ಕರಾವಳಿ

ಕೋಟ ಡಬ್ಬಲ್ ಮರ್ಡರ್ ಕೇಸ್ ಆರೋಪಿ ರಾಘವೇಂದ್ರ ಕಾಂಚನ್ ಜಾಮೀನು ವಜಾಗೊಳಿಸಿದ ಸುಪ್ರೀಂ ಕೋರ್ಟ್

Pinterest LinkedIn Tumblr

ಕುಂದಾಪುರ: ಕಳೆದ ವರ್ಷ ಜನವರಿ 26ರಂದು ಕೋಟದ ಮಣೂರು ಎಂಬಲ್ಲಿ ನಡೆದಿದ್ದ ಯತೀಶ್ ಕಾಂಚನ್ ಹಾಗೂ ಭರತ್ ಜೋಡಿ ಕೊಲೆ ಪ್ರಕರಣದಲ್ಲಿ ಆರೋಪಿ ರಾಘವೇಂದ್ರ ಕಾಂಚನ್’ಗೆ ಹೈ ಕೋರ್ಟ್ ನೀಡಿದ ಜಾಮೀನು ವಜಾಗೊಳಿಸಿ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಈ ಬಗ್ಗೆ ಕೊಲೆಯಾದ ಭರತ್‌ ಅವರ ತಾಯಿ ಪಾರ್ವತಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು ಜಿಲ್ಲಾ ಪಂಚಾಯತ್ ಸದಸ್ಯ ಬಾರಿಕೆರೆ ರಾಘವೇಂದ್ರ ಕಾಂಚನ್‌ಗೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಜಾಮೀನು ವಜಾಗೊಳಿಸಿ ಆದೇಶ ನೀಡಿದೆ.

(ರಾಘವೇಂದ್ರ ಕಾಂಚನ್)

ಈ ಅವಳಿ ಕೊಲೆ‌ ಪ್ರಕರಣದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ರಾಘವೇಂದ್ರ ಕಾಂಚನ್ ಒಳಸಂಚು ರೂಪಿಸಿದ್ದರೆಂದು ಆರೋಪವಿತ್ತು. ಪ್ರಕರಣದಲ್ಲಿ ರಾಘವೇಂದ್ರ ಕಾಂಚನ್, ಇಬ್ಬರು ಪೊಲೀಸ್ ಸಿಬ್ಬಂದಿಗಳ ಸಹಿತ ಸುಫಾರಿ ಹಂತಕರು ಹಾಗೂ ಆರೋಪಿಗಳಿಗೆ ತಲೆಮರೆಸಿಕೊಳ್ಳಲು ಸಹಕಾರ ನೀಡಿದವರು ಸೇರಿ 18 ಮಂದಿ ಬಂಧನವಾಗಿತ್ತು.

(ಕೊಲೆಯಾದ ಯತೀಶ್, ಭರತ್)

ಬಂಧಿತ ರಾಘವೇಂದ್ರ ಕಾಂಚನ್ ಅವರಿಗೆ ಕೆಳ ನ್ಯಾಯಾಲಯದಲ್ಲಿ ಜಾಮೀನು ನಿರಾಕರಣೆಯಾಗಿತ್ತು. ಬಳಿಕ ಹೈಕೋರ್ಟಿನ ಮೊರೆ ಹೋದ ಅವರಿಗೆ ಶರತ್ತು ಬದ್ದ ಜಾಮೀನು ಸಿಕ್ಕಿತ್ತು. ಇದಾದ ಬಳಿಕ ಇಬ್ಬರು ಪೊಲೀಸರ ಸಹಿತ ಆರು ಮಂದಿ ಆರೋಪಿಗಳಿಗೆ ಜಿಲ್ಲಾ ಹೆಚ್ಚುವರಿ ಸತ್ರ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು.

ರಾಘವೇಂದ್ರ ಕಾಂಚನರಿಗೆ ಉಚ್ಛ ನ್ಯಾಯಾಲಯದಲ್ಲಿ ಜಾಮೀನು ಸಿಕ್ಕಿದ ಹಿನ್ನೆಲೆ ಕೊಲೆಯಾದ ಭರತನ ತಾಯಿ ಪಾರ್ವತಿ ಅವರು ಕೊಲೆ‌ ಪ್ರಕರಣದ ಆರೋಪಿಗೆ ಜಾಮೀನು ನೀಡಿರುವುದನ್ನು ಪ್ರಶ್ನಿಸಿ ಸರ್ವೋಚ್ಛ ನ್ಯಾಯಾಲಯದ ಮೊರೆ ಹೋಗಿದ್ದರು. ಪಾರ್ವತಿಯವರ ಅರ್ಜಿ ವಿಚಾರಣೆಗೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್, ಜಾಮೀನು ವಜಾಗೊಳಿಸಿ ಆದೇಶ ನೀಡಿದ್ದಾರೆ. ಸುಪ್ರೀಂ ಕೋರ್ಟಿನಲ್ಲಿ ಸಂತ್ರಸ್ಥೆ ಪಾರ್ವತಿ ಪರ ಸುಪ್ರೀಂ ಕೋರ್ಟ್ ವಕೀಲ ಚಂದ್ರಶೇಖರ್ ವಾದಿಸಿದ್ದರು.

Comments are closed.