೆ ಬಲಿ :
ಕರ್ನಾಟಕದಲ್ಲಿ ಕೊರೋನ ಸೋಂಕಿತರ ಸಂಖ್ಯೆಯಲ್ಲಿ ವ್ಯಾಪಕ ಹೆಚ್ಚಳವಾಗುತ್ತಿದೆ. ಸೋಂಕಿತರು ಸಾವನ್ನಪ್ಪುತ್ತಿರುವ ಪ್ರಕರಣದಲ್ಲೂ ಏರಿಕೆಯಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ 19 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಬಳ್ಳಾರಿ 4, ಬೆಂಗಳೂರು ನಗರ ಜಿಲ್ಲೆಯಲ್ಲಿ ತಲಾ 3, ದಕ್ಷಿಣ ಕನ್ನಡ, ಉಡುಪಿ, ಕೊಪ್ಪಳ, ಮೈಸೂರು, ಹಾಸನ, ತುಮಕೂರು, ಕರಬುರಗಿ, ಬೆಳಗಾವಿ, ಉತ್ತರ ಕನ್ನಡ, ಗದಗ ಜಿಲ್ಲೆಯಲ್ಲಿ ತಲಾ 1 ಒಂದು ಸಾವು ಸಂಭವಿಸಿದೆ. ಈ ಮೂಲಕ ಸಾವಿನ ಸಂಖ್ಯೆ 272ಕ್ಕೆ ಏರಿದೆ.
ಒಟ್ಟಾರೆ ರಾಜ್ಯದಲ್ಲಿ 18,016 ಕೊರೋನ ಸೋಂಕಿತರ ಪೈಕಿ 8,334 ಮಂದಿ ಸಂಪೂರ್ಣ ಗುಣಮುಖ ರಾಗಿದ್ದಾರೆ. ಇದರಲ್ಲಿ ಇಂದು ಒಂದೇ ದಿನ 271 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಉಳಿದಂತೆ ಇದುವರೆಗೆ 272 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದು, 9,406 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
Comments are closed.