ಕರಾವಳಿ

ಅಕ್ಷರ ಸಂತ ಹರೇಕಳ ಹಾಜಬ್ಬ ರಿಯಲ್ ಹೀರೋ ; ಶಿಕ್ಷಣ ಸಚಿವ ಸುರೇಶ್ ಕುಮಾರ್ ಶ್ಲಾಘನೆ

Pinterest LinkedIn Tumblr

ಮಂಗಳೂರು / ಉಳ್ಳಾಲ, ಫೆಬ್ರವರಿ.16: ಈ ಬಾರಿಯ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅಕ್ಷರ ಸಂತ ಹರೇಕಳ ಹಾಜಬ್ಬ ಅವರು ಹರೇಕಳದ ನ್ಯೂಪಡ್ಪುವಿನಲ್ಲಿ ನಿರ್ಮಿಸಿದ ಹಾಜಬ್ಬ ಅವರ ಶಾಲೆಗೆ ಶನಿವಾರ ಶಿಕ್ಷಣ ಸಚಿವ ಸುರೇಶ್ ಕುಮಾರ್ ಭೇಟಿ ನೀಡಿದರು.

ಈ ವೇಳೆ ಮಾತನಾಡಿದ ಅವರು, ಪದ್ಮಶ್ರೀ ಪ್ರಶಸ್ತಿ ಅನೇಕರಿಗೆ ಸಿಕ್ಕಿದೆ, ಆದರೆ ಕಿತ್ತಳೆ ಹಣ್ಣು ಮಾರಿದವರಿಗೆ ಚಹಾ ಮಾರಿದವರು ನೀಡಿದ್ದಾರೆ‌. ದೊಡ್ಡ ಜನರ ಪೈಕಿ ಹಾಜಬ್ಬ ಅಗ್ರಗಣ್ಯರು. ಮಾಧ್ಯಮದವರು ಗುರುತಿಸದಿದ್ದರೆ ಎಲೆಮರೆಯ ಕಾಯಾಗಿ‌ ಹೋಗುತ್ತಿದ್ದರು.ಚಲನಚಿತ್ರದ ಹೀರೋಗಳು ಹಾಜಬ್ಬರಿಗೆ ಸಮಾನರಲ್ಲ, ರಿಯಲ್ ಹೀರೋ ಇವರೇ ಆಗಿದ್ದಾರೆ ಸಿನಿಮಾ ತಾರೆಯರು ಸ್ಕ್ರೀನ್ ಮೇಲೆ ಮಾತ್ರ ಹೀರೋಗಳು, ಆದರೆ ರಿಯಲ್ ಹೀರೋ ಹರೇಕಳ ಹಾಜಬ್ಬ ಅವರಾಗಿದ್ದಾರೆ ಎಂದು ಹಾಜಬ್ಬರ ಕಾರ್ಯಸಾಧನೆಗೆ ಶ್ಲಾಘನೆ ವ್ಯಕ್ತಪಡಿಸಿದರು.

ತನ್ನ ಆರು ತಿಂಗಳ ಅವಧಿಯಲ್ಲಿ ಅನೇಕ ಸಂತರು, ವ್ಯಕ್ತಿಗಳನ್ನು ಭೇಟಿ ಮಾಡಿದ್ದೇನೆ. ಆದರೆ ಹರೇಕಳ ಹಾಜಬ್ಬ ಅವರನ್ನು ಪ್ರಥಮ ಬಾರಿಗೆ ಭೇಟಿ ಮಾಡಿರುವುದು ಜೀವನದಲ್ಲಿ ಅತ್ಯಂತ‌ ಮಹತ್ವದ ದಿನ. ಇಂದು ಅದೆಷ್ಟೋ ಮಂದಿ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿಸಿಕೊಂಡು ವ್ಯವಹಾರ ಮಾಡಿಕೊಂಡಿರುವವರನ್ನು ಶಿಕ್ಷಣ ತಜ್ಞ ಎಂದು ಹೇಳುತ್ತೇವೆ. ಆದರೆ ನಿಜವಾದ ಶಿಕ್ಷಣ ತಜ್ಞ ಎನಿಸಿರುವ ಅಕ್ಷರ ಸಂತನಿಗೆ ರಾಜ್ಯದ ಜನರ ಪರವಾಗಿ‌ ಕೃತಜ್ಞತೆ ಸಲ್ಲಿಸಲು‌ ಬಂದಿದ್ದೇನೆ ಎಂದು ಹೇಳಿದರು.

ರಾಜ್ಯ ಶಿಕ್ಷಣ ಸಚಿವರು ಹಳ್ಳಿಯ ಶಾಲೆಗೆ ಬರಲು ಮಾಧ್ಯಮ ಕಾರಣ,‌ ಸಾಮಾನ್ಯ ಮನುಷ್ಯನ ಹೆಗಲಿಗೆ ಕೈಹಾಕಿ ಶಿಕ್ಷಣ ಸಚಿವರು ಮಾತನಾಡಲು ಮಾಧ್ಯಮದವರೇ ಕಾರಣ. ಮಾಧ್ಯಮದವರು ಸಾಮಾನ್ಯ ವ್ಯಕ್ತಿಯನ್ನು ಇಷ್ಟು ಎತ್ತರಕ್ಕೇರಿಸಿದರು ಎಂದು ಹಾಜಬ್ಬ ನುಡಿದರು ಬಳಿಕ ಆವರಣ ಗೋಡೆ, ಕಟ್ಟಡ ದುರಸ್ತಿ, ಕರ್ನಾಟಕ ಪಬ್ಲಿಕ್ ಶಾಲೆ ಬೇಡಿಕೆಯನ್ನು ಹಾಜಬ್ಬ ಈ ಸಂದರ್ಭ ಶಿಕ್ಷಣ ಸಚಿವರ ಮುಂದಿಟ್ಟರು

Comments are closed.