ಕರಾವಳಿ

ಆನ್‌ಲೈನ್ ಬೆಟ್ಟಿಂಗ್, ಗಾಂಜಾ, ಅಕ್ರಮ ಗಣಿಗಾರಿಕೆ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ: ಐಜಿಪಿ ದೇವಜ್ಯೋತಿ ರಾಯ್

Pinterest LinkedIn Tumblr

ಕುಂದಾಪುರ: ಆನ್ ಲೈನ್ ಮೂಲಕ ನಡೆಯುತ್ತಿರುವ ಬೆಟ್ಟಿಂಗ್, ಗಾಂಜಾ ಸಾಗಾಟ ಮತ್ತು ಮಾರಾಟ, ಅಕ್ರಮ ಮರಳು ಮತ್ತು ಕಲ್ಲು ಗಣಿಗಾರಿಕೆ ನಡೆಸುವ ದಂಧೆ ಕೋರರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸ್ ಅಧಿಕಾರಿಗಳಿಗೆ ಪಶ್ಚಿಮ ವಲಯ ನೂತನ ಐಜಿಪಿ ದೇವಜ್ಯೋತಿ ರಾಯ್ ನಿರ್ದೇಶನ ನೀಡಿದ್ದಾರೆ.

ಬುಧವಾರ ಮಧ್ಯಾಹ್ನ ಕುಂದಾಪುರ ಪೊಲೀಸ್ ಉಪವಿಭಾಗ ಕಚೇರಿಗೆ ಆಗಮಿಸಿ ಉಪವಿಭಾಗ ವ್ಯಾಪ್ತಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಅವರು ಮಾಧ್ಯಮದ ಜೊತೆ ಮಾತನಾಡಿದರು.

ದಂಧೆಕೋರಾರ ವಿರುದ್ಧ ಕ್ರಮ: ಐಜಿಪಿ ರಾಯ್
ಜಿಲ್ಲೆಯಾದ್ಯಂತ ಆನ್‌ಲೈನ್ ಮೂಲಕ ನಡೆಯುವ ಕ್ರಿಕೇಟ್ ಹಾಗೂ ಇತರೆ ಕ್ರೀಡೆಗಳ ಬೆಟ್ಟಿಂಗ್, ಗಾಂಜಾ ಅವ್ಯವಹಾರ, ಅಕ್ರಮ ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ಮಾಹಿತಿ ಪಡೆದ ಅವರು ಈ ಬಗ್ಗೆ ಪೊಲೀಸರು ಸೂಕ್ತ ಗಮನ ಹರಿಸಲಿದ್ದಾರೆ. ಗಾಂಜಾ ಸಾಗಾಟ ಮತ್ತು ಮಾರಾಟ ಮಾಡುವ ಕಿಂಗ್ ಫಿನ್ ಗಳನ್ನು ಪತ್ತೆಹಚ್ಚಿ ಕಾನೂನು ಕ್ರಮಕೈಗೊಳ್ಳಲಾಗುತ್ತದೆ. ಅಕ್ರಮ ಮರಳುಗಾರಿಕೆ ಹಾಗೂ ಕಲ್ಲು ಗಣಿಗಾರಿಕೆಯ ಬಗ್ಗೆಯೂ ಕಟಿನ ಕ್ರಮಕೈಗೊಳ್ಳುವಂತೆ ಎಸ್ಪಿ ಹಾಗೂ ಎಎಸ್ಪಿ ಅವರಿಗೆ ಸೂಚನೆ ನೀಡಿದರು. ಆನ್‌ಲೈನ್ ಬೆಟ್ಟಿಂಗ್ ಕುರಿತು ದೂರುಗಳಿದ್ದು ಎರಡು ಬಾರಿ ಪ್ರಕರಣ ದಾಖಲಿಸಿ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಲಾಗಿದೆ. ಮುಂದಿನ ದಿನಗಳಲ್ಲಿ ಮತ್ತೆ ಈ ಕುರಿತು ಕ್ರಮಕೈಗೊಳ್ಳಲಾಗುವುದು. ಸಾರ್ವಜನಿಕರು ಯಾವುದೇ ಅಕ್ರಮಗಳ ಕುರಿತು ನಿರ್ಭೀತಿಯಿಂದ ನೇರ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬಹುದು ಎಂದರು.

ಒಂದೆರಡು ವಾರದಲ್ಲಿ ಕೋಟ ಠಾಣೆ ಕಟ್ಟಡ ಉದ್ಘಾಟನೆ….
ಕೋಟ ಠಾಣೆಯ ನೂತನ ಕಟ್ಟಡ ನಿರ್ಮಾಣಗೊಂಡು ಬಹಳಷ್ಟು ತಿಂಗಳಾದರೂ ಕೂಡ ಉದ್ಘಾಟನೆ ಯಾಕೆ ಆಗಿಲ್ಲ ಎಂಬ ಪತ್ರಕರ್ತರ ಪತ್ರಕರ್ತರ ಪ್ರಶ್ನೆಗೆ ಎಸ್‌ಪಿಯಿಂದ ಮಾಹಿತಿ ಪಡೆದುಕೊಂಡ ಐಜಿಪಿ ಅವರು ಠಾಣಾ ಕಟ್ಟಡದ ಕಾಮಗಾರಿಯಲ್ಲಿ ಲೋಪ ಉಂಟಾಗಿದ್ದು ಅದನ್ನು ಸರಿಪಡಿಸಿಕೊಡಲು ಸೂಚಿಸಲಾಗಿದೆ. ಒಂದೆರಡು ವಾರದಲ್ಲಿ ಈ ಠಾಣೆ ಉದ್ಘಾಟನೆ ನಡೆಯಲಿದೆ ಎಂದರು. ಅಧಿಕಾರ ವಹಿಸಿಕೊಂಡು ಮೂರು ದಿನಗಳಷ್ಟೇ ಆಗಿದ್ದು ಪಶ್ಚಿಮ ವಲಯ ವ್ಯಾಪ್ತಿಯ ಪರಿಚಯ ಹಾಗೂ ಅಧಿಕಾರಿಗಳ ಜತೆ ವಿಚಾರ ವಿನಿಮಯ ನಡೆಸುವ ನಿಟ್ಟಿನಲ್ಲಿ ಆಗಮಿಸಿದ್ದೇನೆ. ಪಶ್ಚಿಮ ವಲಯ ವ್ಯಾಪ್ತಿಯಲ್ಲಿ ನಕ್ಸಲ್ ಚಟುವಟಿಕೆ ಕುರಿತು ಸದ್ಯಕ್ಕೆ ಮಾಹಿತಿಗಳಿಲ್ಲ. ಅಂತಹ ಚಟುವಟಿಕೆ ಕಂಡುಬಂದರೆ ಪೊಲೀಸರು ಅಗತ್ಯಕ್ರಮ ಕೈಗೊಳ್ಳಲಿದ್ದಾರೆ. ಮಹಿಳಾ ಠಾಣೆ ಕುಂದಾಪುರಕ್ಕೆ ಬೇಕೆಂಬ ಬೇಡಿಕೆ ಕುರಿತು ಕೇಳಿದಾಗ, ಸದ್ಯ ಜಿಲ್ಲೆಗೊಂದು ಮಹಿಳಾ ಠಾಣೆಯಾಗಿದ್ದು ಸದ್ಯ ಉಡುಪಿಯಲ್ಲಿ ಈ ಠಾಣೆ ಕಾರ್ಯನಿರ್ವಹಿಸುತ್ತಿದೆ. ಮುಂದಿನ ದಿನಗಳಲ್ಲಿ ಈ ಕುರಿತು ಪರಿಶೀಲಿಸಿ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.

ಪೊಲೀಸ್ ಠಾಣೆಗಳಲ್ಲಿ ಸಿಬಂದಿಗಳ ಕೊರತೆಯಿದ್ದು ಇದರಿಂದ ಕೊಂಚ ಸಮಸ್ಯೆಯಾಗುತ್ತಿದ್ದು ಇರುವ ವ್ಯವಸ್ಥೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲಾಗುತ್ತಿದೆ ಎಮ್ದ ಅವರು ಹಳೆಯದಾದ ಪೊಲೀಸ್ ಇಲಾಖಾ ವಾಹನಗಳ ಕುರಿತು ಕೇಳಿದಾಗ, ಉಡುಪಿ ಜಿಲ್ಲೆಗೆ ಒಂದು ವಾಹನ ನೀಡಲಾಗಿದ್ದು ಯಾವುದೇ ಠಾಣೆಯಿಂದ ವಾಹನಕ್ಕೆ ಬೇಡಿಕೆ ಬಂದಾಗ ತತ್‌ಕ್ಷಣ ಮಂಜೂರು ಮಾಡಲಾಗುವುದು ಎಂದರು.

ಕೊರೊನಾ ಜಾಗ್ರತಿ ಅಗತ್ಯ: ಐಜಿಪಿ
ಆರೋಗ್ಯದ ಕಾಳಜಿಯಿಂದಾಗಿ ಕೊರೊನಾ ಕುರಿತು ಸಾರ್ವಜನಿಕರು ಸೇರಿದಂತೆ ಪೊಲೀಸರು ಹಾಗೂ ಎಲ್ಲಾ ವರ್ಗದ ನೌಕರರು ಕೂಡಾ ಜಾಗರೂಕರಾಗಿರಬೇಕು. ಮುಂಜಾಗ್ರತ ಕ್ರಮವಾಗಿ ಈಗಾಗಲೇ ಸರಕಾರ ಆದೇಶಿಸಿರುವ ನಿರ್ದೇಶನಗಳನ್ನು ಪಾಲಿಸಬೇಕು ಎಂದರು.

ಈ ಸಂದರ್ಭ ಉಡುಪಿ ಎಸ್‌ಪಿ ವಿಷ್ಣುವರ್ಧನ್, ಕುಂದಾಪುರ ಎ‌ಎಸ್‌ಪಿ ಹರಿರಾಮ್ ಶಂಕರ್ ಉಪಸ್ಥಿತರಿದ್ದರು.

(ವರದಿ- ಯೋಗೀಶ್ ಕುಂಭಾಸಿ)

Comments are closed.