ಕರಾವಳಿ

ಮಂಗಳೂರು : ಫೆ.29ರಿಂದ ಅಬ್ಬಕ್ಕ ಉತ್ಸವ 

Pinterest LinkedIn Tumblr

ಮಂಗಳೂರು ಫೆಬ್ರವರಿ 02 :ವೀರರಾಣಿ ಅಬ್ಬಕ್ಕ ಉತ್ಸವ ಫೆಬ್ರವರಿ 29 ಹಾಗೂ ಮಾರ್ಚ್ 1ರಂದು ನಡೆಯಲಿದೆ.ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಈ ಸಂಬಂಧ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.

ಜಿಲ್ಲಾಧಿಕಾರಿಗಳು ಮಾತನಾಡಿ, ಅಬ್ಬಕ್ಕ ಉತ್ಸವದ ಯಶಸ್ಸಿಗೆ ಎಲ್ಲರೂ ಶ್ರಮಿಸಬೇಕು. ಅಬ್ಬಕ್ಕ ರಾಣಿಯ ಸಾಧನೆಗಳು ಹಾಗೂ ಅಬ್ಬಕ್ಕ ಹೋರಾಟದ ಉದ್ದೇಶಗಳು ಈ ಉತ್ಸವದ ಮೂಲಕ ರಾಜ್ಯದ ಮೂಲೆಮೂಲೆಗಳಿಗೂ ತಲುಪುವಂತಾಗಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಜಿಲ್ಲಾಡಳಿತದೊಂದಿಗೆ ಕೈಜೋಡಿಸಬೇಕು ಎಂದು ತಿಳಿಸಿದರು.

ಉತ್ಸವವನ್ನು ಅಸೈಗೋಳಿಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಉದ್ಘಾಟನಾ ಕಾರ್ಯಕ್ರಮ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಪ್ರಧಾನ ವೇದಿಕೆಯಲ್ಲಿ ನಡೆಸಲಾಗುವುದು. ಕವಿಗೋಷ್ಠಿ, ಚರ್ಚಾಗೋಷ್ಠಿಗಳನ್ನು ಶೈಕ್ಷಣಿಕ ಸಂಸ್ಥೆಗಳಲ್ಲಿ ನಡೆಸಲು ಚಿಂತಿಸಲಾಗಿದೆ. ಅಬ್ಬಕ್ಕ ರಾಣಿಯ ಸಾಧನೆ, ಹೋರಾಟಗಳನ್ನು ತಳಮಟ್ಟಕ್ಕೆ ಪಸರಿಸುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಸಾಹಿತ್ಯಿಕ ಸ್ಪರ್ಧೆಗಳನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಮೂಲಕ ನಡೆಸಲಾಗವುದು ಎಂದು ಜಿಲ್ಲಾಧಿಕಾರಿಗಳು ಹೇಳಿದರು.

ಅಬ್ಬಕ್ಕ ಉತ್ಸವವನ್ನು ಸ್ಥಳೀಯರ ಸಹಕಾರದೊಂದಿಗೆ ಜಿಲ್ಲಾಡಳಿತವೇ ನಡೆಸಲಿದೆ. ಎಲ್ಲರೂ ಇದಕ್ಕಾಗಿ ಕೈಜೋಡಿಸಬೇಕು. ಉತ್ಸವ ಸಂಬಂಧ ವಿವಿಧ ಸಮಿತಿಗಳಲ್ಲಿ ಸ್ಥಳೀಯರನ್ನು ತೊಡಗಿಸಿಕೊಳ್ಳಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ರೂಪಾ ತಿಳಿಸಿದರು.
ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷ ಮುಹಮ್ಮದ್ ಮೋನು ಮಾತನಾಡಿ, ಅಸೈಗೋಳಿಯ ಪಕ್ಕದಲ್ಲೇ ಇರುವ ಮಂಗಳೂರು ವಿಶ್ವವಿದ್ಯಾನಿಲಯ ಆವರಣದಲ್ಲಿ ಅಬ್ಬಕ್ಕ ಉತ್ಸವ ನಡೆಸುವುದು ಸೂಕ್ತವಾಗಿದೆ. ವಿವಿಯಲ್ಲಿ ಅಬ್ಬಕ್ಕ ಪೀಠ ಕೂಡಾ ಇರುವುದರಿಂದ ಅಲ್ಲಿಯೇ ಉತ್ಸವ ನಡೆಸಿದರೆ ಹೆಚ್ಚು ಅರ್ಥಪೂರ್ಣವಾಗಲಿದೆ ಎಂದರು.

ಮಾಜಿ ಶಾಸಕ ಜಯರಾಮ ಶೆಟ್ಟಿ ಮಾತನಾಡಿ, ತೊಕ್ಕೊಟಿನಲ್ಲಿ ಅಬ್ಬಕ್ಕ ಭವನ ನಿರ್ಮಾಣಕ್ಕೆ ಜಮೀನು ಕಾದಿರಿಸಿ, ಅನುದಾನ ಬಿಡುಗಡೆಯಾಗಿದೆ. ಕಾಮಗಾರಿಯನ್ನು ತ್ವರಿತವಾಗಿ ಪ್ರಾರಂಭಿಸಬೇಕು ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಅಬ್ಬಕ್ಕ ಭವನ ನಿರ್ಮಾಣ ಕಾಮಗಾರಿಯನ್ನು ಕರ್ನಾಟಕ ಗೃಹ ಮಂಡಳಿಗೆ ವಹಿಸಲಾಗಿದ್ದು, ಶೀಘ್ರವೇ ಕೆಲಸ ಪ್ರಾರಂಭವಾಗಲಿದೆ ಎಂದರು.

ಸಭೆಯಲ್ಲಿ ಮಂಗಳೂರು ಉಪವಿಭಾಗಾಧಿಕಾರಿ ಮದನ್ ಮೋಹನ್, ಕನ್ನಡ ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಮತ್ತಿತರರು ಉಪಸ್ಥಿತರಿದ್ದರು.

Comments are closed.