ಕರಾವಳಿ

ಬ್ರಹ್ಮಕಲಶ ಹಿನ್ನೆಲೆ : ಬೋಳಾರ ಹಳೇಕೋಟೆ ಮಾರಿಯಮ್ಮ ದೇವಸ್ಥಾನಕ್ಕೆ ಹಸಿರುಕಾಣಿಕೆ ಸಮರ್ಪಣೆ

Pinterest LinkedIn Tumblr

ಮಂಗಳೂರು : ಬೋಳಾರ ಹಳೇಕೋಟೆ ಮಾರಿಯಮ್ಮ ದೇವಸ್ಥಾನದ ಬ್ರಹ್ಮಕಲಶದ ಉಗ್ರಾಣ ಮುಹೂರ್ತದ ಸಂದರ್ಭ ಶ್ರೀ ಮಂಗಳಾದೇವಿ ದೇವಸ್ಥಾನ ಹಾಗೂ ಮುಖ್ಯಪ್ರಾಣ ದೇವಸ್ಥಾನ ಬೋಳಾರ ಇಲ್ಲಿಂದ ಹಸಿರುಕಾಣಿಕೆ ಸಮರ್ಪಿಸಲಾಯಿತು.

ಮಂಗಳೂರಿನ ಬೋಳಾರ ಹಳೆ ಕೋಟೆ ಮಾರಿಯಮ್ಮನ ದೇವಸ್ಥಾನದ ಬ್ರಹ್ಮಕಲಶೋತ್ಸವ  ಇಂದು (ಜೂನ್ 29ರಂದು) ನಡೆಯಲಿರುವ ಹಿನ್ನೆಲೆಯಲ್ಲಿ ಇದೀಗ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳು ಭರದಿಂದ ಸಾಗುತ್ತಿದೆ.ಈಗಾಗಲೇ ಸುಮಾರು ಒಂದು ಕೋಟಿ ರೂಪಾಯಿ ವೆಚ್ಚದ ಕಾಮಗಾರಿ ಕಾರ್ಯಗಳನ್ನು ನಡೆಸಲಾಗಿದ್ದು, ನೂರಾರು ಕರಸೇವಕರು, ಮಾತೆಯರು ಕರಸೇವೆಯಲ್ಲಿ ಪಾಲ್ಗೊಂಡಿದ್ದಾರೆ.

ರಾಶಿಕಟ್ಟೆ ಪುನರ್ ನಿರ್ಮಾಣ, ಮಾತಂಗಿ ಕಟ್ಟೆ, ನೆಲಹಾಸು ಕಲ್ಲು, ಒಳಾಂಗಣ ಹಾಸುಕಲ್ಲು, ಚಪ್ಪರ ವ್ಯವಸ್ಥೆ ಇತ್ಯಾದಿ ಕೆಲಸ ಕಾಮಗಾರಿಗಳು ನಡೆದಿದ್ದು, ಕೋಟಿ ರೂಪಾಯಿ ಕಾಮಗಾರಿ ಪೂರ್ಣಗೊಂಡಿದೆ. ಏಪ್ರಿಲ್ 17ಕ್ಕೆ ಬ್ರಹ್ಮಕಲಶ ನೆರವೇರಬೇಕಿತ್ತು. ಆದ್ರೆ ಕೊರೋನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟಿದ್ದು, ಇದೀಗ ಜೂನ್ 29ರಂದು ಬ್ರಹ್ಮಕಲಶ ನೆರವೇರಲಿದೆ ಎಂದು ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ತಾರಾನಾಥ ಶೆಟ್ಟಿ ಬೋಳಾರ ಹಾಗೂ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕದ್ರಿ ನವನೀತ ಶೆಟ್ಟಿ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಹಳೇಕೋಟೆ ಶ್ರೀ ಮಾರಿಯಮ್ಮ ಮಹಿಷಮರ್ದಿನಿ ದೇವಸ್ಥಾನವು ಮಂಗಳೂರು ನಗರದ ಬೋಳಾರದಲ್ಲಿದ್ದು, ಸುಮಾರು 1400 ವರ್ಷ ಪುರಾತನವಾಗಿದೆ. ಮಹಿಷಮರ್ದಿನಿ ಮತ್ತು ಮಾರಿಯಮ್ಮ ಎಂಬ ಎರಡು ದೇವರುಗಳ ಸಾನಿಧ್ಯ ಒಂದೇ ಗುಡಿಯಲ್ಲಿರುವುದು ತುಂಬಾ ವಿರಳ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಥಮ. ಈ ದೇವಸ್ಥಾನವು ಮಂಗಳೂರು ನಗರದ ಹೃದಯ ಭಾಗದಲ್ಲಿರುವುದರಿಂದ ಭಕ್ತಾಧಿಗಳ ಆಗಮನಕ್ಕೆ ತುಂಬಾ ಅನುಕೂಲವಾಗಿದೆ.

Comments are closed.