ಕರಾವಳಿ

ಸ್ಮಾರ್ಟ್ ಸಿಟಿ ಯೋಜನೆಯಡಿ 2564.3 ಕೋಟಿ ರೂ. ಮೊತ್ತದ 47 ಕಾಮಗಾರಿಗಳು ಮಂಜೂರು : ಮುಹಮ್ಮದ್ ನಜೀರ್

Pinterest LinkedIn Tumblr

ಮಂಗಳೂರು: ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ 47 ಕಾಮಗಾರಿಗಳ ಪೈಕಿ 27 ಸರಕಾರಿ ಕಟ್ಟಡಗಳಿಗೆ ಎಲ್‌ಇಡಿ ಲೈಟಿಂಗ್ ವ್ಯವಸ್ಥೆ ಅಳವಡಿಕೆ ಮತ್ತು ಹಂಪನಕಟ್ಟೆಯಲ್ಲಿ ಕ್ಲಾಕ್ ಟವರ್ ಸ್ಥಾಪನೆ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದೆ. ಇಂಟೆಗ್ರೇಟೆಡ್ ಕಮಾಂಡ್ ಕಂಟ್ರೋಲ್ ಸೆಂಟರ್‌ಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಮುಹಮ್ಮದ್ ನಜೀರ್ ತಿಳಿಸಿದರು.

ದ.ಕ. ಜಿಲ್ಲಾ ಕಾರ್ಯನಿತರ ಪತ್ರಕರ್ತರ ಸಂಘದ ವತಿಯಿಂದ ನಗರದ ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ನಡೆದ ಮಂಗಳೂರು ಸ್ಮಾರ್ಟ್ ಸಿಟಿ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೇಂದ್ರ ಹಾಗೂ ರಾಜ್ಯ ಸರಕಾರದ ಅನುದಾನದಿಂದ ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಡಿ 2564.3 ಕೋಟಿ ರೂ. ಮೊತ್ತದ 47 ಕಾಮಗಾರಿಗಳು ಮಂಜೂರಾಗಿವೆ. ಈಗಾಗಲೇ ೨ ಕಾಮಗಾರಿಗಳು ಸಂಪೂರ್ಣವಾಗಿವೆ.

ಪ್ರಥಮ ಕಾಮಗಾರಿಯಾಗಿ ನಗರದ ೨೭ ಸರಕಾರಿ ಕಟ್ಟಡಗಳಲ್ಲಿ ಲೈಟಿಂಗ್ ವ್ಯವಸ್ಥೆಯನ್ನು ಎಲ್‌ಇಡಿಗೆ 1.91 ಕೋಟಿ ರೂ. ವೆಚ್ಚದಲ್ಲಿ ಪರಿವರ್ತಿಸಲಾಗಿದೆ. ಕಾಮಗಾರಿ ಪೂರ್ಣಗೊಂಡು ಆರು ತಿಂಗಳು ಆಗಿದ್ದು, ಈ ಪರಿವರ್ತನೆಯಿಂದಾಗಿ ಶೇ. 52.5ವಿದ್ಯುತ್ ಉಳಿತಾಯವಾಗುತ್ತಿದೆ. ಒಂದೂವರೆ ವರ್ಷದಲ್ಲೇ ಶೇ. 90ರಷ್ಟು ಹೂಡಿಕೆ ವಾಪಾಸಾಗಲಿದ್ದು, ವಾರ್ಷಿಕ 1.41 ಕೋಟಿ ರೂ. ಉಳಿತಾಯವಾಗಲಿದೆ ಎಂದರು.

ಕ್ಲಾಕ್ ಟವರ್- 45 ಲಕ್ಷ ರೂ :

ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಿಸಲಾದ ಕ್ಲಾಕ್ ಟವರ್ ಬಗ್ಗೆಯೂ ಸಾಕಷ್ಟು ಪರ ವಿರೋಧ, ಆಕ್ಷೇಪಗಳು ವ್ಯಕ್ತವಾಗಿದ್ದವು. ಆದರೆ ರಾಜ್ಯದಲ್ಲಿಯೇ ಪ್ರಥಮವಾದ ಅಪರೂಪದ ವಿನ್ಯಾಸ ಹಾಗೂ ವಾಸ್ತುಶಿಲ್ಪ ಹೊಂದಿದ ರಚನೆಯಾಗಿ ಇದು ನಿರ್ಮಾಣವಾಗಿದೆ. ಆರಂಭದಲ್ಲಿ 90 ಲಕ್ಷ ರೂ. ವೆಚ್ಚದ ಕಾಮಗಾರಿ ಎಂದು ಅಂದಾಜಿಸಲಾಗಿತ್ತು. ಆದರೆ, 45 ಲಕ್ಷ ರೂ.ಗಳಲ್ಲಿ ಕ್ಲಾಕ್ ಟವರ್ ಪೂರ್ಣಗೊಳಿಸಲಾಗಿದೆ. ಇದು ಪ್ರವಾಸಿಗರ ಆಕರ್ಷಣೆಯಾಗಲಿದೆ ಎಂದು ಅವರು ಹೇಳಿದರು.

ಇಂಟೆಗ್ರೇಟೆಡ್ ಕಮಾಂಡ್ ಕಂಟ್ರೋಲ್ ಸೆಂಟರ್‌ಗಳ ನಿರ್ಮಾಣ ಕಾಮಗಾರಿ ನಿರ್ಮಾಣ ಹಂತದಲ್ಲಿದೆ. ನಗರದಲ್ಲಿ ಸಂಚಾರ ವ್ಯವಸ್ಥೆಯ ನಿಗಾ, ಮೇಲ್ವಿಚಾರಣೆ ಜತೆಗೆ ಘನತ್ಯಾಜ್ಯ ವಾಹನಗಳ ನಿರ್ವಹಣೆ ಹಾಗೂ ಮೇಲುಸ್ತುವಾರಿಯನ್ನೂ ನಿರ್ವಹಿಸಲಿದೆ. ನಗರದಲ್ಲಿ ಘನತ್ಯಾಜ್ಯಗಳನ್ನು ನಿರ್ವಹಿಸುವ ೧೩೨ ವಾಹನಗಳಿಗೆ ಜಿಪಿಎಸ್ ಅಳವಡಿಸಿ ವಾಹನಗಳ ಪರಿಶೀಲನೆ ಕಾರ್ಯ ನಡೆಯಲಿದೆ.

ಈಗಾಗಲೇ ಮಣ್ಣಗುಡ್ಡ ವಾರ್ಡ್‌ನಲ್ಲಿ ೨೦೦೦ ಮನೆಗಳಿಗೆ ಬಾರ್‌ಕೋಡ್ ಅಳವಡಿಸಿ ತ್ಯಾಜ್ಯ ನಿರ್ವಹಣೆಯ ವ್ಯವಸ್ಥೆಯನ್ನು ಈ ಕಮಾಂಡ್ ಕೇಂದ್ರದ ವ್ಯವಸ್ಥೆಗೆ ಒಳಪಡಿಸಲಾಗಿದೆ. ಈ ಯೋಜನೆಯಡಿ ನಗರದ ೧೫ ಪ್ರಮುಖ ಜಂಕ್ಷನ್‌ಗಳಲ್ಲಿ ಸ್ಮಾರ್ಟ್ ಪೋಲ್‌ಗಳ ಅಳವಡಿಕೆ ನಡೆಯಲಿದೆ. ಎಲ್‌ಇಡಿ ಲೈಟ್, ಅಗತ್ಯ ಮಾಹಿತಿಗಳನ್ನು ಒದಗಿಸುವ ವಿಎಂಎಸ್ ಬೋರ್ಡ್, ೩೬೦ ಡಿಗ್ರಿ ಸುತ್ತುವ ಕ್ಯಾಮರಾ ಸೇರಿ ಐದು ಕ್ಯಾಮರಾಗಳ ಮೂಲಕ ನಗರದ ಗಸ್ತು ಕಾರ್ಯವೂ ಈ ಸ್ಮಾರ್ಟ್ ಪೋಲ್ ಮೂಲಕ ನಡೆಯಲಿದೆ. ಇದು ಪೊಲೀಸ್ ಕಂಟ್ರೋಲ್ ರೂಂಗೂ ಸಂಪರ್ಕವನ್ನು ಹೊಂದಿರುತ್ತದೆ. ಇದರಲ್ಲಿ ಎಮರ್ಜೆನ್ಸಿ ಬಟನ್ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ತುರ್ತು ಸಂದರ್ಭಗಳಲ್ಲಿ ಈ ಬಟನ್ ಪ್ರೆಸ್ ಮಾಡುವ ಮೂಲಕ ಸಂಬಂಧಪಟ್ಟವರಿಗೆ ಸಂದೇಶವನ್ನು ರವಾನಿಸಬಹುದಾಗಿದೆ ಎಂದು ಮುಹಮ್ಮದ್ ನಜೀರ್ ವಿವರಿಸಿದರು.

ಸ್ಮಾರ್ಟ್ ಬೀದಿ ದೀಪ:

ನಗರದ ಬೀದಿ ಬೀದಿಗಳನ್ನು ಎಲ್‌ಇಡಿಗೆ ಪರಿರ್ವತಿಸುವ ನಿಟ್ಟಿನಲ್ಲಿ ಟೆಂಡರ್ ಆಗಿದ್ದು, ಆರು ತಿಂಗಳಲ್ಲಿ ನಗರದ ಎಲ್ಲಾ ಬೀದಿ ದೀಪಗಳು ಸ್ಮಾರ್ಟ್ ಆಗಲಿವೆ. ಜತೆಗೆ ವಾತಾವರಣಕ್ಕೆ ಹೊಂದಿಕೊಂಡು ಇದು ಬೆಳಗುವ ವ್ಯವಸ್ಥೆಯೂ ಆಗಲಿದೆ ಎಂದರು.

ಕಾರ್ ಪಾರ್ಕಿಂಗ್:  ಮಲ್ಟಿ ಲೆವೆಲ್ ಕಾರು ಪಾರ್ಕಿಂಗ್ ಮಹಾನಗರ ಪಾಲಿಕೆಯ ೧.೫೫ ಎಕರೆ ಜಮೀನಿನಲ್ಲಿ ೯೪ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲು ತೀರ್ಮಾನಿಸಲಾಗಿದ್ದು, ಫೆಬ್ರವರಿ ಪ್ರಥಮ ವಾರದ ಮಂಡಳಿ ಸಭೆಯಲ್ಲಿ ನಿರ್ಣಯವಾಗಲಿದೆ ಎಂದು ಮಾಹಿತಿ ನೀಡಿದರು.

2019ರ ಸೆಪ್ಟಂಬರ್‌ನಲ್ಲಿ 2ನೆ ಹಂತದಲ್ಲಿ ದೇಶದ ೪೦ ನಗರಗಳಲ್ಲಿ ಮಂಗಳೂರು ಕೂಡಾ ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆಯಾಗಿತ್ತು. ಬಳಿಕ ಆರು ತಿಂಗಳ ಪೂರ್ವ ತಯಾರಿಗಳು ನಡೆದು ಎಸ್‌ಪಿವಿ (ಸ್ಪೆಷಲ್ ಪರ್ಪಸ್ ವೆಹಿಕಲ್) ಮೂಲಕ ಯೋಜನೆಗೆ ರೂಪುರೇಷೆಗಳನ್ನು ತಯಾರಿಸಲಾಯಿತು. ೨೦೧೭ರ ಮೇ ತಿಂಗಳಲ್ಲಿ ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಕಂಪನಿ ಆಗಿ ಒಪ್ಪಂದದೊಂದಿಗೆ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು ಎಂದು ತಿಳಿಸಿದರು.

ಸ್ಮಾರ್ಟ್ ಸಿಟಿಯ ಜನರಲ್ ಮ್ಯಾನೇಜರ್ (ತಾಂತ್ರಿಕ) ಅರುಣ್ ಪ್ರಭಾ, ಜಿಎಂ ಮಹೇಶ್ ಕುಮಾರ್ ಭಾಗವಹಿಸಿದ್ದರು. ದ.ಕ. ಜಿಲ್ಲಾ  ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ಇಂದಾಜೆ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ಉಪಸ್ಥಿತರಿದ್ದರು. ಭಾಸ್ಕರ ರೈ ಕಟ್ಟ ಕಾರ್ಯಕ್ರಮ ನಿರೂಪಿಸಿದರು.

Comments are closed.