ಕರಾವಳಿ

ನಾಳಿನ ಮಂಗಳೂರು ಕಾರ್ಯಕ್ರಮದಿಂದ ಅಮೂಲ್ಯಳನ್ನು ಕೈಬಿಟ್ಟ ಆಯೋಜಕರು

Pinterest LinkedIn Tumblr

ಮಂಗಳೂರು, ಫೆಬ್ರವರಿ.24: ಸಿಎಎ ಹಾಗೂ ಎನ್‌ಆರ್‌ಸಿ ವಿರೋಧಿಸಿ ನಾಳೆ ಮಂಗಳೂರಿನಲ್ಲಿ ಹಮ್ಮಿಕೊಳ್ಳಲಾದ ಕಾರ್ಯಕ್ರಮದಿಂದ ಪಾಕ್‌ ಪರ ಘೋಷಣೆ ಕೂಗಿದ್ದ ಅಮೂಲ್ಯ ಲಿಯೋನ ಹೆಸರನ್ನು ಕೈಬಿಡಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಮಂಗಳೂರಿನ ಕುದ್ರೋಳಿ ಟಿಪ್ಪು ಸುಲ್ತಾನ್ ಗಾರ್ಡನ್‍ನಲ್ಲಿ ಮುಸ್ಲಿಂ ಐಕ್ಯತಾ ವೇದಿಕೆಯ ನೇತೃತ್ವದಲ್ಲಿ ಸಿಎಎ ಹಾಗೂ ಎನ್‌ಆರ್‌ಸಿ ವಿರೋಧಿಸಿ ಫೆ. 25ರಂದು ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದ್ದು, ಪ್ರತಿಭಟನೆಯಲ್ಲಿ ಪ್ರಮುಖ ಭಾಷಣಕಾರಳಾಗಿ ಭಾಗವಹಿಸಬೇಕಿದ್ದ ಅಮೂಲ್ಯ ಲಿಯೋನ ಹೆಸರನ್ನು ಕೈಬಿಡಲಾಗಿದೆ. ಅವಳಿಗಾಗಿ ಈಗಾಗಲೇ ಕಾಯ್ದಿರಿಸಿದ್ದ ವಿಮಾನ ಟಿಕೆಟ್ ಕೂಡ ರದ್ದು ಮಾಡಿಸಲಾಗಿದೆ ಎಂದು ಪ್ರತಿಭಟನೆಯ ಉಸ್ತುವಾರಿ ವಹಿಸಿಕೊಂಡ ಮಾಜಿ ಮೇಯರ್ ಅಶ್ರಫ್ ಅವರು ತಿಳಿಸಿದ್ದಾರೆ.

ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಇತ್ತೀಚಿಗೆ ನಡೆದ ಸಿಎಎ ವಿರೋಧಿ ಪ್ರತಿಭಟನಾ ಸಭೆಯಲ್ಲಿ ಪಾಕ್ ಪರ ಘೋಷಣೆ ಕೂಗಿದ ಹಿನ್ನೆಲೆಯಲ್ಲಿ ಅಮೂಲ್ಯ ಲಿಯೋನಾಳನ್ನು ಕಾರ್ಯಕ್ರಮದಿಂದ ಹೊರಗಿಡಲಾಗಿದೆ. ಆಕೆ ಬೆಂಗಳೂರಿನಿಂದ ಮಂಗಳೂರಿಗೆ ಬರಲು ವಿಮಾನದ ಟಿಕೆಟ್ ಕೂಡ ಬುಕ್ ಮಾಡಿದ್ದೆವು.ಇದೀಗ ಆಕೆಗಾಗಿ ಕಾಯ್ದಿರಿಸಿದ್ದ ವಿಮಾನ ಟಿಕೆಟ್ ಕೂಡ ರದ್ದು ಮಾಡಿಸಲಾಗಿದೆ.

ಮಾತ್ರವಲ್ಲದೇ ಪಾಕ್‌ ಪರ ಘೋಷಣೆ ಕೂಗಿ ಇದೀಗ ಜೈಲು ಸೇರಿರುವ ಅಮೂಲ್ಯ ಲಿಯೋನ ಹೆಸರು ನಮೂದಿಸಿ ಮುದ್ರಿಸಿದ್ದ ಪ್ರತಿಭಟನೆಯ ಆಮಂತ್ರಣ ಪತ್ರಿಕೆಯನ್ನು ಹಂಚದೆ, ಆಕೆಯ ಹೆಸರು ಇಲ್ಲದ ಹೊಸ ಆಮಂತ್ರಣ ಪತ್ರಿಕೆ ಮುದ್ರಿಸಲಾಗಿದೆ ಎಂದು ಅಶ್ರಫ್‌ ತಿಳಿಸಿದ್ದಾರೆ.

Comments are closed.