ಕರಾವಳಿ

ಬಾಲಕನನ್ನು “ಜೈ ಶ್ರೀರಾಮ್” ಹೇಳಲು ಒತ್ತಾಯಿಸಿ ಅತನಿಗೆ ಹಲ್ಲೆ ಮಾಡಿದ ರೌಡಿಶೀಟರ್ ಅರೆಸ್ಟ್

Pinterest LinkedIn Tumblr

ಮಂಗಳೂರು: “ಜೈಶ್ರೀರಾಮ್” ಹೇಳಲು ಒತ್ತಾಯಿಸಿ ಬಾಲಕನನ್ನು ಮೂವರು ಕಿಡಿಗೇಡಿಗಳ ತಂಡವೊಂದು ಹಿಡಿದು ಥಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಪ್ರಕರಣದ ತನಿಖೆ ಕೈಗೆತ್ತಿಕೊಂಡ ಬಂಟ್ವಾಳ ಸರ್ಕಲ್ ಇನ್ ಸ್ಪೆಕ್ಟರ್ ಟಿ.ಡಿ. ನಾಗರಾಜ್, ವಿಟ್ಲ ಠಾಣಾ ಇನ್ ಚಾರ್ಜ್ ಆಗಿರುವ ಸಂಚಾರಿ ಠಾಣಾ ಸಬ್ ಇನ್ಸ್ಪೆಕ್ಟರ್ ರಾಜೇಶ್ ನೇತೃತ್ವದ ಪೊಲೀಸ್ ತಂಡ ಕಾರ್ಯಾಚರಣೆ ನಡೆಸಿ ಪ್ರಮುಖ ಆರೋಪಿ ವಿಟ್ಲ ಠಾಣಾ ರೌಡಿಶೀಟರ್, ದಿನೇಶ್ ಕನ್ಯಾನ (30) ಎಂಬವನನ್ನು ಬಂಧಿಸಿದ್ದಾರೆ.

ಘಟನೆ ಬಳಿಕ ಹಲ್ಲೆಯಲ್ಲಿ ಪಾಲ್ಗೊಂಡಿದ್ದ ಇಬ್ಬರು ಬಾಲಕರನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು. ಕೊರೋನಾ ಹಿನ್ನೆಲೆಯಲ್ಲಿ ವಿಟ್ಲ ಠಾಣೆ ಸೀಲ್ ಡೌನ್ ಆಗಿರುವ ಕಾರಣ ಮೆಲ್ಕಾರ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಸುಮೊಟೋ ಕೇಸ್ ದಾಖಲಾಗಿತ್ತು.

ಘಟನೆ ಕಳೆದ ಏಪ್ರಿಲ್ 20ರಂದು ನಡೆದಿದ್ದು 16ರ ಹರೆಯದ ಬಾಲಕನನ್ನು ರೌಡಿಶೀಟರ್ ದಿನೇಶ್ ಕನ್ಯಾನ ಮತ್ತು ಇಬ್ಬರು ಬಾಲಕರಿದ್ದ ತಂಡ ಹಿಡಿದು ಕೈಯಿಂದ ಹಲ್ಲೆ ಮಾಡುತ್ತಿರುವ ವಿಡಿಯೋ ವೈರಲ್ ಆಗಿತ್ತು. ಬಂಟ್ವಾಳ ತಾಲೂಕು ಕುಡ್ತಮುಗೇರು ನಿವಾಸಿ ಬಾಲಕ ಹಲ್ಲೆಗೊಳಗಾಗಿದ್ದು ವಿಡಿಯೋದಲ್ಲಿ ಆರೋಪಿಗಳು ಬಾಲಕನಲ್ಲಿ ಜೈಶ್ರೀರಾಮ್ ಹೇಳಲು ಒತ್ತಾಯ ಮಾಡಿ ಹಲ್ಲೆ ಮಾಡುತ್ತಿರುವುದು ದಾಖಲಾಗಿತ್ತು.

ಪ್ರಮುಖ ಆರೋಪಿ ದಿನೇಶ್ ಕನ್ಯಾನ ರೌಡಿಶೀಟರ್ ಆಗಿದ್ದು ಈತನ ವಿರುದ್ಧ ಬಂಟ್ವಾಳ, ವಿಟ್ಲ, ಸುರತ್ಕಲ್, ಮಂಜೇಶ್ವರ ಠಾಣೆಗಳಲ್ಲಿ ಪ್ರಕರಣಗಳಿವೆ. ಕೆಲತಿಂಗಳ ಹಿಂದೆ ಕನ್ಯಾನ ಕಾಲೇಜಿನಲ್ಲಿ ನಡೆದಿದ್ದ ವಿದ್ಯಾರ್ಥಿಗಳ ಮೇಲಿನ ಹಲ್ಲೆ ಪ್ರಕರಣ, ಸುರತ್ಕಲ್ ಸಮೀಪ ನಡೆದಿದ್ದ ದರೋಡೆ ಪ್ರಕರಣ, ಮಂಜೇಶ್ವರ ಠಾಣಾ ವ್ಯಾಪ್ತಿ ಯಲ್ಲಿ ನಡೆದಿದ್ದ ಮೌಲ್ವಿ ಕೊಲೆಯತ್ನ ಪ್ರಕರಣದಲ್ಲಿ ಈತ ಆರೋಪಿಯಾಗಿದ್ದು ವಿಟ್ಲ ಠಾಣೆಯ ರೌಡಿಶೀಟರ್ ಆಗಿರುವ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ.

Comments are closed.