ಕರಾವಳಿ

ಬಾಲ ಕಾರ್ಮಿಕ ಪದ್ಧತಿ ವಿರುದ್ಧ ಜನಜಾಗೃತಿ ಜಾಥಾಕ್ಕೆ ಜಿಲ್ಲಾಧಿಕಾರಿ ಚಾಲನೆ : ಜಿಲ್ಲೆಯಾದ್ಯಂತ ರಥ ಸಂಚಾರ

Pinterest LinkedIn Tumblr

ಮಂಗಳೂರು ಜೂನ್ 13: ನಗರದ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ಬಾಲ ಕಾರ್ಮಿಕ ಪದ್ಧತಿ ವಿರುದ್ಧ ಜಿಲ್ಲೆಯಾದ್ಯಂತ ನಡೆಯಲಿರುವ ಜನಜಾಗೃತಿ ಅಂಗವಾಗಿ ವಾಹನ ಜಾಥಾಕ್ಕೆ ನ್ಯಾಯಾಲಯ ಸಂಕೀರ್ಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಚಾಲನೆ ನೀಡಿದರು.

ದಕ್ಷಿಣ ಕನ್ನಡ ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ ನೇತೃತ್ವದಲ್ಲಿ ನಡೆದ ಈ ಜಾಥಾ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯಾಂಗ ಇಲಾಖೆ, ಕಾರ್ಮಿಕ ಇಲಾಖೆ ಮತ್ತು ಮಂಗಳೂರು ವಕೀಲರ ಸಂಘ ಸಹಭಾಗಿತ್ವದಲ್ಲಿ ನಡೆಯಲಿದೆ.

ಜಿಲ್ಲೆಯಾದ್ಯಂತ ವಾಹನ ಜಾಥಾ ತೆರಳಲಿದ್ದು, ಬಾಲ ಕಾರ್ಮಿಕ ಪದ್ಧತಿ ಮತ್ತು ಮಕ್ಕಳ ಹಕ್ಕುಗಳ ರಕ್ಷಣೆ ಬಗ್ಗೆ ಜನಜಾಗೃತಿ ಮಾಡಲಿದೆ.

ಬಾಲಕಾರ್ಮಿಕ ಪದ್ಧತಿ ಒಂದು ಸಾಮಾಜಿಕ ಅನಿಷ್ಟ ಪಿಡುಗು ಆಗಿದ್ದು, ಬಾಲ್ಯಾವಸ್ಥೆ, ಕಿಶೋರಾವಸ್ಥೆ ಕಾರ್ಮಿಕ (ನಿಷೇಧ& ನಿಯಂತ್ರಣ) ಕಾಯ್ದೆ-1986ರನ್ವಯ 14 ವರ್ಷದೊಳಗಿನ ಬಾಲ್ಯಾವಸ್ಥೆ ಕಾರ್ಮಿಕರನ್ನು ಯಾವುದೇ ಸಂಸ್ಥೆಯಲ್ಲಿ ಕೆಲಸಕ್ಕೆ ನೇಮಿಸಿಕೊಳ್ಳುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿರುತ್ತದೆ.

15 ವರ್ಷದಿಂದ 18 ವರ್ಷದೊಳಗಿನ ಕಿಶೋರಾವಸ್ಥೆಯ ಕಾರ್ಮಿಕರನ್ನು ಅಪಾಯಕಾರಿ ಉದ್ದಿಮೆಗಳಲ್ಲಿ ದುಡಿಸಿಕೊಳ್ಳುವುದನ್ನು ನಿಷೇಧಿಸಲಾಗಿದೆ. ಕಾಯ್ದೆಯನ್ನು ಉಲ್ಲಂಘಿಸಿದ ಮಾಲೀಕರಿಗೆ ರೂ.50,000/-ದವರೆಗೆ ದಂಡ ಹಾಗೂ 2 ವರ್ಷದವರೆಗೆ ಜೈಲು ಶಿಕ್ಷೆಯನ್ನು ನ್ಯಾಯಾಲಯ ವಿಧಿಸಲಾಗುತ್ತಿದೆ. ತಪ್ಪಿತಸ್ಥ ಮಾಲೀಕರ ಮೇಲೆ ಪೊಲೀಸ್ ಇಲಾಖೆಯಿಂದ ಎಫ್.ಐ.ಆರ್ ನ್ನು ಸಹ ದಾಖಲಿಸಲಾಗುವುದು.

ಈ ನಿಟ್ಟಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ ಮತ್ತು ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘ, ಮಂಗಳೂರು ಇದರ ವತಿಯಿಂದ ಬಾಲ್ಯಾವಸ್ಥೆ, ಕಿಶೋರಾವಸ್ಥೆ ಕಾರ್ಮಿಕರ (ನಿಷೇಧ& ನಿಯಂತ್ರಣ)ಕಾಯ್ದೆ-1986ರ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜೂನ್ 12 ರಂದು ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನದಂದು “ಕೋವಿಡ್-19 ಸಾಂಕ್ರಾಮಿಕ ರೋಗದ ಈ ಸಂದರ್ಭದಲ್ಲಿ ಮಕ್ಕಳನ್ನು ಬಾಲಕಾರ್ಮಿಕತೆಯಿಂದ ಮುಕ್ತವಾಗಿಸಲು ಹಿಂದಿಗಿಂತಲೂ ಹೆಚ್ಚು ಜಾಗರೂಕತೆವಹಿಸಿ” ಎಂಬ ಘೋಷ ವಾಕ್ಯದೊಂದಿಗೆ ಜನ ಜಾಗೃತಿ ರಥವನ್ನು ಜೂನ್ 12 ರಂದು ಜಿಲ್ಲಾ ನ್ಯಾಯಾಲಯದ ಸಂಕೀರ್ಣದ ಆವರಣದಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಮುರಳೀಧರ್ ಪೈ.ಬಿ, ಹಾಗೂ ದ.ಕ ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ಅವರು ಉದ್ಘಾಟಿಸಿದರು.

ಸಹಾಯಕ ಕಾರ್ಮಿಕ ಆಯುಕ್ತ, ಮಂಗಳೂರು ವಿಭಾಗ ಕೆ.ಬಿ ನಾಗರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಂಟ್ವಾಳ, ಪುತ್ತೂರು, ಬೆಳ್ತಂಗಡಿ ಮತ್ತು ಮೂಡಬಿದ್ರೆ ತಾಲ್ಲೂಕು ಕೇಂದ್ರಗಳಲ್ಲಿ ರಥ ಉದ್ಘಾಟಣೆಗೊಂಡು ಜೂನ್ 12 ರಿಂದ 13 ರವರೆಗೆ ಜಿಲ್ಲೆಯಾದ್ಯಂತ ಸಂಚರಿಸಿ ಬಾಲಕಾರ್ಮಿಕ ಪದ್ಧತಿಯ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಎ.ಜಿ. ಗಂಗಾಧರ್, ಪ್ರಧಾನ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶ ರವಿ ನಾಯಕ್, ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಎನ್. ನರಸಿಂಹ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ಎಚ್. ವಿ. ರಾಘವೇಂದ್ರ, ಬಾಲಕಾರ್ಮಿಕ ಯೋಜನಾ ನಿರ್ದೇಶಕ ಶ್ರೀನಿವಾಸ ನಾಯಕ್, ಹಿರಿಯ ಕಾರ್ಮಿಕ ನಿರೀಕ್ಷಕಿ ಮೇರಿ ಡಯಾಸ್, ಕಾರ್ಮಿಕ ಇಲಾಖೆ ಅಧಿಕಾರಿಗಳಾದ ಜೇವನ್ ಕುಮಾರ್, ರಾಜಶೇಖರ ರೆಡ್ಡಿ, ವಿಲ್ಮಾ ಎಲಿಜಬೆತ್ ತಾವ್ರೋ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸಾರ್ವಜನಿಕರು ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆ ಕಾರ್ಮಿಕರಿಂದ ದುಡಿಸಿಕೊಳ್ಳುತ್ತಿರುವುದು ಕಂಡು ಬಂದಲ್ಲಿ ಚೈಲ್ಡ್‍ಲೈನ್:1098, ಕಾರ್ಮಿಕ ಇಲಾಖೆಯ ದೂರವಾಣಿ ಸಂಖ್ಯೆಗಳಾದ 0824-2435343, 2433132, 2437479  ಮತ್ತು ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸಂಘ ಇದರ ದೂರವಾಣಿ ಸಂಖ್ಯೆ 2433131ಗೆ ಕರೆ ಮಾಡಿ ತಿಳಿಸಲು ಪ್ರಕಟಣೆ ತಿಳಿಸಿದೆ.

Comments are closed.