ಕರಾವಳಿ

ಇಂದು ಸಂಜೆ ದುಬಾಯಿಂದ ಮಂಗಳೂರಿಗೆ ಬರಲಿದೆ ಎರಡನೇ ವಿಮಾನ : ಆರೋಗ್ಯ ಸುರಕ್ಷಾ ಕವಚದೊಂದಿಗೆ ಸೂಕ್ತ ಸಿದ್ದತೆ

Pinterest LinkedIn Tumblr

ಮಂಗಳೂರು, ಮೇ.18: ವಿದೇಶದಲ್ಲಿರುವ ಭಾರತೀಯರನ್ನು ಮಂಗಳೂರಿಗೆ ಕರೆತರಲು ಹೊರಟ ಎರಡನೇ ವಿಮಾನ ದುಬಾಯಿಯಿಂದ ಇಂದು ಸಂಜೆ 6.30ಕ್ಕೆ ಮಂಗಳೂರಿಗೆ ಆಗಮಿಸಲಿದೆ.

ಲಾಕ್‌ಡೌನ್‌ನಿಂದಾಗಿ ದುಬಾೖಯಲ್ಲಿ ಸಿಲುಕಿ ಕೊಂಡಿರುವ 35 ಗರ್ಭಿಣಿಯರ ಸಹಿತ 173 ಮಂದಿ ಪ್ರಯಾಣಿಕರು ಕೇಂದ್ರ ಸರಕಾರದ “ವಂದೇ ಭಾರತ’ ಕಾರ್ಯಾಚರಣೆಯಂತೆ ದುಬಾೖಯಿಂದ ಎರಡನೇ ವಿಮಾನದಲ್ಲಿ ಮೇ 18ರಂದು ಸಂಜೆ 6.30ಕ್ಕೆ ಮಂಗಳೂರಿಗೆ ಬರಲಿದ್ದಾರೆ. ಮಂಗಳೂರಿನಿಂದ ಸೋಮವಾರ ಬೆಳಗ್ಗೆ ದುಬಾೖಗೆ ತೆರಳುವ ಏರ್‌ ಇಂಡಿಯಾ ವಿಮಾನವು ಅಪರಾಹ್ನ 3ರ ಸುಮಾರಿಗೆ 95 ಪುರುಷರು ಹಾಗೂ 78 ಮಹಿಳಾ ಪ್ರಯಾಣಿಕರೊಂದಿಗೆ ಹೊರಡಲಿದೆ.

ಇದರಲ್ಲಿ ಬರುವ ಪ್ರಯಾಣಿಕರನ್ನು ವೈದ್ಯಕೀಯ ತಪಾಸಣೆ ನಡೆಸಿ, ನಂತರ ಆಸ್ಪತ್ರೆ ಅಥವಾ ಜಿಲ್ಲಾಡಳಿತ ವ್ಯವಸ್ಥೆ ಮಾಡಿರುವ ಕ್ವಾರೆಂಟೈನ್ ಕೇಂದ್ರಗಳಿಗೆ ಜಿಲ್ಲಾಡಳಿತವೇ ವಾಹನದ ಮೂಲಕ ಕರೆದುಕೊಂಡು ಹೋಗಲು ವ್ಯವಸ್ಥೆ ಮಾಡಿದೆ. ವಿದೇಶದಿಂದ ಬರುವ ಪ್ರಯಾಣಿಕರ ಆರೋಗ್ಯ ತಪಾಸಣೆ ಹಾಗೂ ವ್ಯವಸ್ಥೆಗಳ ಪರಿಶೀಲನೆಗಾಗಿ ನಿಲ್ದಾಣದಲ್ಲಿ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಕ್ವಾರಂಟೈನ್‌ ಕೇಂದ್ರಗಳಿಗೆ ಕರೆದೊಯ್ಯಲು ಬಸ್‌ ವ್ಯವಸ್ಥೆ ಮಾಡಲಾಗಿದೆ.

ಮೇ 12ರಂದು ಸೂಕ್ತ ವ್ಯವಸ್ಥೆ ಕಲ್ಪಿಸಿಲ್ಲ ಎಂಬ ಆರೋಪ :

ಮೇ 12ರಂದು ದುಬಾೖಯಿಂದ ಮಂಗಳೂರಿಗೆ 177 ಪ್ರಯಾಣಿಕರಿರುವ ಮೊದಲ ವಿಮಾನ ಆಗಮಿಸಿತ್ತು. ಈ ವೇಳೆ ದುಬಾೖಯಿಂದ ಆಗಮಿಸಿದ ಪ್ರಯಾಣಿಕರಿಗೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಜಿಲ್ಲಾಡಳಿತದಿಂದ ಸೂಕ್ತ ವ್ಯವಸ್ಥೆ ಕಲ್ಪಿಸಿಲ್ಲ ಎಂಬ ಆರೋಪ ಕೇಳಿಬಂದಿತ್ತು.

ಈ ಸಂಬಂಧ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್‌ ಶನಿವಾರ ಖುದ್ದು ನಿಲ್ದಾಣಕ್ಕೆ ತೆರಳಿ ಸೋಮವಾರ ಆಗಮಿಸುವ ಪ್ರಯಾಣಿಕರಿಗೆ ಸಮಸ್ಯೆ ಆಗದಂತೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಜತೆಗೆ ಸಂಸದ ನಳಿನ್‌ ಕುಮಾರ್‌ ಕಟೀಲು ಅವರು ರವಿವಾರ ಸಂಜೆ ಮಂಗಳೂರಿನಲ್ಲಿ ಜಿಲ್ಲಾಡಳಿತದ ಜತೆಗೆ ಸಭೆ ನಡೆಸಿ ಎಲ್ಲ ಸಿದ್ಧತೆ ನಡೆಸುವಂತೆ ಸೂಚಿಸಿದ್ದಾರೆ.

ಪ್ರಯಾಣಿಕರ ಪೈಕಿ ದ.ಕ. ಜಿಲ್ಲೆಯವರಿಗೆ ಮಂಗಳೂರಿನಲ್ಲಿ ಕ್ವಾರಂಟೈನ್‌ ವ್ಯವಸ್ಥೆ ಮಾಡಲಾಗಿದ್ದು, ಉಡುಪಿ ಹಾಗೂ ಇತರ ಜಿಲ್ಲೆಗಳ ಪ್ರಯಾಣಿಕರಿಗೆ ಆಯಾಯ ಜಿಲ್ಲೆಗಳಲ್ಲಿ ಕ್ವಾರಂಟೈನ್‌ ಮಾಡಲು ಆಯಾ ಜಿಲ್ಲಾಡಳಿತ ವ್ಯವಸ್ಥೆ ಕಲ್ಪಿಸಲಿದೆ.

ಲಗೇಜ್‌ ಸಮಸ್ಯೆಗೂ ಪರಿಹಾರ:

ಪ್ರಯಾಣಿಕರ ಲಗೇಜ್‌ಗಳನ್ನು ಕೊಂಡೊಯ್ಯಲು ಜಿಲ್ಲಾಡಳಿತದ ವತಿಯಿಂದ ಕೆಲವರನ್ನು ಆರೋಗ್ಯ ಸುರಕ್ಷಾ ಕವಚದೊಂದಿಗೆ ನೇಮಿಸಲು ಜಿಲ್ಲಾಡಳಿತ ನಿರ್ಧರಿಸಿದೆ.

ಸಾರ್ವಜನಿಕರಿಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಪ್ರವೇಶ ನಿರ್ಬಂಧ :

ವಿದೇಶದಲ್ಲಿರುವ ಭಾರತೀಯರು ಮಂಗಳೂರಿಗೆ ಆಗಮಿಸುತ್ತಿರುವ ಸಂದರ್ಭ ಅವರನ್ನು ವೈದ್ಯಕೀಯ ತಪಾಸಣೆ ನಡೆಸಿ, ನಂತರ ಆಸ್ಪತ್ರೆ ಅಥವಾ ಜಿಲ್ಲಾಡಳಿತ ವ್ಯವಸ್ಥೆ ಮಾಡಿರುವ ಕ್ವಾರೆಂಟೈನ್ ಕೇಂದ್ರಗಳಿಗೆ ಕಳಿಸಲು ಇರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಅಥವಾ ಪ್ರಯಾಣಿಕರ ಕುಟುಂಬಸ್ಥರಿಗೆ ವಿಮಾನ ನಿಲ್ದಾಣಕ್ಕೆ ಬರಲು ಅವಕಾಶ ಇಲ್ಲ. ಅಲ್ಲದೇ, ಕ್ವಾರೆಂಟೈನ್ ಕೇಂದ್ರಗಳಿಗೂ ಸಾರ್ವಜನಿಕರಿಗೆ ಪ್ರವೇಶವಿಲ್ಲ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

Comments are closed.