ಮಂಗಳೂರು ಮಾರ್ಚ್ 13 ; ಪ್ರಜ್ಞಾ ಸಲಹಾ ಕೇಂದ್ರದ ಸ್ವಾಧಾರ ಗೃಹ (ನೊಂದ ಮಹಿಳೆಯರ ಪುನರ್ವಸತಿ ಕೇಂದ್ರ) ದ ನೂತನ ಕಟ್ಟಡಕ್ಕೆ ಶಿಲಾನ್ಯಾಸವನ್ನು ದ.ಕ ಜಿಲ್ಲಾಧಿಕಾರಿ ಸಿಂಧು ಬಿ.ರೂಪೇಶ್ ನೆರವೇರಿಸಿದರು.
ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಜಿಲ್ಲಾಧಿಕಾರಿಗಳು, ಪ್ರೋ. ಹಿಲ್ಡಾ ರಾಯಪ್ಪನ್ರವರಿಗೆ ಸಮಾಜ ಸೇವೆ ಜೀವನದ ಉಸಿರು. ಯಾವುದೇ ಸ್ವಸ್ಥ ಸಮಾಜದಲ್ಲಿ ಸ್ವಾಧಾರ ಗೃಹಗಳು ಇರಬಾರದು ಎಂದು ಬಯಸಿದರೂ ವರ್ತಮಾನದ ಸ್ಥಿತಿಯಲ್ಲಿ ನೊಂದ ಮಹಿಳೆಯರಿಗೆ ಇಂತಹ ಪುನರ್ವಸತಿ ಕೇಂದ್ರಗಳ ಅಗತ್ಯವಿದೆ.
ದ.ಕ ಜಿಲ್ಲೆಗೆ ಮಾದರಿಯಾಗುವಂತಹ ಸುಸಜ್ಜಿತ ಸ್ವಾಧಾರ ಗೃಹದ ಕನಸು ಸಾಕಾರವಾಗುವುದಕ್ಕೆ ಪ್ರಜ್ಞಾ ಸಂಸ್ಥೆಗೆ ಇನ್ಫೋಸಿಸ್, ಎಂ .ಆರ್. ಪಿ.ಎಲ್, ಸ್ಥಳೀಯ ನಾಗರೀಕರು ಹಾಗೂ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕರಿಸುತ್ತಿರುವ ಎಲ್ಲರಿಗೂ ಹೃದಯ ಪೂರ್ವಕ ವಂದನೆಗಳು ಎಂದು ಹೇಳಿದರು.
ಎಂ.ಆರ್.ಪಿ.ಎಲ್.ನ ಜಿ.ಜಿ.ಎಂ, ಹೆಚ್.ಆರ್, ಪ್ರಸಾದ್ ಬಿ.ಹೆಚ್.ವಿ ಮಾತನಾಡಿ ನೂತನ ಕಟ್ಟಡ ನಿರ್ಮಾಣದ ಎಲ್ಲ ಹಂತದಲ್ಲಿ ಎಂಆರ್ಪಿಎಲ್ ಜೊತೆಗೆ ಇರುತ್ತದೆ ಎನ್ನುವ ಭರವಸೆಯನ್ನು ನೀಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದ್ದರು.
ಇನ್ಫೋಸಿಸ್ ಮಂಗಳೂರು ಡಿ.ಸಿ., ವಾಸುದೇವ ಕಾಮತ್ ಮಾತನಾಡಿ, ಈ ಕೆಲಸದಲ್ಲಿ ಜೊತೆಗೆ ಇರುವುದು ಇನ್ಫೋಶಿಸ್ ಹಾಗೂ ನಾಗರೀಕರಾಗಿ ನಮ್ಮೆಲ್ಲರ ಜವಾಬ್ದಾರಿ ಎಂದು ಹೇಳಿದರು.
ಪ್ರಜ್ಞಾ ಸಲಹಾ ಕೇಂದ್ರದ ಸಂಸ್ಥಾಪಕಿ ಹಾಗೂ ನಿರ್ದೇಶಕಿ ಪ್ರೋ ಹಿಲ್ಡಾ ರಾಯಪ್ಪನ್ ಮಾತನಾಡಿ, ‘ಸ್ವಾಧಾರಗೃಹ’ ನಮ್ಮ ಹದಿನೆಂಟು ವರ್ಷಗಳ ಕನಸು. ಸ್ವಯಂ ಸೇವಾ ಸಂಸ್ಥೆಯಾಗಿ ಪ್ರಜ್ಞಾ ನಡೆದು ಬಂದ ಹಾದಿಯಲ್ಲಿ ಇದು ಒಂದು ಮಹತ್ತರ ಮೈಲಿಗಲ್ಲು. ಸಮಾಜ ಸೇವೆಯ ತುಡಿತ ಇರುವ ಪ್ರತಿಯೊಬ್ಬರೂ ನಮ್ಮ ಈ ಕನಸು ಸಾಕಾರವಾಗುವುದಕ್ಕೆ ಕಾರಣರಾಗಿದ್ದಾರೆ ಎಂದರು.
ಎಮ್.ಆರ್.ಪಿ.ಎಲ್, ಸಂಸ್ಥೆಯ ಎನ್.ಸುಬ್ರಾಯ ಭಟ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಉಪನಿರ್ದೇಶಕ ಉಸ್ಮಾನ್ ಎ, ಉಪಸ್ಥಿತರಿದ್ದರು. ವಿಲಿಯಂ ಸ್ಯಾಮುವೆಲ್ ಧನ್ಯವಾದ ಸಮರ್ಪಿಸಿದರು.

Comments are closed.