ಮಂಗಳೂರು : ಸಹಾಯ ಮಾಡುವ ಅವಕಾಶ ಈ ಬಡವನ ಕೈಗೆ ದೇವರು ಒದಗಿಸಿದ್ದಕ್ಕೆ ಧನ್ಯ ಎಂದು ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಹೇಳಿದರು.
ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಮ್ಮಿಕೊಂಡ ಸಾಧಕರೊಂದಿಗೆ ಸಂವಾದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ದಾನಿಗಳು ಹಣ ನೀಡುವಾಗ ಆ ಹಣದ ಚೆಕ್ಕನ್ನು ಶಾಲಾಭಿವೃದ್ಧಿ ಸಮಿತಿಯ ಹೆಸರಲ್ಲೇ ನೀಡಿ, ಅದು ಶಾಲೆಯ ಖಾತೆಗೆ ಜಮೆ ಆಗುತ್ತದೆ ಎಂದು ಅವರು ಮನವಿ ಮಾಡಿದರು.
ಸಾಧಕರ ಕುರಿತು ಉಪನ್ಯಾಸ ನೀಡಿದ ಹೊಸ ದಿಗಂತ ಪತ್ರಿಕೆಯ ಹಿರಿಯ ವರದಿಗಾರ ಗುರುವಪ್ಪ ಬಾಳೆಪುಣಿ ಮಾತನಾಡಿ, ಮಾಧ್ಯಮದ ಅಭೂತಪೂರ್ವ ಬೆಂಬಲ ಹಾಗೂ ಅವರ ವಿಶೇಷವಾದ ಗುಣದಿಂದಾಗಿ ದೇಶದ ಅತ್ಯನ್ನತ ಪ್ರಶಸ್ತಿ ಪ್ರದ್ಮಶ್ರೀ ಪ್ರಶಸ್ತಿ ಬಂದಿದೆ. ಅವರ ಸರಳತೆ, ಮುಗ್ದತೆ, ಪ್ರಾಮಾಣಿಕತೆ, ಪ್ರತಿಫಲಾಪೇಕ್ಷೆ ಇಲ್ಲದ ಸೇವೆ ಈ ನಾಲ್ಕು ಗುಣ ಅವರನ್ನು ಆಕಾಶದೆತ್ತರ ಬೆಳೆಸಲು ಸಾಧ್ಯವಾಯಿತು, ಹಾಗೂ ಜಗತ್ತು ಗುರುತಿಸಲು ಸಾಧ್ಯವಾಯಿತು. ಇಂತಹ ವ್ಯಕ್ತಿತ್ವವನ್ನು ಗುರುತಿಸುವಂತ ಕೆಲಸ ಕೇಂದ್ರ ಸರ್ಕಾರ ಮಾಡಿರುವುದು ಅದಕ್ಕಾಗಿ ನಮನ ಸಲ್ಲಿಸಬೇಕು ಎಂದು ಹೇಳಿದರು.
ಕಡು ಬಡತನದಿಂದ ಹುಟ್ಟಿ ಬೆಳೆದ ಹರೇಕಳ ಹಾಜಬ್ಬ, ಮಂಗಳೂರು ಕೇಂದ್ರ ಮಾರ್ಕೆಟ್‍ಗೆ ಬಂದು, ಸಗಟು ಹಣ್ಣಿನ ವ್ಯಾಪಾರಿಗಳಲ್ಲಿ ವಿನಂತಿ ಮಾಡಿಕೊಂಡು, ಸಾಲದ ರೂಪದಲ್ಲಿ ಒಂದು ಬುಟ್ಟಿಯಲ್ಲಿ ಕಿತ್ತಳೆ ಹಣ್ಣು ಮಾರಿ ಜೀವನ ಸಾಗಿಸುತ್ತಿದ್ದವರು. ಅಕ್ಷರದ ಕನಸು ಕಂಡ ಇವರು ತನ್ನೂರಾದ ಹರೇಕಳ ಎಂಬ ಪುಟ್ಟ ಹಳ್ಳಿಯಲ್ಲಿ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಸರಕಾರಿ ಕಚೇರಿಗಳಿಗೆ ಅಲೆದು 2001 ರಲ್ಲಿ ಪ್ರಾಥಮಿಕ ಶಾಲೆ ಪ್ರಾರಂಭಿಸುವಲ್ಲಿ ಯಶಸ್ವಿಯಾದರು.
ಸಮಾಜದಲ್ಲಿ ಬಣ್ಣ ಬದಲಾಯಿಸುವ ಜನರನ್ನು ಗಮನಿಸಬಹುದು, ಆದರೆ ಹರೇಕಳ ಹಾಜಬ್ಬ ಮುಗ್ಧ ಮನಸ್ಸಿನ ವ್ಯಕ್ತಿತ್ವ, ಬಿಳಿ ಲುಂಗಿ ಅಂಗಿ ಧರಿಸಿ ಸರಳತೆಯನ್ನೇ ತನ್ನಲ್ಲಿ ಮೈಗೂಡಿಸಿಕೊಂಡಿದ್ದಾರೆ. ಗಾಂದೀಜಿ ಯವರ ಪ್ರತಿರೂಪ ಅವರು ಎಂದು ಹೇಳಿದರು.
ಹರೇಕಳ ಹಾಜಬ್ಬರ ವ್ಯಕ್ತಿತ್ವ ಎಲ್ಲರಿಗೂ ಮಾದರಿಯಾಗಿದ್ದು, ಪ್ರಸ್ತುತ ಕುವೆಂಪು ವಿಶ್ವವಿದ್ಯಾನಿಲಯ, ದಾವಣಗೆರೆ ವಿಶ್ವವಿದ್ಯಾನಿಲಯ, ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪಠ್ಯ ವಿಷಯವಾಗಿದೆ. ಹಾಗೂ ತುಳು ಭಾಷೆಯಲ್ಲಿ 8ನೇ ತರಗತಿಯಲ್ಲಿ ಪಠ್ಯಪುಸ್ತಕವಾಗಿರುವುದು ಹೆಮ್ಮೆಯ ಸಂಗತಿ ಎಂದರು.
ಪದ್ಮಶ್ರೀ ಪ್ರಶಸ್ತಿ ಪುರಸ್ಕತ ಹರೇಕಳ ಹಾಜಬ್ಬ ಅವರ ಸರಳತೆ ಎಲ್ಲರಿಗೂ ಸ್ಪೂರ್ತಿ, ಹಾಗಾಗಿ ವಿದ್ಯಾರ್ಥಿಗಳು ಇಂತಹ ಗುಣವನ್ನು ತಮ್ಮಲ್ಲಿ ಬೆಳಸಬೇಕು ಎಂದು ದ.ಕ. ಜಿಲ್ಲಾ ಸಿಟಿ ಬಸ್ ಸಂಘದ ಅಧ್ಯಕ್ಷ ಧೀರಜ್ ಆಳ್ವಾ ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ದ.ಕ. ಜಿಲ್ಲಾ ಸಿಟಿ ಬಸ್ ಸಂಘದ ಅಧ್ಯಕ್ಷರು ಹಾಗೂ ಮಾಲಕರು ಹರೇಕಾಳ ಹಾಜಬ್ಬ ಅವರಿಗೆ ರೂ. 1 ಲಕ್ಷ ಚೆಕ್ ನೀಡಿದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಜಿ, ವಿಶ್ವವಿದ್ಯಾಲಯದ ಪ್ರಾಂಶುಪಾಲ ಉದಯ ಕುಮಾರ್ ಎಂ.ಎ ಮತ್ತಿತರರು ಉಪಸ್ಥಿತರಿದ್ದರು.
Comments are closed.