ಕರಾವಳಿ

ಮಂಗಳೂರು ಗೋಲಿಬಾರ್ ಪ್ರಕರಣ : ಪೊಲೀಸ್ ಕಮಿಷನರ್, ಡಿಸಿಪಿ ಸಹಿತ 176 ಪೊಲೀಸ್ ಅಧಿಕಾರಿ-ಸಿಬ್ಬಂದಿಗಳಿಗೆ ನೋಟಿಸ್ ಜಾರಿ

Pinterest LinkedIn Tumblr

ಮಂಗಳೂರು, ಫೆಬ್ರವರಿ. 19: ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಕಳೆದ ಡಿ.19ರಂದು ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ಸಂದರ್ಭ ನಡೆದ ಗೋಲಿಬಾರ್ ಮತ್ತು ಹಿಂಸಾಚಾರಕ್ಕೆ ಸಂಬಂಧಿಸಿ ನಗರದ ಮಿನಿ ವಿಧಾನಸೌಧದಲ್ಲಿರುವ ಮಂಗಳೂರು ಉಪ ವಿಭಾಗದ ಸಹಾಯಕ ಆಯುಕ್ತಾಲಯದ ನ್ಯಾಯಾಲಯದಲ್ಲಿ ಬುಧವಾರ ಮ್ಯಾಜಿಸ್ಟ್ರೀಯಲ್ ವಿಚಾರಣೆ ನಡೆಯಿತು.

ಪ್ರತಿಭಟನಾಕಾರರು ಮತ್ತು ಪೊಲೀಸರ ಮಧ್ಯೆ ಸಂಭವಿಸಿದ ಘರ್ಷಣೆಗೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ. ಪಿ.ಎಸ್. ಹರ್ಷ ಮತ್ತು ಡಿಸಿಪಿ ಅರುಣಾಂಶಗಿರಿ (ಕಾನೂನು ಮತ್ತು ಸುವ್ಯವಸ್ಥೆ) ಸಹಿತ 176 ಪೊಲೀಸ್ ಅಧಿಕಾರಿ-ಸಿಬ್ಬಂದಿಗೆ ನೋಟಿಸ್ ಜಾರಿಗೊಳಿಸಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿಯೂ ಆದ ಮ್ಯಾಜಿಸ್ಟೀರಿಯಲ್ ತನಿಖಾಧಿಕಾರಿ ಜಗದೀಶ್ ಅವರು ಈ ಸಂದರ್ಭದಲ್ಲಿ ಸುದ್ಧಿಗಾರರಲ್ಲಿ ತಿಳಿಸಿದ್ದಾರೆ.

ಪೊಲೀಸ್ ಇಲಾಖೆಯಿಂದ ನಿಯುಕ್ತರಾಗಿರುವ ನೋಡಲ್ ಅಧಿಕಾರಿ, ಮಂಗಳೂರು ಉತ್ತರ ಉಪವಿಭಾಗದ ಎಸಿಪಿ ಬೆಳ್ಳಿಯಪ್ಪ ಪ್ರಕರಣದ ಬಗ್ಗೆ ಸಾಕ್ಷ ಹೇಳಲು ಸಿದ್ಧರಿರುವ 176 ಪೊಲೀಸರ ಪಟ್ಟಿಯನ್ನು ನೀಡಿದ್ದಾರೆ.

ಮುಂದಿನ ವಿಚಾರಣೆಯ ದಿನಾಂಕವನ್ನು ಫೆ.25ಕ್ಕೆ ನಿಗದಿಪಡಿಸಲಾಗಿದ್ದು, ಆ ದಿನ 176 ಮಂದಿಯ ಪೈಕಿ 12 ಮಂದಿ ಪೊಲೀಸ್ ಅಧಿಕಾರಿ-ಸಿಬ್ಬಂದಿಗೆ ಸಾಕ್ಷ ಹೇಳಲು ಅವಕಾಶ ನೀಡಲಾಗುವುದು. ಉಳಿದವರಿಗೆ ಹಂತ ಹಂತವಾಗಿ ಸಾಕ್ಷ ನೀಡಲು ಅವಕಾಶ ನೀಡಲಾಗುವುದು. ಮಂಗಳೂರು ಪೊಲೀಸ್ ಆಯುಕ್ತ ಡಾ. ಪಿ.ಎಸ್. ಹರ್ಷ ಮತ್ತು ಡಿಸಿಪಿ ಅರುಣಾಂಶಗಿರಿ ಅವರ ಹೆಸರು ಕೂಡ ಪಟ್ಟಿಯಲ್ಲಿವೆ. ಅವರು ಖದ್ದು ಹಾಜರಾಗಿ ಹೇಳಿಕೆ ನೀಡಲು ನೋಟಿಸ್ ಜಾರಿಗೊಳಿಸಲಾಗುವುದು ಎಂದು ಜಗದೀಶ್ ತಿಳಿಸಿದ್ದಾರೆ.

Comments are closed.