ಮಂಗಳೂರು ಜೂನ್ 25 : ಇಂದಿನಿಂದ ಎಸ್.ಎಸ್.ಎಲ್.ಸಿ. ಪರೀಕ್ಷೆ ಆರಂಭಗೊಂಡಿದೆ. ದ.ಕ.ಜಿಲ್ಲೆಯಲ್ಲ ಕೋವಿಡ್ ಹಿನ್ನೆಲೆಯಲ್ಲಿ ಪ್ರತೀ ಪರೀಕ್ಷಾ ಕೊಠಡಿಯಲ್ಲಿ ಸಾಮಾಜಿಕ ಅಂತರ ಕಾಪಾಡಿ ಕೇವಲ 20 ವಿದ್ಯಾರ್ಥಿಗಳಿಗೆ ಮಾತ್ರ ಆಸನ ವ್ಯವಸ್ಥೆ ಏರ್ಪಡಿಸಲಾಗಿದೆ.
ವಿಶೇಷ ಮುನ್ನೆಚ್ಚರಿಕೆ :
ಜಿಲ್ಲೆಯಲ್ಲಿ ಪರೀಕ್ಷಾ ಕೇಂದ್ರವಿರುವ ಸ್ಥಳದಲ್ಲಿ ಯಾವುದೇ ಕೆಂಪು ವಲಯ ಅಥವಾ ಕಂಟೈನ್‍ಮೆಂಟ್ ವಲಯಗಳು ಇರುವುದಿಲ್ಲ. ಎಲ್ಲಾ ಪರೀಕ್ಷಾ ಕೇಂದ್ರಗಳನ್ನು ಈಗಾಗಲೇ ಸ್ಯಾನಿಟೈಝೇಶನ್ ಮಾಡಲಾಗಿದ್ದು, ಪ್ರತೀ ಪರೀಕ್ಷೆ ಮುಗಿದ ತಕ್ಷಣ ಮತ್ತೊಮ್ಮೆ ಸ್ಯಾನಿಟೈಝೇಶನ್ ಮಾಡಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಈಗಾಗಲೇ ಮಾಸ್ಕ್ ಗಳನ್ನು ವಿತರಿಸಲಾಗಿದೆ. ಪರೀಕ್ಷಾ ಕೇಂದ್ರ ಪ್ರವೇಶಿಸುವ ವಿದ್ಯಾರ್ಥಿಗಳ ಆರೋಗ್ಯ ಪರೀಕ್ಷಿಸಲು 632 ಥರ್ಮಲ್ ಸ್ಕ್ಯಾನರ್‍ಗಳನ್ನು ಸರಬರಾಜು ಮಾಡಲಾಗಿದೆ.
ಕೇರಳ ರಾಜ್ಯದಿಂದ ಆಗಮಿಸುವ 367 ವಿದ್ಯಾರ್ಥಿಗಳಿಗೆ ಜಿಲ್ಲೆಯ 29 ಗಡಿ ಭಾಗದ ಪ್ರವೇಶ ಸ್ಥಳಗಳಿಂದ ಪರೀಕ್ಷಾ ಕೇಂದ್ರಗಳಿಗೆ ಆಗಮಿಸಲು ವಾಹನದ ವ್ಯವಸ್ಥೆ ಮಾಡಿ, ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಈ ಪೈಕಿ 5 ಗಡಿ ಪ್ರವೇಶ ಸ್ಥಳಗಳಲ್ಲಿ ಏಕೈಕ ವಿದ್ಯಾರ್ಥಿ ಮಾತ್ರ ಇದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟು 95 ಪರೀಕ್ಷಾ ಕೇಂದ್ರಗಳಲ್ಲಿ 30835 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಜಿಲ್ಲೆಯ 95 ಪರೀಕ್ಷಾ ಕೇಂದ್ರಗಳಲ್ಲಿ ಇದಕ್ಕಾಗಿ 1585 ಕೊಠಡಿಗಳನ್ನು ಸಿದ್ಧಪಡಿಸಲಾಗಿದೆ.
ಬಂಟ್ವಾಳ – 5300, ಬೆಳ್ತಂಗಡಿ – 3849, ಮಂಗಳೂರು ಉತ್ತರ – 6584, ಮಂಗಳೂರು ದಕ್ಷಿಣ – 5968, ಮೂಡಬಿದ್ರೆ – 2107, ಪುತ್ತೂರು – 5007, ಸುಳ್ಯ – 2020 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೊಂದಾಯಿಸಿದ 1318 ವಿದ್ಯಾರ್ಥಿಗಳು ಬೇರೆ ಜಿಲ್ಲೆಯಲ್ಲಿ ಪರೀಕ್ಷೆ ಬರೆಯಲಿದ್ದಾರೆ.
Comments are closed.