ಕರಾವಳಿ

ಅಮಾಸೆಬೈಲು ಪೊಲೀಸ್ ಠಾಣಾ ಭದ್ರತೆಗೆ ಬಂದಿದ್ದ ಕೆ.ಎಸ್.ಆರ್.ಪಿ. RSI ಆತ್ಮಹತ್ಯೆಗೆ ಶರಣು

Pinterest LinkedIn Tumblr

ಕುಂದಾಪುರ: ಅಮಾಸೆಬೈಲು ಠಾಣೆಯ ಭದ್ರತೆಗಾಗಿ ನಿಯೋಜನೆಗೊಂಡಿದ್ದ ಆರ್.ಎಸ್.ಐ ಸಿಬ್ಬಂದಿಯೋರ್ವರು ಠಾಣಾ ಸಮೀಪದಲ್ಲಿಯೇ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ಬೆಳಿಗ್ಗೆ ವರದಿಯಾಗಿದೆ.

ಕಲ್ಬುರ್ಗಿಯ ನೌರುಗಂಜ್ ನಿವಾಸಿ ಮಲ್ಲಿಕಾರ್ಜುನ್ ಗುಬ್ಬಿ (56) ಆತ್ಮಹತ್ಯೆ ಮಾಡಿಕೊಂಡವರು.

ಕೆಎಸ್ಆರ್ಪಿಯ ಆರ್ ಎಸ್ ಐ ಸಿಬ್ಬಂದಿಯಾಗಿದ್ದ ಮಲ್ಲಿಕಾರ್ಜುನ್ ಗುಬ್ಬಿ ಮೇ 16 ರಂದು ನಕ್ಸಲ್ ಪೀಡಿತ ಪ್ರದೇಶವಾದ ಅಮಾಸೆಬೈಲು ಠಾಣೆಗೆ ಭದ್ರತೆಗಾಗಿ ಬಂದಿದ್ದರು. ನಿನ್ನೆ ರಾತ್ರಿ ಊಟ ಮುಗಿಸಿ ಕ್ವಾಟ್ರಸ್ ನಲ್ಲಿ ಮಲಗಿದ್ದ ಅವರು ಇಂದು ಬೆಳಿಗ್ಗೆ ಕ್ವಾಟ್ರಸ್ ನಲ್ಲಿ ಇರಲಿಲ್ಲ. ತಕ್ಷಣ ಸಿಬ್ಬಂದಿಗಳು ಹುಡುಕಾಟ ನಡೆಸಿದರಾದರೂ ಅವರ ಪತ್ತೆಯಾಗಿರಲಿಲ್ಲ. ಬೆಳಿಗ್ಗೆ ಡೈರಿಗೆ ಹಾಲು ಕೊಡಲು‌ ಹೋಗುವ ವ್ಯಕ್ತಿಯೋರ್ವರಿಂದ ಆತ್ಮಹತ್ಯೆಯ ಸುದ್ದಿ‌ತಿಳಿದು ಪೊಲೀಸರು ಸ್ಥಳಕ್ಕೆ ದೌಡಾಯಿಸಿದಾಗ ಅಲ್ಲೇ ಠಾಣೆ ಸಮೀಪದ ಮರವೊಂದಕ್ಕೆ ನೇಣುಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.

ಸುಮಾರು 29 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಮಲ್ಲಿಕಾರ್ಜುನ ಗುಬ್ಬಿ ಕಳೆದ ಮೂರು ತಿಂಗಳ‌ ಹಿಂದಷ್ಟೇ ಕೊಪ್ಪಳ ಜಿಲ್ಲೆಯ ಮುನಿರಾಬಾದ್ ಗೆ ವರ್ಗಾವಣೆಗೊಂಡು‌ ಅಲ್ಲಿ ಸೇವೆ ಮುಂದುವರಿಸಿದ್ದರು. ಕೆ.ಎಸ್.ಆರ್.ಪಿ. ಬ್ಯಾಚ್ ಸಿಬ್ಬಂದಿಗಳಿಗೆ ಹದಿನೈದು‌ ದಿನಕ್ಕೊಮ್ಮೆ ನಕ್ಸಲ್‌ ಪ್ರದೇಶದ ಪೊಲೀಸ್ ಠಾಣೆಗಳಲ್ಲಿ ಠಾಣಾ ಭದ್ರತೆಗಾಗಿ ಸೇವೆ ಸಲ್ಲಿಸಲು ನಿಯುಕ್ತಿಗೊಳಿಸಲಾಗುತ್ತಿದ್ದು, ಮಲ್ಲಿಕಾರ್ಜುನ್ ಅವರನ್ನು ಕೂಡ ಇದೇ ತಿಂಗಳ 16 ರಂದು ಅಮಾಸೆಬೈಲು ಠಾಣೆಯಲ್ಲಿ ಭದ್ರತೆಗಾಗಿ ನಿಯೋಜಿಸಲಾಗಿತ್ತು. ಶನಿವಾರವಷ್ಟೇ ಮಲ್ಲಿಕಾರ್ಜುನ್‌ ಅಮಾಸೆಬೈಲು ಠಾಣೆಯಿಂದ ಬಿಡುಗಡೆಗೊಂಡು ಮುನಿರಾಬಾದ್ ಗೆ ತೆರಳುವವರಿದ್ದರು.

ಮಲ್ಲಿಕಾರ್ಜುನ್‌ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

Comments are closed.