ಕರಾವಳಿ

ಮಂಗಳೂರಿನಲ್ಲಿ ಮಾಲ್, ಸಿನಿಮಾ ಮಂದಿರಗಳು ಬಂದ್ : ಜನಸಂದಣಿ ವಿರಳ – ವ್ಯಾಪರ ವಹಿವಾಟುಗಳಿಗೆ ದಕ್ಕೆ

Pinterest LinkedIn Tumblr

ಮಂಗಳೂರು, ಮಾರ್ಚ್.14: ಕೊರೋನಾ ವೈರಸ್ ಮುಂಜಾಗ್ರತೆ ಹಾಗೂ ಅದನ್ನು ತಡೆಯುವ ನಿಟ್ಟಿನಲ್ಲಿ ಮಾರ್ಚ್ 14ರಿಂದ ಕರ್ನಾಟಕದಲ್ಲಿ ಸಾರ್ವಜನಿಕರು ಹೆಚ್ಚಾಗಿ ಸೇರುವ ಸ್ಥಳಗಳನ್ನು ಒಂದು ವಾರ ಬಂದ್ ಮಾಡಲು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಸೂಚನೆ ನೀಡಿ ಮಹತ್ವದ ಆದೇಶ ನೀಡಿದ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಮಾಲ್, ಸಿನಿಮಾ ಮಂದಿರಗಳನ್ನು ಶನಿವಾರದಿಂದ ಬಂದ್ ಮಾಡಲಾಗಿದೆ.

ಬಿಜೈ ಕೆ ಎಸ್ ಆರ್ ಟಿಸಿ ಬಸ್ ನಿಲ್ದಾಣದ ಸಮೀಪದ ಬಿಗ್ ಬಝಾರ್, ಪಾಂಡೇಶ್ವರದ ಫಿಝಾ ಮಾಲ್, ಹಂಪನಕಟ್ಟೆಯ ಸಿಟಿಸೆಂಟರ್ ಮಾಲ್ ಗಳು, ಸಿನಿಮಾ ಮಂದಿರಗಳ ಪ್ರವೇಶ ದ್ವಾರಗಳನ್ನು ಬಂದ್ ಮಾಡಲಾಗಿದೆ. ಸ್ಟೇಟ್ ಬ್ಯಾಂಕ್ ಬಳಿಯ ಮೀನು ಮಾರುಕಟ್ಟೆ, ಧಕ್ಕೆಯಲ್ಲಿ ಸಾಧಾರಣ ಜನಸಂದಣಿ ಜತೆ ಮಾರಾಟ ವಹಿವಾಟು ನಡೆಯುತ್ತಿದೆ. ಕೇಂದ್ರ ಮಾರುಕಟ್ಟೆಯಲ್ಲಿ ಜನಸಂದಣಿ ಸಾಧಾರಣವಾಗಿದ್ದು, ವ್ಯಾಪಾರ ನಡೆಯುತ್ತಿದೆ.

ನಗರದ ಕೆಲವು ಸೂಪರ್ ಮಾರ್ಕೆಟ್ ಗಳು ಮತ್ತು ಅತ್ತಾವರದ ಬಿಗ್ ಬಝಾರ್ ತೆರೆದಿವೆ. ಆದರೆ ಜನ ಸಂಚಾರ ವಿರಳವಾಗಿದ್ದು, ವ್ಯಾಪರ ಕುಂಟಿತಗೊಂಡಿದೆ. ಹಾಸ್ಟೆಲ್ ಗಳಲ್ಲಿರುವ ಹೊರ ರಾಜ್ಯಗಳ ವಿದ್ಯಾರ್ಥಿಗಳು, ಮಾಲ್ ಗಳಿಗೆ ಸುತ್ತಾಡಲು ಬಂದವರನ್ನು ಮಾಲ್ ಗಳ ಸೆಕ್ಯುರಿಟಿ ಗಾರ್ಡ್ ಗಳು ಹಿಂದಕ್ಕೆ ಕಳುಹಿಸುತ್ತಿದ್ದಾರೆ. ಮಕ್ಕಳೊಂದಿಗೆ ಕೆಲವು ಪೋಷಕರು ಮಾಲ್ ಗಳತ್ತ ಆಗಮಿಸಿ ವಿಚಾರಿಸಿ ಹಿಂತಿರುಗುತ್ತಿದ್ದಾರೆ. ಉಳಿದಂತೆ ನಗರಲ್ಲಿ ಹೊಟೇಲ್ ಅಂಗಡಿ ಮುಂಗಟ್ಟುಗಳು ತೆರೆದಿವೆ.

ಮಾಲ್ ಗಳ ಸಿಬ್ಬಂದಿಗೆ ನಿನ್ನೆ ಸೂಚನೆ ಸಿಗದ ಹಿನ್ನೆಲೆಯಲ್ಲಿ ಕೆಲವರು ಆಗಮಿಸಿ ಹಿಂತಿರುಗುತ್ತಿದ್ದಾರೆ. ಶನಿವಾರ ಹಾಗು ರವಿವಾರ ಮಾಲ್ ಗಳಿಗೆ ಸಾರ್ವಜನಿಕರ ಸಂಖ್ಯೆ ಅಧಿಕವಾಗಿರುತ್ತದೆ. ಸರಕಾರಿ ಕಚೇರಿಗಳು, ಬ್ಯಾಂಕ್ ಗಳಿಗೆ ಇಂದು ಮಾಸಿಕ ದ್ವಿತೀಯ ಶನಿವಾರ ಆಗಿದ್ದು ಬಂದ್ ಆಗಿವೆ.

ಸರಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಲು ಜಿಲ್ಲಾಧಿಕಾರಿ ಸೂಚನೆ:

ಕರೋನ ಕಾಯಿಲೆ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು ಸಾರ್ವಜನಿಕ ಸ್ಥಳಗಳಲ್ಲಿ ಕೆಲವು ನಿರ್ಬಂಧಗಳನ್ನು ಹೇರಿದ್ದು, ಇವುಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ನಿರ್ದೇಶಿಸಿದ್ದಾರೆ.

ಮಾಲ್ ಗಳು, ಚಿತ್ರಮಂದಿರ, ನಾಟಕ, ರಂಗಮಂದಿರ, ಪಬ್, ನೈಟ್ ಕ್ಲಬ್ ಗಳು, ವಸ್ತುಪ್ರದರ್ಶನ, ಸಂಗೀತ ಕಾರ್ಯಕ್ರಮಗಳು, ಕ್ಲಬ್ ಗಳು, ಮ್ಯಾರಥಾನ್, ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಭಾಗವಹಿಸುವ ಕ್ರೀಡಾಕೂಟಗಳು, ಹೆಚ್ಚು ಜನರು ಭಾಗವಹಿಸುವ ಮದುವೆಗಳನ್ನು ರಾಜ್ಯ ಸರಕಾರ ನಿರ್ಬಂಧಿಸಿದೆ.

ಜಾತ್ರೆ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಕಡಿಮೆ ಸಂಖ್ಯೆಯಲ್ಲಿ ಸಾರ್ವಜನಿಕರು ಸೇರುವಂತೆ ಆಯೋಜಕರು ಗಮನಹರಿಸಬೇಕು. ಹೆಚ್ಚು ಜನರು ಇರುವ ಸ್ವಿಮಿಂಗ್ ಪೂಲ್ ಹಾಗೂ ಜಿಮ್ ಗಳನ್ನು ಮುಚ್ಚಬೇಕು. ಶಾಲಾ ಕಾಲೇಜು, ವಿಶ್ವವಿದ್ಯಾಲಯ, ಕೋಚಿಂಗ್ ಸೆಂಟರ್ ಗಳಿಗೆ ರಜೆ ಸಾರಲಾಗಿದ್ದು, ನಿಗದಿತ ಪರೀಕ್ಷೆಗಳನ್ನು ಮುಂಜಾಗ್ರತೆಯಲ್ಲಿ ನಡೆಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.

ಯಾವೂದೆಲ್ಲಾ ಬಂದ್ – ಇಲ್ಲಿದೆ ಮಾಹಿತಿ :

ಕೊರೋನಾ ವೈರಸ್ ಮುಂಜಾಗ್ರತೆ ಹಾಗೂ ಅದನ್ನು ತಡೆಯುವ ನಿಟ್ಟಿನಲ್ಲಿ ಮತ್ತು ರಾಜ್ಯದ ಜನರ ಆರೋಗ್ಯದ ಹಿತದ್ರಷ್ಟಿಯಿಂದ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.

ಒಂದು ವಾರದ ಮಟ್ಟಿಗೆ ಕ್ಲಬ್, ಪಬ್ ಬಂದ್
ರಾಜ್ಯದ ವಿಶ್ವ ವಿದ್ಯಾಲಯಗಳೂ ಒಂದು ವಾರ ಬಂದ್
ರಾಜ್ಯಾದ್ಯಂತ ಸಾರ್ವಜನಿಕ ಕಾರ್ಯಕ್ರಮ – ಬರ್ತಡೇ -ಎಂಗೇಜ್ ಮೆಂಟ್ ಬಂದ್
ಸರಳ ರೀತಿಯ ಮದುವೆಗೆ ಸೂಚನೆ
ಮದುವೆಗೆ 100 ಜನಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ
ಯಾವುದೇ ಕಾರ್ಯಕ್ರಮಗಳಿಗೂ ಜಿಲ್ಲಾಧಿಕಾರಿಯಿಂದ ಅನುಮತಿ ಕಡ್ಡಾಯ
ವಿದೇಶ ಪ್ರವಾಸಕ್ಕೆ ತೆರಳದಂತೆ ಸೂಚನೆ
ಎಲ್ಲಾ ಮಾದರಿಯ ಕ್ರೀಡೆಗಳಿಗೂ ನಿಷಿದ್ಧ
ಒಂದು ವಾರಗಳ ಕಾಲ ಮಾಲ್ ಗಳು ಬಂದ್
ವಸ್ತು ಪ್ರದರ್ಶನಗಳು ರದ್ದು
ಪರೀಕ್ಷೆಗಳು ಎಂದಿನಂತೆ ನಡೆಯಲಿವೆ
ಜಾತ್ರೆ ನಡೆಸದಂತೆ ಮುಖ್ಯಮಂತ್ರಿ ಸೂಚನೆ
ಎಲ್ಲಿಯೂ ಸಮ್ಮರ್ ಕ್ಯಾಂಪ್ ನಡೆಸದಂತೆ ಆದೇಶ

ಇನ್ನು ಸರಕಾರಿ ಕಛೇರಿಗಳು ತೆರೆದಿರುತ್ತದೆ ಮತ್ತು ಎಸ್.ಎಸ್.ಎಲ್.ಸಿ ಪರೀಕ್ಷೆಗಳು ಸೇರಿದಂತೆ ಪರೀಕ್ಷೆಗಳು ವೇಳಾ ಪಟ್ಟಿಯಂತೆ ನಡೆಯುತ್ತದೆ. ವಾರಗಳ ಕಾಲ ವಸ್ತುಸ್ಥಿತಿ ಪರಾಮರ್ಷೆ ಮಾಡಿ ಮುಂದಿನ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಸಿಎಂ ಹೇಳಿದ್ದಾರೆ.

Comments are closed.