ಕರಾವಳಿ

ಮುದ್ರಣ ಮಾಧ್ಯಮ ಸ್ಥಗಿತಗೊಳ್ಳುವ ಬಗ್ಗೆ ಆತಂಕ ಬೇಡ -ಪತ್ರಿಕೋದ್ಯಮದ ಭವಿಷ್ಯ ಸದೃಢ : ಸುರೇಶ್ ಬೆಳಗಜೆ

Pinterest LinkedIn Tumblr

ಮಂಗಳೂರು : ಮಾಧ್ಯಮ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳು ಸಂಭವಿಸುತ್ತಿದ್ದರೂ ಪತ್ರಿಕೋದ್ಯಮದ ಭವಿಷ್ಯ ಸದೃಢವಾಗಿದೆ. ಬಹುಮುಖ ಕೌಶಲಗಳ ಮೂಲಕ ಪ್ರತಿಭೆ ವಿಸ್ತಾರ ಮಾಡಿಕೊಂಡಾಗ ಅವಕಾಶಗಳಿಗೆ ಕೊರತೆ ಉಂಟಾಗುವುದಿಲ್ಲ ಎಂದು ಹಿರಿಯ ಪತ್ರಕರ್ತ ಸುರೇಶ್ ಬೆಳಗಜೆ ಅಭಿಪ್ರಾಯಪಟ್ಟರು.

ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಮಂಗಳೂರು ಪ್ರೆಸ್‌ಕ್ಲಬ್, ಪತ್ರಿಕಾ ಭವನ ಟ್ರಸ್ಟ್ ಸಹಯೋಗದಲ್ಲಿ ಬುಧವಾರ ಪತ್ರಿಕಾ ಭವನದಲ್ಲಿ ಆಯೋಜಿಸಿದ “ಪತ್ರಿಕಾ ದಿನಾಚರಣೆ ಹಾಗೂ ಬ್ರ್ಯಾಂಡ್ ಮಂಗಳೂರು ಪ್ರಶಸ್ತಿ ಪ್ರದಾನ” ಸಮಾರಂಭದಲ್ಲಿ ಅವರು “`ಪತ್ರಕರ್ತ, ಪತ್ರಿಕೋದ್ಯಮ ಮತ್ತು ಪ್ರಸ್ತುತತೆ” ಎಂಬ ವಿಷಯದಲ್ಲಿ ಉಪನ್ಯಾಸ ನೀಡಿದರು.

ಮುದ್ರಣ ಮಾಧ್ಯಮ ಮುಂದಿನ ದಿನಗಳಲ್ಲಿ ಸೀಮಿತ ಚೌಕಟ್ಟಿನಲ್ಲಿ ಮುಂದುವರಿಯಲಿದೆ. ಸಂಪೂರ್ಣ ಸ್ಥಗಿತಗೊಳ್ಳುವ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದವರು ಹೇಳಿದರು.

ಮಂಗಳೂರು ವಿವಿ ಪರಿಕ್ಷಾಂಗ ಕುಲಸಚಿವ ಡಾ.ಪಿ.ಎಲ್.ಧರ್ಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸವಾಲುಗಳ ನಡುವೆ ಮಾಹಿತಿಯನ್ನು ನೀಡುವ ಪತ್ರಕರ್ತರ ಸೇವೆ ಮಹತ್ತರ. ಇದು ಹೋಲಿಕೆ ಮಾಡಲಾಗದ ಬಹು ದೊಡ್ಡ ಕಾರ್ಯ ಎಂದರು.

ಮೆಸ್ಕಾಂ ಪ್ರಧಾನ ವ್ಯವಸ್ಥಾಪಕ ಎಚ್.ಕೆ.ಕೃಷ್ಣಮೂರ್ತಿ ಪತ್ರಕರ್ತ ಮುಹಮ್ಮದ್ ಅನ್ಸಾರ್ ಇನೋಳಿ ಅವರಿಗೆ *ಬ್ರ್ಯಾಂಡ್ ಮಂಗಳೂರು ಪ್ರಶಸ್ತಿ ಪ್ರದಾನ* ಮಾಡಿದರು.

ಬ್ರ್ಯಾಂಡ್ ಮಂಗಳೂರು ಪ್ರಶಸ್ತಿಯ ತೀರ್ಪುಗಾರರಲ್ಲೊಬ್ಬರಾದ ಸ್ಮಿತಾ ಶೆಣೈ ಅನಿಸಿಕೆ ವ್ಯಕ್ತಪಡಿಸಿದರು. ಜಿಲ್ಲಾವಾರ್ತಾಧಿಕಾರಿ ಖಾದರ್ ಷಾ, ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ ಉಪಸ್ಥಿತರಿದ್ದರು.

ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ವಂದಿಸಿದರು. ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಪಿ.ಬಿ.ಹರೀಶ್ ರೈ ಕಾರ್ಯಕ್ರಮ ನಿರೂಪಿಸಿದರು.

Comments are closed.