ಕರಾವಳಿ

ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಪರಿಕಲ್ಪನೆ ಬಗ್ಗೆ ನಾಳೆ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿರಿಂದ ಮಂಗಳೂರಿನಲ್ಲಿ ಸಂವಾದ

Pinterest LinkedIn Tumblr

ಮಂಗಳೂರು: ತಕ್ಷಶಿಲೆಯ ಪುನರವತರಣ ಎನಿಸಿದ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಪರಿಕಲ್ಪನೆ ಬಗ್ಗೆ ವಿವರಿಸಲು ಮತ್ತು ದೇಶದ ಪರಂಪರೆ- ಸಂಸ್ಕøತಿಯ ಪುನರುತ್ಥಾನದ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿಯರು ಮಂಗಳೂರಿನಲ್ಲಿ ನಾಳೆ 16ರಂದು (ಭಾನುವಾರ) ಸಂವಾದ ಕಾರ್ಯಕ್ರಮ ನಡೆಸಿಕೊಡಲಿರುವರು ಎಂದು ವಿಶ್ವವಿದ್ಯಾಪೀಠ ವ್ಯವಸ್ಥಾ ಸಮಿತಿ ಅಧ್ಯಕ್ಷರಾದ ಡಾ.ವೈ.ವಿ.ಕೃಷ್ಣಮೂರ್ತಿ ತಿಳಿಸಿದ್ದಾರೆ.

ನಗರದಲ್ಲಿ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ನಾಳೆ ಬೆಳಿಗ್ಗೆ 9.30ಕ್ಕೆ ಆರಂಭವಾಗುವ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿಟ್ಟೆ ವಿಶ್ವವಿದ್ಯಾನಿಲಯದ ಕುಲಾಧಿಪತಿ ಡಾ.ವಿನಯ ಹೆಗ್ಡೆ ವಹಿಸುವರು. ಉದ್ಯಮಿಗಳು, ಶಿಕ್ಷಣ ತಜ್ಞರು, ಗಣ್ಯರು, ಜನಪ್ರತಿನಿಧಿಗಳು, ವಕೀಲರು, ವೈದ್ಯರು, ವಿವಿಧ ಸಮಾಜಗಳ ಮುಖಂಡರು, ಮಾಧ್ಯಮ ಮುಖ್ಯಸ್ಥರು, ಧಾರ್ಮಿಕ ಮುಖಂಡರು, ವ್ಯಾಪಾರಿಗಳು ಸೇರಿದಂತೆ ದಕ್ಷಿಣ ಕನ್ನಡ, ಉಡುಪಿ, ಕೊಡಗು ಮತ್ತು ಕಾಸರಗೋಡು ಜಿಲ್ಲೆಗಳ ಒಂದು ಸಾವಿರಕ್ಕೂ ಹೆಚ್ಚು ಗಣ್ಯರು ಈ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.

ಭಾರತದ ಸಂಸ್ಕøತಿ- ಪರಂಪರೆಯ ಅವಿಭಾಜ್ಯ ಅಂಗವಾಗಿದ್ದ ಗುರುಕುಲ ಪದ್ಧತಿಯ ಹಾಗೂ ಸಮಗ್ರ ಭಾರತೀಯತೆಯನ್ನು ಒಳಗೊಂಡಿದ್ದ ಶಿಕ್ಷಣ ಪದ್ಧತಿಯ ಸ್ಥಾನವನ್ನು ಇಂದು ಮೆಕಾಲೆ ಶಿಕ್ಷಣ ಪದ್ಧತಿ ಆಕ್ರಮಿಸಿಕೊಂಡಿದ್ದು, ದೇಶದ ಸಾರಸರ್ವಸ್ವವನ್ನು ಅಳವಡಿಸಿಕೊಂಡ ಶಿಕ್ಷಣ ವ್ಯವಸ್ಥೆ ಭಾರತದ ಪುನರುತ್ಥಾನಕ್ಕೆ ಅನಿವಾರ್ಯ ಎನ್ನುವುದನ್ನು ಸಮಾಜಕ್ಕೆ ಮನದಟ್ಟು ಮಾಡುವುದು ಈ ಸಂವಾದದ ಉದ್ದೇಶ.

ಸಮಗ್ರ ಪರಿಕಲ್ಪನೆ : ಈ ನಿಟ್ಟಿನಲ್ಲಿ ತಕ್ಷಶಿಲೆ ವಿಶ್ವವಿದ್ಯಾನಿಲಯವನ್ನು ಮಾದರಿಯಾಗಿಟ್ಟುಕೊಂಡು, ಚಾಣಕ್ಯ ವಿಷ್ಣುಗುಪ್ತನ ಹೆಸರಿನಲ್ಲಿ ಗೋಕರ್ಣದಲ್ಲಿ ಈ ವಿಶಿಷ್ಟ ವಿದ್ಯಾಪೀಠ ಏಪ್ರಿಲ್ 26ರಂದು ಲೋಕಾರ್ಪಣೆಯಾಗುತ್ತಿದೆ. ಭರತಖಂಡದ ಸುವರ್ಣಯುಗದ ಕುರುಹಾಗಿ ಉಳಿದಿರುವ ತಕ್ಷಶಿಲೆ ವಿಶ್ವವಿದ್ಯಾನಿಲಯದ ಪುನರವರಣ ಮತ್ತು ಧರ್ಮಯೋಧರ ಸೃಷ್ಟಿ ಈ ಯೋಜಿತ ವಿಶ್ವವಿದ್ಯಾಪೀಠದ ಮೂಲಧ್ಯೇಯವಾಗಿದೆ.

ವಿಶ್ವವಿದ್ಯಾಪೀಠದ ಮಹತಿಯನ್ನು ಸಮಾಜಕ್ಕೆ ಪರಿಚಯಿಸುವ ದೃಷ್ಟಿಯಿಂದ ರಾಜ್ಯಾದ್ಯಂತ ಸರಣಿ ಸಂವಾದ ಹಮ್ಮಿಕೊಳ್ಳಲಾಗಿದ್ದು, ಈಗಾಗಲೇ ಬೆಂಗಳೂರಿನಲ್ಲಿ ಏರ್ಪಡಿಸಿದ್ದ ಸಂವಾದಕ್ಕೆ ಅದ್ಭುತ ಸ್ಪಂದನೆ ಸಿಕ್ಕಿದೆ. ಸರಣಿಯ ಎರಡನೇ ಸಂವಾದ ಮಂಗಳೂರಿನಲ್ಲಿ ನಡೆಯುತ್ತಿದೆ.

ಗೋಕರ್ಣ ಸಮೀಪದ ಅಶೋಕಾವನದಲ್ಲಿ ಸುಮಾರು 20 ಕೋಟಿ ರೂಪಾಯಿ ಆರಂಭಿಕ ವೆಚ್ಚದಲ್ಲಿ ವಿವಿವಿಯ ಮೊದಲ ಹಂತದ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ದಾಖಲೆ ಹತ್ತು ತಿಂಗಳ ಅವಧಿಯಲ್ಲಿ ಪರಿಪೂರ್ಣ ವಿಶ್ವವಿದ್ಯಾಪೀಠವನ್ನು ಸಮಾಜಕ್ಕೆ ಸಮರ್ಪಿಸಲು ಉದ್ದೇಶಿಸಲಾಗಿದೆ. ಭಾರತೀಯ ವಿದ್ಯೆಗಳನ್ನು ಉಳಿಸಿ ಬೆಳೆಸುವುದು ಹಾಗೂ ದೇಶರಕ್ಷಣೆ- ಧರ್ಮರಕ್ಷಣೆಗೆ ಬದ್ಧರಾದ, ಸಂಸ್ಕøತಿಯ ಆಳ ಅರಿವು ಇರುವ ಧರ್ಮಯೋಧರನ್ನು ಸಿದ್ಧಪಡಿಸುವುದು ಈ ವಿಶ್ವವಿದ್ಯಾಪೀಠದ ಉದ್ದೇಶ. ತಕ್ಷಶಿಲೆ ವಿಶ್ವವಿದ್ಯಾನಿಲಯದಲ್ಲಿ ಆಚಾರ್ಯ ವಿಷ್ಣುಗುಪ್ತ ಚಾಣಕ್ಯನು ಧರ್ಮಯೋಧ ಚಂದ್ರಗುಪ್ತನನ್ನು ಸೃಷ್ಟಿಸಿ ಆತನ ಮೂಲಕ ನಂದನ ಅಂಧಕಾರಶಾಸನವನ್ನು ಕೊನೆಗೊಳಿಸಿ ಧರ್ಮಸಾಮ್ರಾಜ್ಯ ಉದಯಕ್ಕೆ ಕಾರಣನಾದಂತೆ ವಿಶ್ವವಿದ್ಯಾಪೀಠದ ಮಡಿಲಲ್ಲಿ ವಿಶ್ವವಿಜಯೀ ವಿದ್ಯಾವೀರರನ್ನು ಸೃಜಿಸುವ ಮೂಲಕ ಭಾರತವರ್ಷದಲ್ಲಿ ಮತ್ತೊಮ್ಮೆ ರಾಮರಾಜ್ಯವನ್ನು ಉದಯಗೊಳಿಸುವುದು, ಧರ್ಮಪ್ರಭುತ್ವವನ್ನು ಮರಳಿ ಸ್ಥಾಪಿಸುವುದು ಯೋಜಿತ ವಿಶ್ವವಿದ್ಯಾಪೀಠದ ಧ್ಯೇಯವಾಗಿದೆ.

ಪಾರಂಪರಿಕ ವಾಸ್ತುಶಿಲ್ಪವನ್ನು ಒಳಗೊಂಡ ಈ ವಿಶಿಷ್ಟ ವಿದ್ಯಾಪೀಠದಲ್ಲಿ ಭಾರತೀಯ ವಿದ್ಯಾವಿಶ್ವವೇ ಅಧ್ಯಯನ ವಸ್ತು. ಭಾರತೀಯ ಸಂಸ್ಕøತಿಯ ಮೂಲಾಧಾರ ಎನಿಸಿದ ನಾಲ್ಕು ವೇದಗಳು, ಜ್ಯೋತಿಷ್ಯವನ್ನು ಒಳಗೊಂಡ ವೇದದ ಆರು ಅಂಗಗಳು, ಆಯುರ್ವೇದವೇ ಮೊದಲಾದ ನಾಲ್ಕು ಉಪವೇದಗಳು, ರಾಮಾಯಣ ಮಹಾಭಾರತ ಒಳಗೊಂಡಂತೆ ಇತಿಹಾಸ- ಪುರಾಣಗಳು, ಆರು ದರ್ಶನಗಳು, ಸಕಲ ಕಲೆಗಳು, ಸಮಯುಗದ ಜಗತ್ತಿನ ಸಾಮಾನ್ಯ ಜ್ಞಾನ, ಆಧುನಿಕ ತಂತ್ರಜ್ಞಾನ, ದೇಶದ ಚರಿತ್ರೆ, ಸಂವಹನ ಕೌಶಲ, ಕಾನೂನು, ಧರ್ಮಯೋಧನಿಗೆ ಎದುರಾಗಬಹುದಾದ ವಿಪತ್ತುಗಳನ್ನು ಮನಸ್ಸಿನಲ್ಲಿರಿಸಿಕೊಂಡು ಆತ್ಮರಕ್ಷಣೆಯ ಸಮರ ವಿದ್ಯೆಗಳು ವಿದ್ಯಾವಿನ್ಯಾಸದಲ್ಲಿ ಸೇರಿವೆ. ವಿಶ್ವವಿದ್ಯಾಪೀಠದಲ್ಲಿ ವಿಕಾಸಗೊಂಡ ವಿದ್ಯಾರ್ಥಿ ಬಾಹ್ಯಜಗತ್ತಿನಲ್ಲಿ ಅಪ್ರಸ್ತುತನಾಗರಬಾರದು ಎಂಬ ಕಾರಣಕ್ಕೆ ಇಂಗ್ಲಿಷ್, ಹಿಂದಿ ಮೊದಲಾದ ನವಸಮಾಜ ಭಾಷೆಗಳ ಅಧ್ಯಯನಕ್ಕೂ ಅವಕಾಶ ಇರುತ್ತದೆ. ಸಮಾಜದ ಎಲ್ಲ ವರ್ಗದವರಿಗೂ ಇಲ್ಲಿ ಅವಕಾಶವಿದ್ದು, ಅವರವರಿಗೆ ಸಲ್ಲುವ ವಿದ್ಯೆಗಳನ್ನು ಅವರು ಪಡೆದುಕೊಳ್ಳಬಹುದಾಗಿದೆ.

ಅತ್ಯಾಧುನಿಕ ಸಂಪರ್ಕ ವ್ಯವಸ್ಥೆ ಮೂಲಕ ದೇಶದ ಮೂಲೆಮೂಲೆಗಳ ತಜ್ಞ ವಿದ್ವಾಂಸರಿಂದ ಪಾಠ ಪ್ರವಚನದ ವ್ಯವಸ್ಥೆ ಇಲ್ಲಿನ ವೈಶಿಷ್ಠ್ಯ.
ಪ್ರಾಚೀನ ಭಾರತದ ಸಮಗ್ರ ವಿದ್ಯೆಗಳು, ಕಲೆಗಳನ್ನು ಒಂದೇ ಸೂರಿನಡಿ ಬೋಧಿಸುವ ಏಕೈಕ ಕೇಂದ್ರ ಇದಾಗಲಿದೆ. ಹಂತ ಹಂತವಾಗಿ ಈ ವಿಶ್ವವಿದ್ಯಾಪೀಠವನ್ನು ತಕ್ಷಶಿಲೆ ವಿಶ್ವವಿದ್ಯಾನಿಲಯದ ಮಾದರಿಗೆ ಒಯ್ಯಲು ಕಾರ್ಯಯೋಜನೆ ಹಮ್ಮಿಕೊಂಡಿದ್ದು, ಇದು ಕೇವಲ ಭಾರತಕ್ಕೆ ಮಾತ್ರವಲ್ಲದೇ ಇಡೀ ಮನುಕುಲಕ್ಕೆ ಸಹಸ್ರಮಾನದ ಕೊಡುಗೆಯಾಗಲಿದೆ  ಎಂದು ಡಾ.ವೈ.ವಿ.ಕೃಷ್ಣಮೂರ್ತಿ ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕೆ.ಟಿ.ಶೈಲಜಾ, ಸಂವಾದ ಸಮಿತಿ ಅಧ್ಯಕ್ಷರು, ಜಿಲ್ಲಾಪಂಚಾಯ್ತಿ ಮಾಜಿ ಅಧ್ಯಕ್ಷರು,ನಾಗರಾಜ ಭಟ್ ಪಿದಮಲೆ, ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ, ಗಣೇಶ ಮೋಹನ ಕಾಶಿಮಠ, ಮಂಗಳೂರು ಹವ್ಯಕ ಮಂಡಲ ಅಧ್ಯಕ್ಷರು, ಉದಯಶಂಕರ ಭಟ್ ಮಿತ್ತೂರು, ಮಾಧ್ಯಮ ಶ್ರೀಸಂಯೋಜಕ, ಶ್ರೀರಾಮಚಂದ್ರಾಪುರ ಮಠ ಮುಂತಾದವರು ಉಪಸ್ಥಿತರಿದ್ದರು.

Comments are closed.