ಕರಾವಳಿ

2,500 ರೂ. ಬಾಕಿ ಹಣ ಕೊಡದಿದ್ದಕ್ಕೆ ಸ್ನೇಹಿತನನ್ನೇ ಬಾವಿಗೆ ದೂಡಿ ಕೊಲೆ ಮಾಡಿ ಪರಾರಿ!

Pinterest LinkedIn Tumblr

ಉಡುಪಿ: ಕೊಡಬೇಕಿದ್ದ ಹಣವನ್ನು ನೀಡದೇ ಸತಾಯಿಸುತ್ತಿದ್ದ ದ್ವೇಷದಿಂದ ಮಗನನ್ನು ಆತನ ಸ್ನೇಹಿತ ಬಾವಿಗೆ ದೂಡಿ ಹಾಕಿ ಕೊಲೆ ಮಾಡಿದ್ದಾನೆ ಎಂದು ಕೊಲೆಯಾದ ಯುವಕನ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ. ಫೆ.14 ಶುಕ್ರವಾರ ಬೆಳಿಗ್ಗೆ ಬ್ರಹ್ಮಾವರ ತಾಲೂಕು ಹೆಗ್ಗುಂಜೆ ಗ್ರಾಮದ ಪಡುಕೋಮೆ ನಿರ್ಜೆಡ್ಡು ಎಂಬಲ್ಲಿ ನಡೆದಿದೆ.

ನಿರ್ಜೆಡ್ಡುವಿನ ಬಸವ ನಾಯ್ಕ ಹಾಗೂ ರಾಧಾ ಬಾಯಿ ದಂಪತಿ ಪುತ್ರ ಮನೋಜ್ (21) ಮೃತ ಯುವಕ. ಸುನಿಲ್ ಶೆಟ್ಟಿ ಎಂಬಾತ ಕೊಲೆ ಮಾಡಿ ಪರಾರಿಯಾಗಿದ್ದು ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಘಟನೆ ವಿವರ:
ಶುಕ್ರವಾರ ಬೆಳಿಗ್ಗೆ ರಾಧಾ ಬಾಯಿ ಅವರ ಮನೆಗೆ ಬಂದ ಸುನೀಲ್ ಶೆಟ್ಟಿ, ಮನೋಜ್ ಬಗ್ಗೆ ಕೇಳಿ, ‘ಆತನ ಜೊತೆಗೆ ಮಾತನಾಡುವುದಿದೆ. ನನಗೆ 2,500ರೂ. ಹಣ ಕೊಡಲು ಇದೆ. ಹಣ ಪಡೆದು ಎರಡು ವರ್ಷಗಳಾದರೂ ಇನ್ನೂ ನೀಡಿಲ್ಲ. ಫೋನ್ ಮಾಡಿದರೆ ತೆಗೆಯುದಿಲ್ಲ. ಉಡುಪಿಯಲ್ಲಿ ಹುಡುಕಾಡಿದರೂ ಸಿಕ್ಕಿರುವುದಿಲ್ಲ ಎಂದು ಕೂಗಾಡಿದ್ದಾನೆ ಎನ್ನಲಾಗಿದೆ. ಈ ವೇಳೆ ಮನೆಯಲ್ಲಿ ಮಲಗಿದ್ದ ಮನೋಜ್ ಹೊರಗಡೆ ಬಂದು, ತನ್ನ ಸ್ನೇಹಿತನಿಗೆ ಕರೆ ಮಾಡಿದ್ದು ಮಂದಾರ್ತಿ ಬ್ಯಾಂಕ್‌ನಲ್ಲಿ ಹಣ ತೆಗೆದು ಕೊಡುತ್ತೇನೆ ಎಂದು ಹೇಳಿದ್ದಾನೆ. ಆದರೆ ಆರೋಪಿ ಸುನೀಲ್ ಶೆಟ್ಟಿ, ನನಗೆ ಈಗಲೇ ಹಣ ಬೇಕೆಂದು ಬೊಬ್ಬೆ ಹಾಕಿದ್ದು ಮನೋಜ್ ಹಲ್ಲುಜ್ಜಿ ಬರುವುದಾಗಿ ಹೇಳಿ ಬಾವಿಯ ಕಡೆ ಹೋದಾಗ ಸುನೀಲ್ ಶೆಟ್ಟಿ ಕೂಡ ಆತನೊಂದಿಗೆ ಹೋದನು. ಅಲ್ಲಿಂದ ವಾಪಾಸ್ಸು ಬಂದ ಸುನೀಲ್ ಶೆಟ್ಟಿ, ತನ್ನಲ್ಲಿ ಮನೋಜ್ ಬಾವಿಗೆ ಬಿದ್ದ ಎಂದು ಹೇಳಿ ಓಡಿ ಹೋದನು. ಬಾಕಿ ಇರುವ 2,500ರೂ. ಹಣ ನೀಡದೆ ಸತಾಯಿಸುತ್ತಿರುವ ದ್ವೇಷದಿಂದ ಸುನೀಲ್ ಶೆಟ್ಟಿ, ನನ್ನ ಮಗನನ್ನು ಬಾವಿಗೆ ದೂಡಿ ಹಾಕಿ ಕೊಲೆ ಮಾಡಿದ್ದಾರೆಂದು ಮನೋಜ್ ತಾಯಿ ರಾಧಾಭಾಯಿ ಅವರು ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.

Comments are closed.