ಕರಾವಳಿ

ಮಿನಿ ವಿಧಾನಸೌಧದ ಒಳಾಂಗಣದಲ್ಲಿ ಅಭಿವೃದ್ಧಿ ಕಾಮಗಾರಿಗೆ ಶಾಸಕ ಕಾಮತ್ ಗುದ್ದಲಿಪೂಜೆ

Pinterest LinkedIn Tumblr

ಮಂಗಳೂರು : ಮಂಗಳೂರು ನಗರದ ಹೃದಯ ಭಾಗದಲ್ಲಿರುವ ಹಂಪನಕಟ್ಟೆ ಮಿನಿ ವಿಧಾನಸೌಧದ ಆವರಣದಲ್ಲಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಬಳಿಯ ರಸ್ತೆಗೆ ಶಾಸಕ ಡಿ.ವೇದವ್ಯಾಸ್ ಕಾಮತ್ ಅವರು ಗುದ್ದಲಿಪೂಜೆ ನೆರವೇರಿಸಿದರು.

ಈ ವೇಳೆ ಮಾತನಾಡಿದ ಅವರು, ಭಾರತದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಮಂಗಳೂರು ಕೂಡ ಸೇರಿದೆ. ಆಧುನಿಕ ಜಗತ್ತಿನತ್ತ ದಾಪುಗಾಲಿಡುವ ಮಂಗಳೂರು ನಗರಕ್ಕೆ ಬೇಕಾದಂತಹ ವಿಶೇಷ ಅನುದಾನಗಳನ್ನು ಒದಗಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದರು.

ನಗರದ ಹೃದಯ ಭಾಗವಾಗಿರುವ ಹಂಪನಕಟ್ಟೆಯಲ್ಲಿ ಅನೇಕ ಸರಕಾರಿ ಕಚೇರಿಗಳಿವೆ. ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಅಡಕವಾಗಿರುವ ಈ ಪ್ರದೇಶದಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದೆ. ಮಿನಿ ವಿಧಾನಸೌಧದ ಒಳಾಂಗಣದಲ್ಲಿರುವ ರಸ್ತೆ ಅಭಿವೃದ್ಧಿಗೆ ಅನುದಾನ ಒದಗಿಸಲು ಈ ಭಾಗದ ಜನರ ಬೇಡಿಕೆಯಾಗಿತ್ತು. ಅದರಂತೆ ಅನುದಾನ ಬಿಡುಗಡೆಗೊಳಿಸಿ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಕಾಮಗಾರಿ ನಡೆಯುವ ಸಂಧರ್ಭದಲ್ಲಿ ಈ ಆವರಣದಲ್ಲಿರುವ ಕಚೇರಿಗೆ ತೆರಳುವವರಿಗೆ ಒಂದಷ್ಟು ಸಮಸ್ಯೆಗಳಾಗಬಹುದು. ಆದರೆ ಅಭಿವೃದ್ಧಿಯ ನಿಟ್ಟಿನಲ್ಲಿ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ ಎಂದು ತಿಳಿಸಿದ್ದಾರೆ.

ಈ ಸಂಧರ್ಭದಲ್ಲಿ ಬಿಜೆಪಿ ಮುಖಂಡರಾದ ರೂಪಾ ಡಿ. ಬಂಗೇರ, ಮೋನಪ್ಪ ಭಂಡಾರಿ, ವಸಂತ್ ಜೆ. ಪೂಜಾರಿ, ರಂಗನಾಥ್ ಕಿಣಿ, ಅನಿಲ್ ಅತ್ತಾವರ, ಚಂಚಲಾಕ್ಷಿ, ರಾಜೇಂದ್ರ ಕುಮಾರ್, ಚರಿತ್ ಪೂಜಾರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Comments are closed.