ಕರಾವಳಿ

‘ಸಂಡೆ ಸೂಪರ್ ಲಾಕ್‌ಡೌನ್’: ಸರಕಾರದ ಆದೇಶಕ್ಕೆ ಉಡುಪಿ ಜಿಲ್ಲೆಯ ಜನರಿಂದ ಉತ್ತಮ ರೆಸ್ಫಾನ್ಸ್!

Pinterest LinkedIn Tumblr

ಉಡುಪಿ: ಕೋವಿಡ್-19 ಕೊರೋನಾ ಸೋಂಕಿನಿಂದ ದೇಶಾದ್ಯಂತ ನಾಲ್ಕನೆ ಹಂತದ ಲಾಕ್ ಡೌನ್ ಜಾರಿಯಲ್ಲಿದ್ದು ಕರ್ನಾಟಕ ರಾಜ್ಯದಲ್ಲಿ ಭಾನುವಾರ ಕಟ್ಟುನಿಟ್ಟಿನ ಲಾಕ್‌ಡೌನ್ ಮಾಡಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆದೇಶ ನೀಡಿದ್ದು ಅದರಂತೆಯೇ ಇಂದು ಉಡುಪಿ ಜಿಲ್ಲೆಯಲ್ಲಿ ಜನರೇ ಸ್ವಯಂ ಪ್ರೇರಿತವಾಗಿ ಕರ್ಫ್ಯೂ ನಡೆಸಿದರು.

ಉತ್ತಮ ಸ್ಪಂದನೆ…
ಭಾನುವಾರ ಕಡ್ಡಾಯ ಲಾಕ್ ಡೌನ್ ಹಿನ್ನೆಲೆ ಶನಿವಾರ ಸಂಜೆ 7 ರ ಬಳಿಕ ಬಹಳಷ್ಟು ಕಡಿಮೆಯಿತ್ತು. ಭಾನುವಾರ ಮುಂಜಾನೆಯಿಂದಲೂ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ಕಡಿಮೆ ಇತ್ತು. ದಿನೋಪಯೋಗಿ ಸಾಮಾಗ್ರಿ, ಹಾಲು, ಪೇಪರ್, ಮೀನು, ಮಾಂಸದಂಗಡಿಗಳು ತೆರೆಯಲು ಉಡುಪಿ ಜಿಲ್ಲಾಡಳಿತ ಅನುಮತಿ ನೀಡಿದ್ದರೂ ಕೂಡ ಬಹುತೇಕ ಯಾವುದೇ ಅಂಗಡಿಗಳು ತೆರೆದಿರಲಿಲ್ಲ. ಅಲ್ಲಲ್ಲಿ ಅಂಗಡಿಗಳು ತೆರೆದರೂ ಕೂಡ ಜನರ ಓಡಾಟವಿಲ್ಲದ ಹಿನ್ನೆಲೆ ವರ್ತಕರೇ ಅಂಗಡಿಗಳನ್ನು ಮುಚ್ಚಿದ್ದು ಕಂಡುಬಂತು. ಮೆಡಿಕಲ್ ಸೇರಿದಂತೆ ತುರ್ತು ಸೇವೆಗಳಿಗೆ ಯಾವುದೇ ಕೊರತೆ ಇರಲಿಲ್ಲ.

ಎಲ್ಲೆಡೆ ಸ್ಪಂದನೆ
ಲಾಕ್ ಡೌನ್ ಹಿನ್ನೆಲೆ ಗಂಗೊಳ್ಳಿ ಬಂದರು ಪ್ರದೇಶ ಬಿಕೋ ಎನ್ನುತ್ತಿತ್ತು. ಕುಂದಾಪುರದ ಗ್ರಾಮೀಣ ಭಾಗಗಳಲ್ಲಿಯೂ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಗ್ರಾಮೀಣ ಭಾಗದ ರಸ್ತೆಯಲ್ಲಿ ಜನಸಂಚಾರವೇ ಇರಲಿಲ್ಲ. ಮದುವೆ ಕಾರ್ಯಕ್ಕೆ ನಿಯಮಾನುಸಾರ ಅನುಮತಿ ನೀಡಿದ್ದು ಜಿಲ್ಲೆಯಲ್ಲಿ ಸರಕಾರದ ಆದೇಶದಂತೆ ವಿವಾಹ ಕಾರ್ಯಕ್ರಮ ನಡೆಯಿತು.

ಮನೆಯಲ್ಲೇ ರಮ್ಜಾನ್..
ಇಂದು ಮುಸ್ಲೀಂ ಸಮುದಾಯದ ರಮ್ಜಾನ್ ಹಬ್ಬವಿದ್ದಿದ್ದು ಸರಕಾರದ ಆದೇಶದ ಹಿನ್ನೆಲೆ ಮುಸ್ಲೀಂ ಬಾಂಧವರು ಮನೆಯಲ್ಲಿಯೇ ಹಬ್ಬ ಆಚರಿಸಿದರು. ತಮ್ಮ ಮನೆಗಳಲ್ಲಿಯೇ ಪ್ರಾರ್ಥನೆ ಸಲ್ಲಿಸಿದರು,

ಕಡಿಮೆ ಪೊಲೀಸರ ನಿಯೋಜನೆ…
ಆಯಕಟ್ಟಿನ ಸ್ಥಳಗಳನ್ನು ಹೊರತು ಪಡಿಸಿದರೆ ಪೊಲೀಸರ ನಿಯೋಜನೆ ಕಮ್ಮಿಯಿತ್ತು. ಉಡುಪಿ ಎಸ್ಪಿ ವಿಷ್ಣುವರ್ಧನ್ ಮಾರ್ಗದರ್ಶನದಲ್ಲಿ ಕುಂದಾಪುರ ಎ‌ಎಸ್ಪಿ ನಿರ್ದೇಶನದಲ್ಲಿ ವೃತ್ತನಿರೀಕ್ಷಕರು ಹಾಗೂ ಆಯಾಯ ಠಾಣೆ ಉಪನಿರೀಕ್ಷಕರುಗಳು ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದ್ದರು. ಕೊರೋನಾ ಲಾಕ್‌ಡೌನ್ ಹಿಂದಿನ ವ್ಯವಸ್ಥೆಗೆ ಹೋಲಿಸಿದರೆ ಭಾನುವಾರದಂದು ಪೊಲೀಸರ ನಿಯೋಜನೆ ಕಡಿಮೆಯಿದ್ದರೂ ಕೂಡ ಜನರ ಉತ್ತಮ ಸ್ಪಂದನೆ ಹಿನ್ನೆಲೆ ಎಲ್ಲವೂ ಸಸೂತ್ರವಾಗಿತ್ತು. ಕುಂದಾಪುರ ನಗರ ಸಂಪರ್ಕದ ಶಾಸ್ತ್ರೀ ವೃತ್ತದಲ್ಲಿ ಟ್ರಾಫಿಕ್ ಪೊಲೀಸರನ್ನು ನಿಯೋಜಿಸಿ ವಾಹನಗಳ ತಪಾಸಣೆಯನ್ನು ಮಾಡಲಾಗಿತ್ತು.

(ವರದಿ- ಯೋಗೀಶ್ ಕುಂಭಾಸಿ)

Comments are closed.