ಉಡುಪಿ: ಎಲ್ಲೆಡೆ ಕೊರೋನಾ ಭೀತಿಯಿಂದ ಜನರು ಕಂಗೆಟ್ಟಿದ್ದು ಕೆಲವು ಕಡೆ ಜುಗಾರಿಕೋರರು ಮಾತ್ರ ತಮ್ಮ ಚಾಳಿ ಬಿಡುತ್ತಿಲ್ಲ. ಬ್ರಹ್ಮಾವರ ತಾಲೂಕು ಕಾವಡಿ ಗ್ರಾಮದ ಹೌರಾಲ ಎಂಬಲ್ಲಿರುವ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ಕೋಳಿ ಅಂಕ ಜುಗಾರಿ ಆಡುತ್ತಿದ್ದ 7 ಮಂದಿಯನ್ನು ಕೋಟ ಪೊಲೀಸರು ಬಂಧಿಸಿದ್ದಾರೆ. ಕೋಟ ಪೊಲೀಸ್ ಠಾಣೆ ಉಪನಿರೀಕ್ಷಕ ನಿತ್ಯಾನಂದ ಗೌಡ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ.

ಸ್ಥಳೀಯ ನಿವಾಸಿ ಮಧುಕರ ಶೆಟ್ಟಿ, ಜಯರಾಮ ಶೆಟ್ಟಿ, ಪ್ರಶಾಂತ, ರಾಘವೇಂದ್ರ ಪೂಜಾರಿ ಕಾರ್ಕಡ, ಲೊಕೇಶ್ ನಾಯ್ಕ್ ಹೇರಾಡಿ, ಸುಧಾಕರ ಪೂಜಾರಿ ಕಾರ್ಕಡ, ಸುಕೇತ ನಾಯ್ಕ್ ಹೇರಾಡಿ ಬಂಧಿತ ಆರೋಪಿಗಳು.
ಬಂಧಿತರಿಂದ ಜುಗಾರಿಗೆ ಬಳಸಿದ ಒಟ್ಟು 6,880 ರೂಪಾಯಿ, 1000 ರೂಪಾಯಿ ಮೌಲ್ಯದ 2 ಕೋಳಿಗಳು, 8 ದ್ವಿಚಕ್ರ ವಾಹನಗಳನ್ನು ಸ್ವಾಧೀನ ಪಡಿಸಿಕೊಂಡಿದ್ದು ಇವುಗಳ ಒಟ್ಟು ಮೌಲ್ಯ 1 ಲಕ್ಷದ 72 ಸಾವಿರದ 880 ರೂಪಾಯಿ ಆಗಿದೆ.
ಸಾರ್ವಜನಿಕ ಸ್ಥಳದಲ್ಲಿ ಕಾನೂನು ಬಾಹಿರವಾಗಿ ಕೋಳಿ ಅಂಕ ಜುಗಾರಿ ಆಟ ಆಡುತ್ತಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆ ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿದಾಗ ಕೆಲವರು ಗುಂಪು ಸೇರಿ ಕೋಳಿಗಳ ಕಾಲಿಗೆ ಹರಿತವಾದ ಬ್ಲೇಡ್‌ನಂತಹ ಬಾಳ್‌ನ್ನು ಕಟ್ಟಿ ಅವುಗಳು ಕಾದಾಡುವಂತೆ ಮಾಡಿ ಅವುಗಳ ಮೇಲೆ ಹಣವನ್ನು ಪಣವಾಗಿ ಕಟ್ಟಿ ಗೆದ್ದ ಕೋಳಿಯ ಮಾಲಕ ಲಾಭ ಗಳಿಸುತ್ತಿರುವುದು ಕಂಡುಬಂದಿದೆ.
ಪೊಲೀಸರನ್ನು ಕಂಡ ಜುಗಾರಿಕೋರರು ತಮ್ಮ ಕೋಳಿಗಳೊಂದಿಗೆ ಓಡಿದ್ದು ಸಿಬ್ಬಂದಿಗಳ ಸಹಾಯದಿಂದ ಬೆನ್ನುಹತ್ತಿ 7 ಜನ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ವಿಚಾರಿಸಿದಲ್ಲಿ ಅವರುಗಳು ಲಾಭಗಳಿಸುವ ಉದ್ದೇಶದಿಂದ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣವಾಗಿ ಕಟ್ಟಿ ಕೋಳಿ ಅಂಕ ಜುಗಾರಿ ನಡೆಸಿಕೊಂಡಿದ್ದಾಗಿ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ.
ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
(ವರದಿ- ಯೋಗೀಶ್ ಕುಂಭಾಸಿ)
Comments are closed.