ಕರಾವಳಿ

ದ.ಕ. ಜಿಲ್ಲೆಯಲ್ಲಿ ಇಂದು ದಾಖಲೆಯ 97 ಮಂದಿಯಲ್ಲಿ ಕೊರೊನಾ ಪತ್ತೆ : ರಾಜ್ಯದಲ್ಲಿ 1,267 ಮಂದಿಗೆ ಪಾಸಿಟಿವ್ -16 ಮಂದಿ ಸಾವು

Pinterest LinkedIn Tumblr

ಮಂಗಳೂರು, ಜೂನ್. 26 ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಮತ್ತೊಮ್ಮೆ ದಾಖಲೆಯ ಕೊರೋನಾ ಪ್ರಕರಣ ಪತ್ತೆಯಾಗಿದ್ದು, ಇಂದು ಮತ್ತೆ 97 ಮಂದಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಕರ್ನಾಟಕದಲ್ಲಿ ಪ್ರತಿದಿನದ ಕೊರೋನ ಪಾಸಿಟಿವ್ ಪ್ರಕರಣಗಳ ಪೈಕಿ ಇಂದು ಅತೀ ಹೆಚ್ಚು ಪ್ರಕರಣಗಳು ವರದಿಯಾಗಿದ್ದು, ಇಂದು ಮತ್ತೆ ಒಂದೇ ದಿನ ಬರೋಬ್ಬರಿ 1,267 ಮಂದಿಯಲ್ಲಿ ಕೊರೋನ ವೈರಸ್ ಸೋಂಕು ದೃಢಪಟ್ಟಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂದು ಸಂಜೆ ಬಿಡುಗಡೆಗೊಳಿಸಿದ ಬುಲೆಟಿನ್ ನಲ್ಲಿ ರಾಜ್ಯದಲ್ಲಿ ಸೋಮವಾರ ಒಂದೇ ದಿನ 1,267 ಕೋವಿಡ್ ಪ್ರಕರಣಗಳು ಪಾಸಿಟಿವ್ ಬಂದಿರುವುದಾಗಿ ಮಾಹಿತಿ ನೀಡಿದೆ. ಇದರಲ್ಲಿ ದ.ಕ. ಜಿಲ್ಲೆಯಲ್ಲಿಬರೋಬ್ಬರಿ 97 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿರುವುದಾಗಿ ವರದಿಯಾಗಿದೆ.

ಸೋಂಕು ಖಚಿತಗೊಂಡ ಪ್ರಕರಣಗಳ ಪೈಕಿ ಬೆಂಗಳೂರು ನಗರ 783, ದಕ್ಷಿಣ ಕನ್ನಡ 97, ಬಳ್ಳಾರಿ 71, ಉಡುಪಿ 40, ಕಲಬುರಗಿ 34, ಹಾಸನ 31, ಗದಗ 30, ಬೆಂಗಳೂರು ಗ್ರಾಮಾಂತರ 27, ಮೈಸೂರು 18, ಧಾರವಾಡ 18, ಬಾಗಲಕೋಟೆ 17, ಉತ್ತರ ಕನ್ನಡ 14, ಹಾವೇರಿ 12, ಕೋಲಾರ 11, ಬೆಳಗಾವಿ 8, ಬೀದರ್ 7, ಚಿತ್ರದುರ್ಗ 7, ರಾಯಚೂರು 6, ಮಂಡ್ಯ 6, ದಾವಣಗೆರೆ 6, ವಿಜಯಪುರ 5, ಶಿವಮೊಗ್ಗ 4, ಕೊಡಗು 3, ಕೊಪ್ಪಳ 3, ಚಿಕ್ಕಮಗಳೂರು 3, ಚಿಕ್ಕಬಳ್ಳಾಪುರ 3, ತುಮಕೂರು 2 ಮತ್ತು ಯಾದಗಿರಿಯಲ್ಲಿ 1 ಪ್ರಕರಣ ಪಾಸಿಟಿವ್ ಬಂದಿದೆ.

ರಾಜ್ಯದಲ್ಲಿ ಇಂದು 16 ಮಂದಿ ಕೊರೋನಾಕ್ಕೆ ಬಲಿ:

ಕರ್ನಾಟಕದಲ್ಲಿ ಕೊರೋನ ಸೋಂಕಿತರ ಸಂಖ್ಯೆಯಲ್ಲಿ ವ್ಯಾಪಕ ಹೆಚ್ಚಳವಾಗುತ್ತಿದೆ. ಸೋಂಕಿತರು ಸಾವನ್ನಪ್ಪುತ್ತಿರುವ ಪ್ರಕರಣದಲ್ಲೂ ಏರಿಕೆಯಾಗುತ್ತಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ನಾಲ್ಕು, ದಕ್ಷಿಣ ಕನ್ನಡದಲ್ಲಿ ಮೂರು, ತುಮಕೂರು 2, ಬಾಗಲಕೋಟೆ 2, ಧಾರವಾಡ, ಹಾಸನ, ಮೈಸೂರು, ಬಳ್ಳಾರಿ, ಕಲಬುರಗಿಯಲ್ಲಿ ತಲಾ ಒಂದು ಸಾವು ಸಂಭವಿಸಿದ್ದು, ಒಟ್ಟು ಸಾವಿನ ಸಂಖ್ಯೆ 207ಕ್ಕೆ ಏರಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಒಟ್ಟಾರೆ ರಾಜ್ಯದಲ್ಲಿ 13,190 ಕೊರೋನ ಸೋಂಕಿತರ ಪೈಕಿ 7,507 ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆ. ಇದರಲ್ಲಿ ಇಂದು ಒಂದೇ ದಿನ 220 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಉಳಿದಂತೆ ಇದುವರೆಗೆ 207 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದು, 5,472 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ರಾಜ್ಯ ರಾಜಧಾನಿಯಲ್ಲಿ ದಾಖಲೆಯ 783 ಪ್ರಕರಣ :

ರಾಜ್ಯ ರಾಜಧಾನಿಯಲ್ಲಿ ರವಿವಾರ ದಾಖಲೆಯ 783 ಪ್ರಕರಣಗಳು ದೃಢಪಟ್ಟಿದ್ದು, ಸೋಂಕಿಗೆ ನಾಲ್ವರು ಮೃತಪಟ್ಟಿದ್ದಾರೆ. ಒಟ್ಟಾರೆ ಕೊರೋನ ಸೋಂಕಿತರ ಸಂಖ್ಯೆ 3,321ಕ್ಕೆ ಏರಿಕೆಯಾಗಿದ್ದು, 155 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಂಗಳೂರಿನಲ್ಲಿ ಬಿಬಿಎಂಪಿ ಸದಸ್ಯರು ಹಾಗೂ ಪೊಲೀಸ್ ಸಿಬ್ಬಂದಿಗೆ ಸೋಂಕು ತಗಲಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದು ಜನರಲ್ಲಿ ಆತಂಕ ಮೂಡಿಸಿದೆ.ಜೆ.ಜೆ. ನಗರದ ಕಾರ್ಪೋರೇಟರ್ ಗೆ ಕೊರೋನ ಸೋಂಕು ಕಾಣಿಸಿಕೊಂಡಿದ್ದು, ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಜೆ.ಜೆ ನಗರ ವಾರ್ಡ್ ಸದಸ್ಯರು ವಾರ್ಡ್ ನಲ್ಲಿ ಮತದಾರರೊಂದಿಗೆ ಬೆರೆತು ಮಾತನಾಡಿದ್ದರು. ಅ ವೇಳೆ ಅವರಿಗೆ ಸೋಂಕು ಕಾಣಿಸಿಕೊಂಡಿದೆ ಎನ್ನಲಾಗುತ್ತಿದೆ.

ನಗರದಲ್ಲಿ ಕೊರೋನ ಪ್ರಕರಣಗಳು ಹೆಚ್ಚುತ್ತಿದ್ದು, ಕಂಟೈನ್ಮೆಂಟ್ ವಲಯಗಳೂ ಹೆಚ್ಚಳವಾಗಿವೆ. 198 ವಾರ್ಡ್ ಗಳಿಗೂ ಸೋಂಕು ಹರಡಿದ್ದು, ಜನರು ಆತಂಕಕ್ಕೆ ಒಳಗಾಗಿದ್ದಾರೆ. ಜೂ. 20 ರಂದು 437 ಕಂಟೈನ್ಮೆಂಟ್ ವಲಯಗಳಿದ್ದು, ಶನಿವಾರ ವೇಳೆಗೆ 485 ವಲಯ ಗುರುತಿಸಲಾಗಿದೆ. ಬೆಂಗಳೂರು ಪೂರ್ವ, ಪಶ್ಚಿಮ, ದಕ್ಷಿಣ ವಲಯದಲ್ಲಿ ಹೆಚ್ಚಾಗಿ ಸೋಂಕಿತರು ಇರುವುದಾಗಿ ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ನಗರದಲ್ಲಿ 2,692 ಜನರು ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇಲ್ಲಿಯವರೆಗೆ 88 ಜನರು ಸೋಂಕಿಗೆ ಬಲಿಯಾಗಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿರುವ 31 ಜ್ವರ ಚಿಕಿತ್ಸಾಲಯಲ್ಲಿ ಒಟ್ಟು 17,012 ವ್ಯಕ್ತಿಗಳಿಗೆ ತಪಾಸಣೆ ಮಾಡಲಾಗಿದೆ.

ದ.ಕ. ಜಿಲ್ಲೆಯಲ್ಲಿ ಕೊರೋನಾಕ್ಕೆ ಮೂವರು ಬಲಿ :

ದ.ಕ. ಜಿಲ್ಲೆಯಲ್ಲಿ ರವಿವಾರ ಬರೋಬ್ಬರಿ 97 ಮಂದಿಗೆ ಕೊರೋನ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಇದುವರೆಗಿನ ಒಟ್ಟು ಸೋಂಕಿತರ ಸಂಖ್ಯೆ 673ಕ್ಕೆ ಏರಿಕೆಯಾಗಿದೆ.

ರವಿವಾರ ಒಂದೇ ದಿನ ಮೂವರು ಮೃತಪಟ್ಟಿದ್ದಾರೆ. ಸೋಂಕಿತರ ಸಂಖ್ಯೆಯಲ್ಲೂ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡುಬರುತ್ತಿದೆ. ಮೂಲ ಪತ್ತೆಯಾಗದೇ ಪಾಸಿಟಿವ್ ಕಾಣಿಸಿಕೊಳ್ಳುತ್ತಿರುವುದು ಕೊರೋನವು ಸಮುದಾಯಕ್ಕೆ ಹಬ್ಬುತ್ತಿರುವ ಲಕ್ಷಣವೇ ಎನ್ನುವ ಆತಂಕ ಮನೆ ಮಾಡಿದೆ.

ಜಿಲ್ಲೆಯಲ್ಲಿ ರವಿವಾರ ಪತ್ತೆಯಾದ ಸೋಂಕಿತರ ಪೈಕಿ ಜೂ.10, 21, 22ರಂದು ಸೌದಿ ಅರೇಬಿಯದಿಂದ 29 ಮಂದಿ, ಜೂ.19ರಂದು ಕತರ್‌ನಿಂದ 26 ವರ್ಷದ ಯುವಕ ಆಗಮಿಸಿದ್ದರು. 21 ಮಂದಿಗೆ ಶೀತಜ್ವರದ ಲಕ್ಷಣದೊಂದಿಗೆ (ಐಎಲ್‌ಐ) ಸೋಂಕು ಕಾಣಿಸಿಕೊಂಡಿದೆ. ಉಸಿರಾಟ ಸಮಸ್ಯೆಯಿಂದಾಗಿ (ಎಸ್‌ಎಆರ್‌ಐ) ಐವರಲ್ಲಿ ಸೋಂಕು ಪತ್ತೆಯಾಗಿದೆ.

28 ಮಂದಿಯ ಸೋಂಕಿನ ಮೂಲ ಪತ್ತೆಯಾಗಿಲ್ಲ. ಪ್ರಾಥಮಿಕ ಸಂಪರ್ಕದಲ್ಲಿದ್ದ 10 ಮಂದಿ ಹಾಗೂ ಜೂ.20ರಂದು ಚೆನ್ನೈನಿಂದ 25, 27 ವರ್ಷದ ಯುವಕರು, ಜೂ.10ರಂದು ಮುಂಬೈನಿಂದ 30 ವರ್ಷದ ಹೆಂಗಸಲ್ಲಿ ಸೋಂಕು ಕಂಡುಬಂದಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಅವರ ಪ್ರಕಟಣೆ ತಿಳಿಸಿದೆ.

ರವಿವಾರ 70, 67 ವರ್ಷದ ವೃದ್ಧರು ಸೇರಿದಂತೆ ಆರು ಮಂದಿ ಕೋವಿಡ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಮರಳಿದ್ದಾರೆ. ಇದರೊಂದಿಗೆ 422 ಮಂದಿ ಇದುವರೆಗೆ ಸೋಂಕು ಮುಕ್ತರಾದಂತಾಗಿದೆ.

Comments are closed.