ಕರಾವಳಿ

ಉಚ್ಚಿಲ ಸ್ಮಶಾನ ವಿವಾದ: ಗ್ರಾ.ಪಂ ಎದುರು ಚಟ್ಟ ನಿರ್ಮಿಸಿ ಪ್ರತಿಭಟಿಸಿದ ದಲಿತರು

Pinterest LinkedIn Tumblr

ಉಡುಪಿ: ಉಚ್ಚಿಲ ಬಡಾ ಗ್ರಾಪಂ ವ್ಯಾಪ್ತಿಯಲ್ಲಿನ ಸಾರ್ವಜನಿಕ ಹಿಂದೂ ರುದ್ರಭೂಮಿಯ ವಿವಾದ ಹಾಗೂ ದಲಿತರ ಶವ ಸಂಸ್ಕಾರಕ್ಕೆ ಅವಕಾಶ ಇಲ್ಲದಿರುವುದನ್ನು ವಿರೋಧಿಸಿ ದಸಂಸ ಅಂಬೇಡ್ಕರ್ ವಾದ ಉಡುಪಿ ಜಿಲ್ಲಾ ಸಮಿತಿಯ ವತಿಯಿಂದ ಇಂದು ದಲಿತರೊಬ್ಬರ ನಿಧನದ ಹಿನ್ನೆಲೆಯಲ್ಲಿ ಗ್ರಾಪಂ ಕಚೇರಿ ಎದುರು ಚಟ್ಟ ನಿರ್ಮಿಸಿ ಪ್ರತಿಭಟನೆ ನಡೆಸಿದರು.

 

ಎರ್ಮಾಳ್ ಬಡ ಎಂಬಲ್ಲಿರುವ ಸಾರ್ವಜನಿಕ ಹಿಂದೂ ರುದ್ರಭೂಮಿಯಲ್ಲಿ ದಲಿತರಿಗೆ ಶವ ಸಂಸ್ಕಾರ ನಡೆಸಲು ಶತಮಾನಗಳಿಂದ ನಿರಾಕರಿಸಲಾಗುತ್ತಿದೆ ಎಂದು ಆರೋಪಿಸಿ ದಸಂಸ ಹಲವು ವರ್ಷಗಳಿಂದ ಹೋರಾಟಗಳನ್ನು ನಡೆಸುತ್ತಿದೆ. ಈ ಸರಕಾರ ಸ್ಮಶಾನದಲ್ಲಿ ಕೇವಲ ಒಂದು ಜಾತಿಯವರಿಗೆ ಮಾತ್ರ ಶವ ಸಂಸ್ಕಾರಕ್ಕೆ ಅವಕಾಶ ನೀಡಿ, ದಲಿತರಿಗೆ ನಿರಾಕರಿಸಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಈ ವಿವಾದಗಳ ಹಿನ್ನೆಲೆಯಲ್ಲಿ ಈ ಸ್ಮಶಾನವನ್ನು ಈಗ ಬಂದ್ ಮಾಡಲಾಗಿದೆ.

ಇಂದು ನಿಧನರಾದ ಉಚ್ಚಿಲ ಬಡಾ ಗ್ರಾಪಂ ವ್ಯಾಪ್ತಿಯ ಮುಳ್ಳಗುಡ್ಡೆಯ ಪರಿಶಿಷ್ಟ ಜಾತಿಗೆ ಸೇರಿದ ಶಂಕರ್(80) ಎಂಬವರ ಶವ ಸಂಸ್ಕಾರಕ್ಕೆ ಸ್ಮಶಾನ ಇಲ್ಲದ ಕಾರಣ, ದಸಂಸ ಜಿಲ್ಲಾ ಸಂಚಾಲಕ ಸುಂದರ್ ಮಾಸ್ತರ್ ನೇತೃತ್ವದಲ್ಲಿ ಗ್ರಾಪಂ ಕಚೇರಿ ಮುಂದೆ ಕಟ್ಟಿಗೆಗಳನ್ನು ಇರಿಸಿ ಚಟ್ಟವನ್ನು ನಿರ್ಮಿಸಿ ಪ್ರತಿಭಟನೆ ನಡೆಸಿದೆ.

ಘಟನಾ ಸ್ಥಳಕ್ಕೆ ಉಡುಪಿ ಎಡಿಸಿ ಸದಾಶಿವ ಪ್ರಭು, ಡಿವೈಎಸ್ಪಿ ಟಿ. ಜೈಶಂಕರ್, ಸಿಪಿಐ ಮಹೇಶ್ ಪ್ರಸಾದ್, ಪಡುಬಿದ್ರೆ ಠಾಣಾಧಿಕಾರಿ ಸುಬ್ಬಣ್ಣ, ಕಾಪು ತಹಶೀಲ್ದಾರ್ ಮುಹಮ್ಮದ್ ಇಸಾಕ್, ಭೇಟಿ ನೀಡಿದ್ದಾದ್ದು ದಸಂಸ ಮುಖಂಡರೊಂದಿಗೆ ಮಾತುಕತೆ ನಡೆಸಿ ಬೆಳಪು ಗ್ರಾಪಂನ ಸ್ಮಶಾನದಲ್ಲಿ ವ್ಯವಸ್ಥೆ ಕಲ್ಪಿಸುವುದಾಗಿ ಹೇಳಿದ್ದು ಇದನ್ನು ನಿರಾಕರಿಸಿದ ಮುಖಂಡರು, ಬಡಾ ಗ್ರಾಪಂ ವ್ಯಾಪ್ತಿಯಲ್ಲಿಯೇ ಮೃತದೇಹ ಅಂತ್ಯಕ್ರಿಯೆ ನಡೆಸಲು ಅವಕಾಶ ಮಾಡಬೇಕು ಅಲ್ಲದೆ ಸ್ಥಳಕ್ಕೆ ಜಿಲ್ಲಾಧಿಕಾರಿ ಆಗಮಿಸಬೇಕೆಂದು ಪಟ್ಟು ಹಿಡಿದರು.

Comments are closed.