ಕರಾವಳಿ

ಮಳೆಗಾಲದಲ್ಲಿ ಅಧಿಕಾರಿಗಳು ಮುತುವರ್ಜಿಯಿಂದ ಕೆಲಸ ಮಾಡಲು ಸೂಚನೆ : ನಿರ್ಲಕ್ಷ್ಯ ಮಾಡಿದರೆ ಕಠಿಣ ಕ್ರಮದ ಎಚ್ಚರಿಕೆ

Pinterest LinkedIn Tumblr

ಮಂಗಳೂರು ಜೂನ್ 14 : ಕಳೆದ ಬಾರಿ ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪದಿಂದಾಗಿ ಆದ ಅನಾಹುತಗಳನ್ನು, ಸಮಸ್ಯೆಗಳನ್ನು ಮನಗಂಡು ಎಲ್ಲಾ ಅಧಿಕಾರಿಗಳು ಮುತುವರ್ಜಿಯಿಂದ ಕಾರ್ಯನಿರ್ವಹಿಸಿ ಮುಂಜಾಗೃತ ಕ್ರಮಗಳನ್ನು ತಕ್ಷಣ ಕೈಗೊಳ್ಳಬೇಕು ಎಂದು ಮುಜರಾಯಿ, ಮೀನುಗಾರಿಕೆ ಹಾಗೂ ಬಂದರು ಮತ್ತು ಒಳನಾಡು ಜಲಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.

ಪ್ರವಾಹ ಪರಿಸ್ಥಿತಿಯನ್ನು ಎದುರಿಸಲು ಕೈಗೊಳ್ಳಬೇಕಾದ ಮುಂಜಾಗೃತ ಕ್ರಮಗಳ ಕುರಿತಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಹೆಚ್ಚಾಗಿದೆ ಹಾಗಾಗಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟ್ರಾಫಿಕ್ ಸಮಸ್ಯೆ, ಗುಡ್ಡ ಕುಸಿತ, ರಸ್ತೆ ಬದಿಗಳಲ್ಲಿ ಬೀಳುವ ಅಪಾಯಕಾರಿ ಮರಗಳನ್ನು ತೆರವುಗೊಳಿಸಬೇಕು. ಜೊತೆಗೆ ಅಗತ್ಯ ಕ್ರಮಗಳನ್ನು ವಹಿಸಿಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸಚಿವರು ತಿಳಿಸಿದರು. ಒಂದು ವೇಳೆ ಅಧಿಕಾರಿಗಳು ಬೇಜವ್ದಾರಿತನ ವರ್ತಿಸಿದರೆ ಅಧಿಕಾರಿಗಳೆ ನೇರ ಹೊಣೆಯಾಗಿರುತ್ತಾರೆ ಮತ್ತು ಅವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ತಳ ಮಟ್ಟದಲ್ಲಿ ಚರಂಡಿ ನೀರಿನ ವ್ಯವಸ್ಥೆ, ವಿದ್ಯುತ್ ವ್ಯತ್ಯಯ, ಅಪಾಯಕಾರಿ ಮರಗಳು ಬೀಳುವ ಸಂಭವ ಇದ್ದರೆ ಇತರ ಯಾವುದೇ ಸಮಸ್ಯೆಯಿದ್ದರೆ ಗ್ರಾಮೀಣ ಮಟ್ಟದಲ್ಲಿ ಪಿ.ಡಿ.ಓ. ಹಾಗೂ ನೋಡಲ್ ಅಧಿಕಾರಿಗಳು ಆ ಪ್ರದೇಶವನ್ನು ಗಮನಿಸಿ ಪರಿಹಾರ ಒದಗಿಸಬೇಕು ಎಂದು ಹೇಳಿದರು.

ಪುತ್ತೂರು ಶಾಸಕ ಸಂಜೀವ ಮಠಂದೂರು ಮಾತನಾಡಿ, ಬೆಳ್ತಂಗಡಿ ತಾಲೂಕಿನಲ್ಲಿ ನೀರಿನ ಪ್ರವಾಹಕ್ಕೆ ಕಿಂಡಿ ಅಣೆಕಟ್ಟು ಸೇರಿದಂತೆ ಸೇತುವೆಗಳಿಗೆ ಪಕ್ಕದ ಮರದ ದಿಮ್ಮಿಗಳು ಅಡ್ಡ ಬಿದ್ದು ಅಲ್ಲಿನ ಪ್ರದೇಶಗಳು ಜಲಾವೃತವಾಗುತ್ತದೆ, ಹಾಗಾಗಿ ಅರಣ್ಯ ಇಲಾಖೆ ಸೇತುವೆ ಪಕ್ಕದಲ್ಲಿರುವ ಮರವನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಶಿರಾಡಿ, ಸಂಪಾಜೆ, ಚಾರ್ಮಾಡಿ ಈ ಭಾಗಗಳಲ್ಲಿ ಭೂಕುಸಿತ ಸಮಸ್ಯೆ ಸಂಭವಿಸುವುದರಿಂದ ಅಧಿಕಾರಿಗಳು ಸಕಲ ಸಿದ್ದತೆ ಮಾಡಿಕೊಂಡಿರಬೇಕು. ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಪಾಯದ ಸ್ಥಿತಿ ಎದುರಾದರೆ ಅಧಿಕಾರಿಗಳೇ ಜವಾಬ್ದಾರಿಯಾಗಿರುತ್ತಾರೆ ಎಂದು ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್ ಎಚ್ಚರಿಕೆ ನೀಡಿದರು.

ಗ್ರಾಮ ಲೆಕ್ಕಾಧಿಕಾರಿ ಮತ್ತು ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿ, ಕಾರ್ಯದರ್ಶಿ ತಮ್ಮ ಕೇಂದ್ರಸ್ಥಾನದಲ್ಲಿದ್ದು ಅತಿವೃಷ್ಠಿ ಬಗ್ಗೆ ಸಾರ್ವಜನಿಕರಿಗೆ ಎಚ್ಚರಿಕೆಯನ್ನು ಕೊಡಬೇಕು. ಪ್ರವಾಹ ಸಂತೃಸ್ಥರಿಗೆ ಪರಿಹಾರ ಕೇಂದ್ರ ತೆರೆಯಲು ಸಮುದಾಯ ಭವನ, ದೊಡ್ಡ ಕಟ್ಟಡಗಳು ಇದ್ದಲ್ಲಿ ಅವುಗಳನ್ನು ಗುರುತಿಸಿಲಾಗಿದೆ.

ಜಾನುವಾರುಗಳಿಗೆ ಗೋಶಾಲೆಗಳನ್ನು ತೆರೆಯಲು ಸೂಕ್ತ ಸ್ಥಳಗಳನ್ನು ಈಗಾಗಲೇ ಗುರುತಿಸಲಾಗಿದೆ. ಜಿಲ್ಲೆಯ ಉಳ್ಳಾಲ, ಸೋಮೇಶ್ವರ, ಮೊಗವೀರಪಟ್ನ, ಪಣಂಬೂರು, ತಣ್ಣೀರುಬಾವಿ, ಸಸಿಹಿತ್ಲು ಮತ್ತು ಸುರತ್ಕಲ್ ಕಡಲ ಕಿನಾರೆಗಳಲ್ಲಿ ನಾಮಫಲಕಗಳನ್ನು ಅಳವಡಿಸಿ ಗೃಹ ರಕ್ಷಕ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಕೃತಕ ನೆರೆಯಾಗುವ ಪ್ರದೇಶಗಳನ್ನು ಹಾಗೂ ನದಿ ತೀರದ ಹಳ್ಳಿಗಳಲ್ಲಿ ತುರ್ತು ಪರಿಸ್ಥಿತಿಗೆ ಸಂಬಂಧಪಟ್ಟಂತೆ ಜನರ ರಕ್ಷಣೆಗೆ ಬೋಟುಗಳ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಎಂ.ಜೆ. ರೂಪಾ ಸಭೆಗೆ ತಿಳಿಸಿದರು.

ಲೋಕೋಪಯೋಗಿ ಇಲಾಖೆ ಮತ್ತು ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ಇಲಾಖೆಯವರ ಪರಸ್ಪರ ಸಮನ್ವಯದಲ್ಲಿ ಕಾರ್ಯನಿರ್ವಹಿಸಬೇಕು. ಅತಿವೃಷ್ಠಿ ಪ್ರವಾಹದ ಸಂದರ್ಭದಲ್ಲಿ ಪೊಲೀಸ್ ಇಲಾಖೆ, ಅಗ್ನಿಶಾಮಕ ದಳ, ರಾಜ್ಯ ವಿಪತ್ತು ನಿರ್ವಹಣಾ, ರಾಷ್ಟ್ರೀಯ ವಿಪತ್ತು ಪಡೆ, ಅರೆಸೇನಾ ಪಡೆ, ವಾಯುಪಡೆ ಹಾಗೂ ಗೃಹರಕ್ಷಕ ದಳ ಇಲಾಖೆ ಹಾಗೂ ರಕ್ಷಣಾ ಸಿಬ್ಬಂದಿಗಳ ಸಂಹಯೋಗದೊಂದಿಗೆ ರಕ್ಷಣಾ ಕಾರ್ಯಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ಹವಾಮಾನ ವೈಪರಿತ್ಯದಿಂದಾಗಿ ದೋಣಿಯ ಮೂಲಕ ರಕ್ಷಣೆ ಮಾಡಲು ಸಾಧ್ಯವಾಗದೆ ಇದ್ದಲ್ಲಿ ಹೆಲಿಕಾಪ್ಟರ್ ಮೂಲಕ ಜನರನ್ನು ಸ್ಥಳಾಂತರಿಸುವ ವ್ಯವಸ್ಥೆ ಜಿಲ್ಲಾಢಳಿತದ ವತಿಯಿಂದ ಮಾಡಲಾಗುತ್ತದೆ. ನೆರೆಪೀಡಿತ ಹಾಗೂ ತಗ್ಗು ಪ್ರದೇಶಗಳ ಮತ್ತು ಭೂಕುಸಿತ ಉಂಡಾಗುವ ಪ್ರದೇಶದ ತಾಲೂಕುವಾರು ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಸಂತ್ರಸ್ಥರಿಗೆ ಪರಿಹಾರ ಕೇಂದ್ರಗಳಲ್ಲಿ ಅಗತ್ಯವಾದ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುತ್ತದೆ. ಗೃಹಪಯೋಗಿ ವಸ್ತುಗಳನ್ನು, ಜೀವನಾವಶ್ಯಕ ವಸ್ತುಗಳನ್ನು ಕಳೆದುಕೊಂಡ ಸಂತ್ರಸ್ಥರಿಗೆ ಪರಿಹಾರ ವಿತರಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಬಿ. ಸಿಂಧೂ ರೂಪೇಶ್ ಸಭೆಗೆ ತಿಳಿಸಿದರು.

ತುರ್ತು ಸಂದರ್ಭದಲ್ಲಿ ಜಿಲ್ಲಾ ಕಂಟ್ರೋಲ್ ರೂಮ್ ದೂರವಾಣಿ ಸಂಖ್ಯೆ 1077/0824-2442590 ದಿನದ 24 ಗಂಟೆಗಳ ಕಾಲ ಕಾರ್ಯ ಚರಿಸುತ್ತದೆ. ಜಿಲ್ಲೆಯ ಉಪ ವಿಭಾಗಾಧಿಕಾರಿಗಳ ಹಾಗೂ ಎಲ್ಲಾ ತಹಶೀಲ್ದಾರರ ಕಾರ್ಯಾಲಯದಲ್ಲಿದಿನದ 24 ಗಂಟೆಗಳ ಕಾಲ ಸಿಬ್ಬಂದಿಯನ್ನು ನೇಮಿಸಲಾಗಿದೆ.

ವಿಪತ್ತು ನಿರ್ವಹಣೆ ಕುರಿತಾಗಿ ನಿರ್ದೇಶನಗಳನ್ನು ನೀಡಲು ತುರ್ತಾಗಿ ಮಾಹಿತಿಯನ್ನು ಸಂಗ್ರಹಿಸಲು ಹಾಗೂ ಸಂಬಂಧಿಸಿದವರಿಗೆ ಮಾಹಿತಿ ವಿನಿಮಯ ಮಾಡಿಕೊಳ್ಳಲು ಪ್ರತ್ಯೇಕವಾಗಿ ಜಿಲ್ಲಾ ಮಟ್ಟದ, ಉಪವಿಭಾಗ ಮಟ್ಟದ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳನ್ನೊಳಗೊಂಡ ವಾಟ್ಸಾಪ್ ಗ್ರೂಪ್ ರಚಿಸಲಾಗಿದೆ ಎಂದು ಹೇಳಿದರು.

ಸಭೆಯಲ್ಲಿ ಮಂಗಳೂರು ಉತ್ತರ ಶಾಸಕ ಡಾ. ವೈ. ಭರತ್ ಶೆಟ್ಟಿ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಉಪಮೇಯರ್ ವೇದಾವತಿ ಹಾಗೂ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

Comments are closed.