ಕರಾವಳಿ

ಕೇಂದ್ರದ ಯೋಜನೆ ಶೀಘ್ರ ಕಾರ್ಯರೂಪಕ್ಕೆ ತರಲಾಗುವುದು : ಸಚಿವೆ ಶಶಿಕಲಾ ಎ ಜೊಲ್ಲೆ

Pinterest LinkedIn Tumblr

ಮಂಗಳೂರು ಫೆಬ್ರವರಿ 13  : ಗರ್ಭಿಣಿ ಸ್ತ್ರೀಯರಿಗಾಗಿ 2018 ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಜಾರಿಗೊಳಿಸಿರುವ ಕೇಂದ್ರದ ಯೋಜನೆಯಾಗಿರುವ ಪೋಷಣ್ ಅಭಿಯಾನ ಯೋಜನೆ ಇನ್ನೂ ಕರ್ನಾಟಕದಲ್ಲಿ ಆರಂಭವಾಗಲಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವೆ ಶಶಿಕಲಾ ಎ ಜೊಲ್ಲೆ ಹೇಳಿದರು.

ನಗರದ ಪುರಭವನದಲ್ಲಿ ನಡೆದ ಜಿಲ್ಲಾ ಮಟ್ಟದ ಸ್ತ್ರೀ ಶಕ್ತಿ ಸಮಾವೇಶ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಗರ್ಭಿಣಿ ಮಹಿಳೆಯರ ಆರೈಕೆ ಮತ್ತು ಸಾಮೂಹಿಕ ಸೀಮಂತ ಕಾರ್ಯಕ್ರಮಗಳನ್ನು ಈ ಯೋಜನೆಯಡಿ ನಡೆಸಲಾಗುತ್ತದೆ ಮತ್ತು ಗರ್ಭಿಣಿ ಮಹಿಳೆಯರಿಗೆ ಹೆರಿಗೆಯಾಗುವ ಸಮಯದವರೆಗೂ ಆಕೆಯ ಮತ್ತು ಮಗುವಿನ ಪೋಷಣೆಗಾಗಿ ಪೌಷ್ಠಿಕ ಆಹಾರವನ್ನು ಒದಗಿಸಲಾಗುತ್ತದೆ. ಇದೇ ಯೋಜನೆಯಡಿ ಅಂಗನವಾಡಿ ಕಾರ್ಯಕರ್ತೆಯರಿಗೆ ಸದ್ಯದಲ್ಲೇ ಸ್ಮಾರ್ಟ್ ಫೋನ್ ನೀಡಲಾಗುವುದು. ಗರ್ಭಿಣಿ ಮಹಿಳೆಯರು ಮತ್ತು ಅಂಗನವಾಡಿ ಮಕ್ಕಳ ಆರೋಗ್ಯ, ಶಿಕ್ಷಣ ವ್ಯವಸ್ಥೆಯನ್ನು ಖುದ್ದು ಪರಿಶೀಲಿಸುವ ಸುಸಜ್ಜಿತ ವ್ಯವಸ್ಥೆ ಇದರಿಂದ ಆರಂಭಗೊಳ್ಳಲಿದೆ ಎಂದು ಅವರು ತಿಳಿಸಿದರು.

ದೇಶದಲ್ಲಿ ಹೆಣ್ಣು ಮತ್ತು ಗಂಡು ಮಕ್ಕಳ ನಡುವಿನ ಲಿಂಗಾನುಪಾತದಲ್ಲಿ ಸಾಕಷ್ಟು ವ್ಯತ್ಯಾಸಗಳಿದ್ದು, 1000 ಗಂಡು ಮಕ್ಕಳಿಗೆ 829 ಹೆಣ್ಣು ಮಕ್ಕಳ ಪ್ರಮಾಣವನ್ನು ಸರಿದೂಗಿಸುವ ಕ್ರಮ ಕೈಗೊಳ್ಳಬೇಕಿದೆ. ಒಂದು ವೇಳೆ ಲಿಂಗಾನುಪಾತ ಸರಿಹೋಗದೇ ಇದ್ದ ಸಮಯದಲ್ಲಿ ಮಹಾಭಾರತದ ಪರಿಸ್ಥಿತಿಯನ್ನು ನೋಡಬೇಕಾಗಬಹುದು. ನಗರಗಳಲ್ಲಿ ಗಂಡು ಹೆಣ್ಣು ಮಕ್ಕಳ ನಡುವಿನ ಭೇದಭಾವ ಕಡಿಮೆಯಾಗುತ್ತಿದ್ದರೂ, ಇನ್ನೂ ಹಲವಾರು ಪ್ರದೇಶಗಳಲ್ಲಿ ಈ ಮನೋಭಾವ ಹಾಗೆ ಉಳಿದುಕೊಂಡಿದೆ ಎಂದು ಆತಂಕ ವ್ಯಕ್ತ ಪಡಿಸಿದರು.

ದ.ಕ ಜಿಲ್ಲೆಯ ಸ್ತ್ರೀ ಶಕ್ತಿ ಸಂಘಟನೆಗಳು ಸಾಲ ಮರುಪಾವತಿ ಮಾಡುವಲ್ಲಿ ಶೇಕಡಾ 100% ರಷ್ಟು ಸಾಧನೆಯ ಮೆಟ್ಟಿಲಿನಲ್ಲಿ ಸಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಜೊತೆಗೆ ಇಲ್ಲಿನ ಅಂಗನವಾಡಿ ಚಟುವಟಿಕೆಗಳು ಪಾರದರ್ಶಕತೆಯಿಂದ ಸಾಗುತ್ತಿದೆ ಎಂಬುದು ಖುಷಿಯ ವಿಚಾರವಾಗಿದೆ. ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ವಿವಿಧ ಸಮಸ್ಯೆಗಳಿಂದ ಬಹಳಷ್ಟು ಸೋರಿಕೆಯಾಗುತ್ತಿದೆ. ಪೋಷಣ್ ಅಭಿಯಾನ ಯೋಜನೆಯ ಸಮರ್ಪಕ ಜಾರಿಯಿಂದ ಸೋರಿಕೆಗೆ ಕಡಿವಾಣ ಬೀಳಲಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿ ಮಹಿಳೆಯರು ಸಂಘಟಿತರಾದಾಗ ಮಾತ್ರ ಸಮಾಜದ ಸಂಘನೆಗೆ ದಾರಿದೀಪವಾಗುವುದು. ಒಂದು ಮನೆ ಅಥವಾ ಒಂದು ಕುಟುಂಬ ಅತ್ಯಂತ ಶಕ್ತಿಯುತವಾಗಿ ಬೆಳೆಯಬೇಕಾದರೆ ಅಲ್ಲಿ ಮಹಿಳೆಯ ಪಾತ್ರ ಅತೀ ಮುಖ್ಯವಾಗಿರುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ದಕ್ಷಿಣ ಶಾಸಕ ಡಿ. ವೇದವ್ಯಾಸ ಕಾಮತ್, ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್, ದ.ಕ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ದ.ಕ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕಸ್ತೂರಿ ಪಂಜ, ಮಂಗಳೂರು ವಿಧಾನ ಸಭಾ ಕ್ಷೇತ್ರ ಶಾಸಕ ಯು.ಟಿ ಖಾದರ್, ರಾಷ್ಟ್ರೀಯ ಮಹಿಳಾ ಆಯೋಗ ಸದಸ್ಯೆ ಶ್ಯಾಮಲ ಎಸ್ ಕುಂದರ್, ಕರ್ನಾಟಕ ತುಳು ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್‍ಸಾರ್, ಜಿಲ್ಲಾ ಸ್ತ್ರೀ ಶಕ್ತಿ ಒಕ್ಕೂಟ ಅಧ್ಯಕ್ಷೆ ಮಮತಾ, ಆಸರೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷೆ ಡಾ. ಆಶಾ ಜ್ಯೋತಿ ರೈ, ಜಿಲ್ಲಾ ಪಂಚಾಯತ್ ಸದಸ್ಯೆ ಮಮತಾ ಗಟ್ಟಿ, ಕೆ.ಪಿ ಸುಚರಿತಾ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಗಟ್ಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಉಸ್ಮಾನ್, ಜನಾರ್ಧನ್ ಮತ್ತಿತರರು ಉಪಸ್ಥಿತರಿದ್ದರು.

Comments are closed.