ಕರಾವಳಿ

ಉಡುಪಿ ಜಿಲ್ಲೆಯಲ್ಲಿ‌ ನಾಳೆಯಿಂದ ಬೆಳಿಗ್ಗೆ 7 ರಿಂದ ಸಂಜೆ 7 ತನಕ ಅಂಗಡಿಗಳು, 9ರಿಂದ 7 ರ ತನಕ ಮದ್ಯ ಮಾರಾಟಕ್ಕೆ ಅನುಮತಿ

Pinterest LinkedIn Tumblr

ಉಡುಪಿ: ಉಡುಪಿ ಜಿಲ್ಲೆಯನ್ನು ಹಸಿರು ವಲಯ ಎಂದು ಘೋಷಿಸಿದ ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಾರ್ಗ ಸೂಚಿಯಂತೆ ಉಡುಪಿಯ ಜನಸಾಮಾನ್ಯರ ಪರಿಸ್ಥಿತಿ ಅರಿತು ಬೆಳಿಗ್ಗೆ 7ರಿಂದ ಸಂಜೆ 7ರವರೆಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಮಾಲೀಕರು ಅಂಗಡಿಯನ್ನು ತೆರೆದು ವ್ಯವಹಾರವನ್ನು ಮಾಡುವಂತೆ ನಿರ್ಣಯಿಸಲಾಯಿತು.

ಇಂದು ಉಡುಪಿ ಮಣಿಪಾಲದ ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕ ರಘುಪತಿ ಭಟ್, ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶ್ರೀನಿವಾಸ ಶೆಟ್ಟಿ, ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಸುಕುಮಾರ ಶೆಟ್ಟಿ ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ಲಾಲಾಜಿ ಮೆಂಡನ್ ಹಾಗೂ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಇವರೆಲ್ಲರೂ ಚರ್ಚಿಸಿ ಈ ಕೆಳಗಿನ ತೀರ್ಮಾನಗಳನ್ನು ನಿರ್ಣಯಿಸಲಾಯಿತು.

ಈ ಹಿಂದೆ ಉಡುಪಿ ಜಿಲ್ಲೆಯಲ್ಲಿ ಬೆಳಿಗ್ಗೆ 7 ರಿಂದ 11ರ ತನಕ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿತ್ತು. ಸೋಮವಾರದಿಂದ ಎರಡು ಗಂಟೆಗಳ ಹೆಚ್ಚುವರಿ ಸಮಯ ನೀಡಿ ಮಧ್ಯಾಹ್ನ 1 ಗಂಟೆ ತನಕ ವಿಸ್ತರಿಲಸಾಗಿತ್ತು. ಆದರೆ ಅಂಗಡಿಗಳ ಎದುರು ಜನದಟ್ಟಣೆ ನಿರ್ಮಾಣವಾಗಿ‌ ಸಾಮಜಿಕ ಅಂತರ ಕಾಯ್ದುಕೊಳ್ಳಲು ಸಮಸ್ಯೆಯಾಗುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ನಿತ್ಯ ಬಳಕೆ ವಸ್ತು ಖರೀದಿಗೆ ಬೆಳಿಗ್ಗೆ 7 ರಿಂದ ಸಂಜೆ 7 ರ ತನಕ ಅವಕಾಶ ಹಾಗೂ ಮದ್ಯದ ಅಂಗಡಿಗಳನ್ನು ಬೆಳಿಗ್ಗೆ 9 ಗಂಟೆಯಿಂದ ಸಂಜೆ 7ರ ತನಕ ತೆರಯಲು ಅವಕಾಶ ಕಲ್ಪಿಸಲಾಗಿದೆ. ಸಂಜೆ 7 ರಿಂದ ಬೆಳಿಗ್ಗೆ 7 ಗಂಟೆವರೆಗೆ ಸಾರ್ವಜನಿಕ ಸಂಚಾರ ನಿಷೇಧಿಸಲಾಗಿದೆ. ಮಾಸ್ಕ್ ಬಳಕೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಪಾಲನೆ‌ಅಗತ್ಯ.‌ ನಿಯಮ ಮೀರಿದರೆ ಕಾನೂನು ಅಡಿಯಲ್ಲಿ ಕ್ರಮಕೈಗೊಳ್ಳಲಾಗುತ್ತದೆ ಎಂದು ಉಡುಪಿ‌ ಡಿಸಿ ಜಿ. ಜಗದೀಶ್ ತಿಳಿಸಿದ್ದಾರೆ.

(ವರದಿ- ಯೋಗೀಶ್ ಕುಂಭಾಸಿ)

Comments are closed.