ಮಂಗಳೂರು, ಮೇ.27 : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಪತ್ತೆಯಾದ ಕೊರೋನಾ ಸೋಂಕಿತ ಕುಟುಂಬವೊಂದು ಮುಂಬೈಯಿಂದ ಬಂದು ಬಜ್ಪೆ ಸಮೀಪದ ಕೆಂಜಾರು ಗ್ರಾಮದ ಪೊರ್ಕೋಡಿ ಎಂಬಲ್ಲಿ ನಡೆದಿದ್ದ ಶ್ರಾದ್ಧದಲ್ಲಿ ಪಾಲ್ಗೊಂಡಿದ್ದರು ಎಂಬ ಮಾಹಿತಿ ಲಭ್ಯವಾಗಿದ್ದು, ಇದೀಗ ಸ್ಥಳೀಯರು ಹಾಗೂ ಸೋಂಕಿತರ ಸಂಬಂಧಿಗಳು ಆತಂಕಕ್ಕೆ ಒಳಗಾಗಿದ್ದಾರೆ.
ಇಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 11 ಮಂದಿ ಕೊರೋನಾ ಸೋಂಕಿತರು ಪತ್ತೆಯಾಗಿದ್ದು ಅವರಲ್ಲಿ ನಾಲ್ವರು ಒಂದೇ ಕುಟುಂಬದವರಾಗಿದ್ದು ಬಜ್ಪೆ ಸಮೀಪದ ಕೆಂಜಾರ್ ನಿವಾಸಿಗಳು. 59 ವರ್ಷದ ಮಹಿಳೆ, 46 ವರ್ಷ ಪ್ರಾಯದ ಗಂಡಸು, 11ರ ಹರೆಯದ ಬಾಲಕಿ ಹಾಗೂ ಮೂರರ ಹರೆಯದ ಮಗು ಕೊರೋನಾ ಸೋಂಕಿತರಾಗಿದ್ದಾರೆ.
ಜಿಲ್ಲಾಡಳಿತ ನೀಡಿದ ಹೆಲ್ತ್ ಬುಲೆಟಿನ್ ನಲ್ಲಿ ಒಮ್ಮೆ ಇವರು ಮೇ 15ಕ್ಕೆ ಮಹಾರಾಷ್ಟ್ರದಿಂದ ಬಂದಿದ್ದರು ಉಳ್ಳಾಲದಲ್ಲಿ ಕ್ವಾರಂಟೈನ್ ಆಗಿದ್ದರು ಎಂದು ಬರೆಯಲಾಗಿದ್ದರೆ ಇನ್ನೊಮ್ಮೆ ಮೇ 5 ರಂದು ಮಹಾರಾಷ್ಟ್ರ ದಿಂದ ಬಂದಿದ್ದು ಬಜ್ಪೆಯಲ್ಲಿ ವಾಸ್ತವ್ಯದಲ್ಲಿದ್ದರು ಎಂದು ಹೇಳಲಾಗಿದೆ. ಇದರಲ್ಲಿ ಯಾವುದು ಸತ್ಯ ಎಂಬ ಗೊಂದಲಕ್ಕೆ ಜಿಲ್ಲೆಯ ಜನರು ಒಳಗಾಗಿದ್ದಾರೆ.
ಆದರೆ ಸ್ಥಳೀಯರ ಪ್ರಕಾರ ಕುಟುಂಬದ ನಾಲ್ವರು ಸದಸ್ಯರು ಮುಂಬೈಯಿಂದ ಮೇ 8ಕ್ಕೆ ಕೆಂಜಾರು ಗ್ರಾಮದ ಪೊರ್ಕೋಡಿ ಎಂಬಲ್ಲಿ ನಡೆಯಲಿದ್ದ ಸಂಬಂಧಿಯೊಬ್ಬರ ಶ್ರಾದ್ಧ ಕಾರ್ಯಕ್ರಮಕ್ಕೆ ಬಂದಿದ್ದು ಊರಲ್ಲೇ ಇದ್ದರು. ಯಾವ ಕ್ವಾರಂಟೈನ್ ಗೂ ಒಳಗಾಗಿಲ್ಲ.
50ಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದ ಶ್ರಾದ್ಧದಲ್ಲಿ ಪಾಲ್ಗೊಂಡಿದ್ದ ಇವರು ಅನೇಕ ಕಡೆ ತಿರುಗಾಡಿದ್ದಾರೆ. ಇವರ ಮೊದಲ ರಿಪೋರ್ಟ್ ನೆಗೆಟಿವ್ ಬಂದಿದ್ದು ನಿನ್ನೆಯ ರಿಪೋರ್ಟ್ ನಲ್ಲಿ ಸೋಂಕು ದೃಢಪಟ್ಟ ಬಳಿಕ ಸಂಜೆ ಆಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.ಜಿಲ್ಲಾಡಳಿತದ ಬುಲೆಟಿನ್ ಗೊಂದಲ ಮೂಡಿಸಿದ್ದು ಮೇ 5ಕ್ಕೆ ಊರಿಗೆ ಬಂದವರನ್ನು ಕ್ವಾರಂಟೈನ್ ಮಾಡದೇ ಬಿಟ್ಟಿದ್ದೇಕೆ ಎಂದು ಸ್ಥಳೀಯರು ಪ್ರಶ್ನೆ ಮಾಡುತ್ತಿದ್ದಾರೆ.
ಹಣವಿದ್ದವರು ಏನು ಬೇಕಾದರೂ ಮಾಡಬಹುದು, ಕ್ವಾರಂಟೈನ್ ಕೇವಲ ಬಡವರಿಗೆ ಮಾತ್ರ, ಜಿಲ್ಲಾಡಳಿತ ಮಾರಕ ಸೋಂಕಿನ ವಿಚಾರದಲ್ಲಿ ಇನ್ನೂ ಸಿರಿಯೆಸ್ ಆಗದಿದ್ದರೆ ಜಿಲ್ಲೆಯ ಜನರನ್ನು ದೇವರೇ ಕಾಪಾಡಬೇಕು ಎಂದು ಜನರಾಡಿಕೊಳ್ಳುತ್ತಿದ್ದಾರೆ.
ಸದ್ಯ ಕೆಂಜಾರ್, ಬಜ್ಪೆ ಪರಿಸರದ ಜನರು, ಸೋಂಕಿತರ ಸಂಬಂಧಿಗಳು ಆತಂಕಕ್ಕೆ ಒಳಗಾಗಿದ್ದು ಬಜ್ಪೆ ಪೂರ್ತಿ ಕಂಟೋನ್ಮೆಂಟ್ ಝೋನ್ ಆಗುವತ್ತ ಸಾಗಿದೆ. ಇಂತಹ ಕಠಿಣ ಸಂದರ್ಭದಲ್ಲಿ ಈ ರೀತಿಯ ಘಟನೆ ನಡೆದರೆ ಇದಕ್ಕೆ ಹೊಣೆ ಯಾರು? ಎಂಬ ಪ್ರಶ್ನೆ ಕೇಳಿ ಬಂದಿದೆ.
ಪ್ರಮುಖ ಅಂಶಗಳು:
ಮಂಗಳೂರಿಗೆ ಮುಂಬೈ ಕೊರೋನಾ ತಂದ ಆತಂಕ
ಮಂಗಳೂರಿನ ಬಜ್ಪೆಯ ಅಂತ್ಯಸಂಸ್ಕಾರ ಕಾರ್ಯಕ್ರಮ ಕ್ಕೆ ಹೋಗಿದ್ದ ಸೋಂಕಿತ
ಆತಂಕದಲ್ಲಿ ಮಂಗಳೂರಿನ ಬಜ್ಪೆ ಪ್ರದೇಶ
ಅಂತ್ಯಸಂಸ್ಕಾರ ಕಾರ್ಯಕ್ರಮ ಕ್ಕೆ ತೆರಳಿ ಕ್ವಾರೆಂಟೈನ್ ಆಗಿದ್ದ ಸೋಂಕಿತ
ಮುಂಬೈ ನಿಂದ ಬಂದು ನೇರವಾಗಿ ಅಂತ್ಯಸಂಸ್ಕಾರಕ್ಕೆ ಹೋಗಿದ್ದ ವ್ಯಕ್ತಿ
ಬಜ್ಪೆಯ ಆತನ ಮನೆಯ ಬಳಿಯ ಅಂತ್ಯಸಂಸ್ಕಾರ ಕಾರ್ಯಕ್ರಮ
ಕಾರ್ಯಕ್ರಮಕ್ಕೆ ತೆರಳಿದ ಬಳಿಕ ಕ್ವಾರೆಂಟೈನ್ ಆಗಿದ್ದ ವ್ಯಕ್ತಿ
ಇಂದು ಬಂದ ಸ್ವಾಬ್ ಟೆಸ್ಟ್ ನಲ್ಲಿ ಆ ವ್ಯಕ್ತಿ ಗೆ ಕೊರೋನಾ ಪಾಸಿಟಿವ್ ಧೃಡ
ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿದವರ ಮಾಹಿತಿ ಕಲೆ ಹಾಕುತ್ತಿರುವ ಜಿಲ್ಲಾಡಳಿತ
ಬಜ್ಪೆ ಪ್ರದೇಶ ಕಂಟೋನ್ಮೆಂಟ್ ಝೋನ್ ಆಗುವ ಸಾಧ್ಯತೆ.
Comments are closed.