ಕರಾವಳಿ

ಮದ್ಯ ಮಾರಾಟಕ್ಕೆ ಅನುಮತಿ ಹಿನ್ನೆಲೆ: ಮಂಗಳೂರಿನ ವೈನ್ ಶಾಪ್‌ಗಳ ಮುಂದೆ ಕ್ಯೂ..

Pinterest LinkedIn Tumblr

ಮಂಗಳೂರು, ಮೇ.04 : ಇಂದಿನಿಂದ ದೇಶದಾದ್ಯಂತ ಮೂರನೇ ಹಂತದ ಲಾಕ್‌ಡೌನ್‌ ಮುಂದುವರೆ ಯಲಿದ್ದು ಈ ಮಧ್ಯೆ ರಾಜ್ಯದ ಕಂಟೈನ್ ಮೆಂಟ್ ಝೋನ್ ಹೊರತುಪಡಿಸಿ ಎಲ್ಲಾ ಝೋನ್ ಗಳಲ್ಲಿ ವೈನ್ ಶಾಪ್ ತೆರೆದು ಮದ್ಯ ಮಾರಾಟಕ್ಕೆ ಅನುಮತಿ ನೀಡಲಾಗಿದ್ದು, ಮದ್ಯಪ್ರಿಯರ ಮುಖದಲ್ಲಿ ಮಂದಹಾಸ ಮೂಡಿಸಿದೆ.

ದ.ಕ. ಜಿಲ್ಲಾಡಳಿತವು ಇಂದಿನಿಂದ ಮದ್ಯ ಮಾರಾಟಕ್ಕೆ ಷರತ್ತಿನ ಅನುಮತಿ ನೀಡಿದ್ದು, ಜಿಲ್ಲೆಯಲ್ಲಿ ಬೆಳಗ್ಗೆ 9 ರಿಂದ ಸಂಜೆ 7ರ ವರೆಗೆ ಮಾತ್ರ ಮದ್ಯ ಮಾರಾಟಕ್ಕೆ ಅನುಮತಿ ನೀಡಿದೆ. ಹೀಗಾಗಿ ಒಂದೊಮ್ಮೆ ಮದ್ಯ ಖಾಲಿಯಾದರೆ ಎಂಬ ಚಿಂತೆಯಲ್ಲಿ ಮಂಗಳೂರಿನ ನಗರದಲ್ಲಿ ಮತ್ತು ಹೊರಭಾಗದ ವೈನ್ ಶಾಪ್ ಗಳಲ್ಲಿ ಮುಂಜಾನೆ 6 ಗಂಟೆಗೆ ವೈನ್‌ ಶಾಪ್‌ಗಳ ಮುಂದೆ ಮದ್ಯಪ್ರಿಯರು ಸರದಿ ಸಾಲಿನಲ್ಲಿ ನಿಂತಿದ್ದರು.

ಮಂಗಳೂರು ನಗರ ಮಾತ್ರವಲ್ಲದೆ ಗ್ರಾಮಾಂತರ ಭಾಗಗಳಲ್ಲೂ ಬೆಳ್ಳಂಬೆಳಗ್ಗೆಯೇ ಮದ್ಯ ಖರೀದಿಸಲು ಕ್ಯೂ ನಿಂತಿದ್ದ ದೃಶ್ಯ ಕಂಡುಬಂತು. ಇನ್ನು ಬೆಂಗಳೂರಿನ ಕೆಲವು ಭಾಗಗಳಲ್ಲಿ ವೈನ್ ಶಾಪ್ ಮುಂದೆ ನೂರಾರು ಜನರು ನೆರೆದು ನೂಕುನುಗ್ಗಲು ಉಂಟಾಯಿತು.

ಕೊರೊನಾ ಹರಡುವುದನ್ನು ತಡೆಯಲು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಭದ್ರತೆ ಜವಾಬ್ದಾರಿ ವೈನ್ ಶಾಪ್ ಮಾಲಕರೇ ವಹಿಸಬೇಕು ಎಂದು ಸರಕಾರದ ಆದೇಶದಲ್ಲಿ ಹೇಳಿದ್ದ ಕಾರಣ ವೈನ್‌ ಶಾಪ್‌ಗಳ ಮುಂದೆ ನಿನ್ನೆಯೇ ಗ್ರಾಹಕರು ನಿಲ್ಲಲು ಸ್ಥಳಕ್ಕೆ ಗುರುತು ಹಾಕಲಾಗಿದ್ದು ಬ್ಯಾರಿಕೇಡ್ ಹಾಕಲಾಗಿತ್ತು.

ಜಿಲ್ಲೆಯಲ್ಲಿ ಮದ್ಯ ಮಾರಾಟಕ್ಕೆ ಷರತ್ತುಗಳು:

ದ.ಕ.ಜಿಲ್ಲೆಯಲ್ಲೂ ಮದ್ಯ ಮಾರಾಟ ಮಳಿಗೆಗಳಿಗೆ ಕೆಲವೊಂದು ಷರತ್ತುಗಳನ್ನು ವಿಧಿಸಲಾಗಿದೆ. ವೈನ್ ಶಾಪ್ ಗಳಲ್ಲಿ ಮೂವರು ಮಾತ್ರ ಸಿಬಂದಿ ಇರಬೇಕು. ಮದ್ಯ ಮಳಿಗೆಯ ಒಳಗೆ ಐವರು, ಹೊರಗೆ ಐವರು ಗ್ರಾಹಕರಿಗೆ ಮಾತ್ರ ಅವಕಾಶ ನೀಡಬೇಕು, ಅಂಗಡಿ ಮುಂಭಾಗದಲ್ಲಿ ಬ್ಯಾರಿಕೇಡ್ ಅಳವಡಿಸಿ, ಕಾವಲು ಹಾಕಬೇಕು, ಇಬ್ಬರು ಭದ್ರತಾ ಸಿಬಂದಿಗಳನ್ನು ಅಳವಡಿಸ ಬೇಕು, ಗ್ರಾಹಕರು, ಸಿಬಂದಿ ಕಡ್ಡಾಯವಾಗಿ ಮಾಸ್ಕ್ ಹಾಕಿರಬೇಕು, ಮಾತ್ರವಲ್ಲದೇ ಮದ್ಯದ ಅಂಗಡಿಯಲ್ಲಿ ಸಿಸಿ ಕ್ಯಾಮರಾ ಅಳವಡಿಸಿರಬೇಕು ಎಂಬ ಷರತ್ತುಗಳನ್ನು ಮದ್ಯದಂಗಡಿ ಮಾಲಕರಿಗೆ ಹಾಕಲಾಗಿತ್ತು.

Comments are closed.