ಕರಾವಳಿ

ಕುಂದಾಪುರ ಫ್ಲೈಓವರ್ ಸಮಸ್ಯೆ- ನಾಗರಿಕ ಬರೆದ ಪತ್ರಕ್ಕೆ ಪ್ರಧಾನಿ ಕಾರ್ಯಾಲಯದ ಸ್ಪಂದನೆ

Pinterest LinkedIn Tumblr

ಕುಂದಾಪುರ: ಇಲ್ಲಿನ ಶಾಸ್ತ್ರಿ ಸರ್ಕಲ್‌ ಬಳಿಯಲ್ಲಿ ಕಳೆದ 10 ವರ್ಷಗಳಿಂದ ಆಮೆ ನಡಿಗೆಯಲ್ಲಿ ಸಾಗುತ್ತಿರುವ ರಾಷ್ಟ್ರೀಯ ಹೆದ್ದಾರಿ 66 ರ ಮೇಲ್ಸೇತುವೆ ಕಾಮಗಾರಿಯ ವಿಳಂಭದ ಬಗ್ಗೆ ಅಸಮಧಾನಗೊಂಡಿರುವ ಇಲ್ಲಿನ ಗಾಂಧಿ ಮೈದಾನದ ಸಮೀಪದ ಬಿ.ವಿ.ಎಸ್‌ ರಸ್ತೆಯ ನಿವಾಸಿ ವಿಘ್ನೇಶ್‌ ಶೆಣೈ ಎನ್ನುವವರು ಪ್ರಧಾನಿ ಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ಗಮನ ಸೆಳೆದಿದ್ದಾರೆ.

ಉಡುಪಿಯ ಸಂತೆಕಟ್ಟೆಯಲ್ಲಿ ಉದ್ಯೋಗಿಯಾಗಿರುವ ಶೆಣೈ, ಕಳೆದ ಕೆಲ ವರ್ಷಗಳಿಂದ ಶಾಸ್ತ್ರಿ ಸರ್ಕಲ್‌ ಬಳಿಯಲ್ಲಿ ನಡೆಯುತ್ತಿರುವ ಈ ಕಾಮಗಾರಿಯಿಂದಾಗಿ ನಗರದ ಹಾಗೂ ನಗರಕ್ಕೆ ಬರುವ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳನ್ನು ವಿಸ್ತ್ರತವಾಗಿ ವಿವರಿಸಿದ್ದಾರೆ. ಅವ್ಯವಸ್ಥೆಯ ಆಗರವಾಗಿರುವ ಕಾಮಗಾರಿಯಿಂದಾಗಿ ಹೆದ್ದಾರಿ, ಸರ್ವಿಸ್‌ ರಸ್ತೆ ಹಾಗೂ ಪುರಸಭಾ ರಸ್ತೆಗಳು ಒಂದೆ ಎನ್ನುವಂತಾಗಿದೆ. ಪ್ರತಿ ದಿನ ಬೆಂಗಳೂರು ಹಾಗೂ ರಾಜ್ಯದ ಇತರ ಭಾಗಗಳಿಂದ ಬರುವ ಬಸ್ಸುಗಳಿಗೆ ಸಂಚಾರ ಸಮಸ್ಯೆಗಳಾಗುತ್ತಿದೆ. ಸರುತ್ಕಲ್‌ನಿಂದ ಕುಂದಾಪುರದವರೆಗೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕಾಮಗಾರಿ ಪೂರ್ಣಗೊಳ್ಳದೆ ಇದ್ದರೂ, ಸಾಸ್ತಾನ ಹಾಗೂ ಹೆಜಮಾಡಿ ಟೋಲ್‌ ಗೇಟ್‌ಗಳಲ್ಲಿ ಪ್ರಯಾಣಿಕರಿಂದ ಶುಲ್ಕ ವಸೂಲಾತಿ ಮಾಡಲಾಗುತ್ತಿದೆ ಎನ್ನುವುದನ್ನು ಪತ್ರದಲ್ಲಿ ಬೊಟ್ಟು ಮಾಡಿರುವ ಅವರು ಈ ಭಾಗದ ಕಾಮಗಾರಿ ಪೂರ್ಣಗೊಳ್ಳುವವರೆಗೆ ಟೋಲ್‌ ಸಂಗ್ರಹ ಟೋಲ್‌ ಸಂಗ್ರಹ ನಿಲ್ಲಿಸುವಂತೆ ಪತ್ರದಲ್ಲಿ ಆಗ್ರಹಿಸಿದ್ದಾರೆ.

ಡಿ.24 ರಂದು ಅವರು ಬರೆದಿರುವ ಪತ್ರಕ್ಕೆ ಸ್ಪಂದನೆ ನೀಡಿರುವ ಪ್ರಧಾನಿ ಮಂತ್ರಿಯವರ ಕಾರ್ಯಾಲಯದಿಂದ, ನಿಮ್ಮ ಪತ್ರ ತಲುಪಿದೆ. ನಿಮ್ಮ ಪತ್ರ ಹಾಗೂ ಸಮಸ್ಯೆಯ ಕುರಿತು ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಭೂ ಸಾರಿಗೆ ಮತ್ತು ಹೆದ್ದಾರಿ ಇಲಾಖೆಯ ಸಚಿವಾಲಯಕ್ಕೆ ಕಳುಹಿಸಲಾಗಿದೆ ಎಂದು ಉತ್ತರಿಸಲಾಗಿದೆ.

Comments are closed.