ಕರಾವಳಿ

ಜನವರಿ 22ರಿಂದ ಫೆಬ್ರವರಿ 3: ಶ್ರೀ ಕ್ಷೇತ್ರ ಕಟೀಲಿನಲ್ಲಿ ಬ್ರಹ್ಮಕಲಶೋತ್ಸವ ಹಾಗೂ ನಾಗಮಂಡಲ – 25 ಲಕ್ಷ ಭಕ್ತರು ಆಗಮಿಸುವ ನಿರೀಕ್ಷೆ

Pinterest LinkedIn Tumblr

ಮಂಗಳೂರು, ಜನವರಿ,21 : ಜನವರಿ 22 ರಿಂದ ಫೆಬ್ರವರಿ 3 ರ ವರೆಗೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆಯಲಿರುವ ಬ್ರಹ್ಮಕಲಶೋತ್ಸವ ಹಾಗೂ ಧಾರ್ಮಿಕ, ಸಾಂಸ್ಕೃತಿಕ, ಭಜನಾ ಮತ್ತು ಸಭಾಕಾರ್ಯಕ್ರಮಗಳಲ್ಲಿ ಸುಮಾರು 25 ಲಕ್ಷ ಭಕ್ತರು ಆಗಮಿಸುವ ನಿರೀಕ್ಷೆ ಇದೆ ಎಂದು ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ, ಮೂಲ್ಕಿ ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದ್ದಾರೆ.

ನಗರದ ಹೊಟೇಲ್ ಓಷಿಯಾನ್ ಪರ್ಲ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀಕ್ಷೇತ್ರ ಕಟೀಲು ಬ್ರಹ್ಮಕಲಶೋತ್ಸವದ ಸಿದ್ಧತೆ ಭರದಿಂದ ಸಾಗುತ್ತಿದೆ. . ಧಾರ್ಮಿಕ, ಸಾಂಸ್ಕೃತಿಕ, ಭಜನಾ ಮತ್ತು ಸಭಾಕಾರ್ಯಕ್ರಮಗಳ ಸಿದ್ಧತೆಯಾಗಿದೆ. ಈಗಾಗಲೇ ಭಕ್ತರು ಕರಸೇವೆಯ ಮೂಲಕ ಬ್ರಹ್ಮಕಲಶೋತ್ಸವಕ್ಕೆ ಬೇಕಾದ ಸುಮಾರು 2ಕೋಟಿಗೂ ಮೀರಿದ ಕೆಲಸಗಳನ್ನು ಯಾವುದೇ ಅಪೇಕ್ಷೆ ಇಲ್ಲದೆ ಉಚಿತವಾಗಿಯೇ ಮಾಡಿದ್ದಾರೆ. ಕಟೀಲು ಅಮ್ಮನವರಿಗೆ ದೇಶ ವಿದೇಶದಲ್ಲಿ ಭಕ್ತರಿದ್ದಾರೆ ಆಗಾಗಿ ಅತ್ಯಧಿಕ ಭಾಕ್ತಾದಿಗಳು ಪಾಲ್ಗೊಳ್ಳುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ

ಜನವರಿ 24 ರಂದು ಸುವರ್ಣ ಧ್ವಜಪ್ರತಿಷ್ಠೆ ಜನವರಿ 30 ರಂದು ಬ್ರಹ್ಮಕಲಶ, ಫೆಬ್ರವರಿ 1ರಂದು ನಾಗಮಂಡಲ, 2ರಂದು ಕೋಟಿಜಪಯಜ್ಞ ಹಾಗೂ 3ರಂದು ಸಹಸ್ರಚಂಡಿಕಾಯಾಗ ನಡೆಯಲಿದೆ. ಹದಿಮೂರು ದಿನಗಳ ಕಾಲ ನಡೆಯುವ ಈ ಉತ್ಸವವನ್ನು ಯಶಸ್ವಿಯಾಗಿ ನಡೆಸಲು ಪ್ರಧಾನ ಸಮಿತಿಯನ್ನೊಳಗೊಂಡ 30 ಸಮಿತಿಗಳ ರಚನೆಗೊಂಡಿದ್ದು ಎಲ್ಲಾ ಸಮಿತಿಗಳು ಸಕ್ರಿಯವಾಗಿ ತೊಡಗಿಕೊಂಡಿವೆ. ಕಳೆದ ಒಂದು ತಿಂಗಳಿಂದ ಕರಾವಳಿ ಜಿಲ್ಲೆಗಳ ಬೇರೆಬೇರೆ ಭಾಗದಿಂದ ಸಾವಿರಾರು ಸ್ವಯಂಸೇವಕರು ತಂಡತಂಡವಾಗಿ ಆಗಮಿಸಿ ಕರಸೇವೆಯಲ್ಲಿ ಮಗ್ನರಾಗಿದ್ದಾರೆ.

ಬ್ರಹ್ಮಕಲಶದ ಸಂದರ್ಭದಲ್ಲಿ ಆಗಮಿಸುವ ಭಕ್ತರಿಗೆ ಉತ್ತಮ ವ್ಯವಸ್ಥೆ ಕಲ್ಪಿಸಲು ದೇವಸ್ಥಾನದ ಆಡಳಿತ ಮಂಡಳಿ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಅಹರ್ನಿಶಿ ಪ್ರಯತ್ನಿಸುತ್ತಿದೆ. ದೇವಸ್ಥಾನದ ಮುಂಭಾಗದ ಅಂಗಡಿಗಳನ್ನು ತೆರವುಗೊಳಿಸಿ ಮತ್ತು ಸ್ಥಳವನ್ನು ಖರೀದಿಸಿ ನೆಲಕ್ಕೆ ಡಾಮರು ಹಾಕಿ ರಥಬೀದಿಯನ್ನು ವಿಶಾಲಗೊಳಿಸಲಾಗಿದೆ. ಸರಸ್ವತೀಸದನವಿರುವ ಪ್ರದೇಶದ ಮಣ್ಣು ತೆಗೆಸಿ ಡಾಮರು ಹಾಕಿ ವಿಶಾಲಗೊಳಿಸಲಾಗಿದೆ.

ಸುಸಜ್ಜಿತವಾದ ಪಾಕಶಾಲೆ ನಿರ್ಮಾಣಗೊಂಡು ಉದ್ಘಾಟನೆ ನಡೆದಿದೆ. ಯಾತ್ರೀನಿವಾಸದ ಎರಡನೇ ಹಂತದ ನಿರ್ಮಾಣ, ಇಂಟರ್‌ಲಾಕ್ ಅಳವಡಿಸುವಿಕೆ ಸಂಪೂರ್ಣಗೊಂಡಿದೆ. ಸುಮಾರು 50 ಲಕ್ಷ ವೆಚ್ಚದಲ್ಲಿ ಸಾರ್ವಜನಿಕ ಶೌಚಾಲಯ ಉದ್ಘಾಟನೆಗೊಂಡಿದೆ. ದೇವಾಲಯಕ್ಕೆ ಹೋಗುವುದಕ್ಕೆ ಸ್ಟೀಲ್‌ಬ್ರಿಡ್ಜ್, ಆನೆಲಾಯ, ಸೌಂದರ್ಯವೃದ್ಧಿಗೆ ಹೂತೋಟ ನಿರ್ಮಾಣ ಮಾಡಲಾಗಿದೆ. ಹೊಸದಾದ ರಥದ ಕೊಟ್ಟಿಗೆ ನಿರ್ಮಾಣವಾಗಿದೆ. ಸ್ವರ್ಣಲೇಪಿತ ಧ್ವಜಸ್ಥಂಭದ ನಿರ್ಮಾಣವಾಗಿದೆ. 36ಕೊಠಡಿಗಳ ಭ್ರಾಮರೀ ವಸತಿಗ್ರಹ ನಿರ್ಮಾಣಗೊಂಡಿದೆ ಎಂದವರು ವಿವರ ನೀಡಿದರು.

ಶ್ರೀ ಕ್ಷೇತ್ರ ಕಟಿಲಿನ ಅನುವಂಶಿಕ ಅರ್ಚಕರಾದ ಶ್ರೀ ಅನಂತಪದ್ಮನಾಭ ಅಸ್ರಣ್ಣ ಅವರು ಮಾತನಾಡಿ, ಏಕಕಾಲದಲ್ಲಿ 5 ಸಾವಿರ ಭಕ್ತರಿಗೆ ಊಟೋಪಚಾರ ಪೂರೈಸಲು ಸಿತ್ಲಬಯಲಿನಲ್ಲಿ ವಿಶಾಲವಾದ ಅನ್ನಚಪ್ಪರ ಇಂಟರ್‌ಲಾಕ್ ಅಳವಡಿಸಿದ ಪಾಕಶಾಲೆ, ಕೈ ತೊಳೆಯುವುದಕ್ಕೆ ನಲ್ಲಿ ಮತ್ತು ನೀರಿನ ವ್ಯವಸ್ಥೆ ಮಾಡಲಾಗಿದೆ. ಕುಳಿತು ಊಟಮಾಡುವುದಕ್ಕೆ, ಸ್ವಸಹಾಯ ವ್ಯವಸ್ಥೆ (ಬಫೆ) ಮಾಡಲಾಗಿದೆ. ಬೆಳಿಗ್ಗೆ ಗಂಟೆ 06.00 ರಿಂದ 11.00 ರ ವರೆಗೆ ಉಪಾಹಾರದ ವ್ಯವಸ್ಥೆ, 11.30 ರಿಂದ 03.30ರ ವರೆಗೆ ಅನ್ನಪ್ರಸಾದ, ಪುನ: 04.00 ರಿಂದ 06.00ರ ವರೆಗೆ ಉಪಾಹಾರ, ರಾತ್ರಿ 12.00 ರ ವರೆಗೆ ಅನ್ನಪ್ರಸಾದ ವ್ಯವಸ್ಥೆ ಮಾಡಲಾಗಿದೆ.

ಉತ್ಸವ ಸಂದರ್ಭದಲ್ಲಿ ಸುಮಾರು 25 ಲಕ್ಷ ಭಕ್ತರು ಆಗಮಿಸುವ ನಿರೀಕ್ಷೆಯಿದ್ದು, ಈ ಕುರಿತು ವ್ಯವಸ್ಯೆಯನ್ನು ಮಾಡಿಕೊಳ್ಳಲಾಗಿದೆ. ಸುಮಾರು ರೂ.7 ಕೋಟಿ ಇದಕ್ಕಾಗಿ ಖರ್ಚು ತಗುಲಬಹುದೆಂದು ಊಹಿಸಲಾಗಿದೆ.

ಬ್ರಹ್ಮಕಲಶದ ಸಂದರ್ಭದಲ್ಲಿ ನಡೆಯಲಿರುವ ಸಭಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ದೇವಳದ ಬಸ್ಸು ನಿಲ್ದಾಣದಲ್ಲಿ ವಿಶಾಲವಾದ ವೇದಿಕೆ ಸಿದ್ಧವಾಗಿದೆ. ಆಸಕ್ತರು ಕುಳಿತು ನೋಡುವುದಕ್ಕಾಗಿ ವಿಶಾಲವಾದ ಸಭಾಂಗಣ ಸಿದ್ಧವಾಗಿದೆ. ಸುಮಾರು ಎರಡೂವರೆ ಸಾವಿರ ಜನರು ಏಕಕಾಲದಲ್ಲಿ ಕುಳಿತು ನೋಡುವುದಕ್ಕೆ ಅವಕಾಶ ಕಲ್ಪಿಸಲಾಗಿದೆ.ಊರೂರಿನಿಂದ ಬರುವ ಹೊರೆಕಾಣಿಕೆಯನ್ನು ಸಂಗ್ರಹಿಸಲು ದೇವಳದ ಮುಂಭಾಗದಲ್ಲಿ ವಿಶಾಲವಾದ ತಗಡಿನ ಚಪ್ಪರ ನಿರ್ಮಾಣ ಮಾಡಲಾಗಿದೆ. ಎಲ್ಲವನ್ನೂ ಒಂದೆಡೆ ಸಂಗ್ರಹಿಸುವುದಕ್ಕೆ ಅನುಕೂಲವಾಗಿದೆ ಎಂದು ಮಾಹಿತಿ ನೀಡಿದರು.

ಶ್ರೀ ಕ್ಷೇತ್ರ ಕಟಿಲಿನ ಇನ್ನೋರ್ವ ಅನುವಂಶಿಕ ಅರ್ಚಕರಾದ ಶ್ರೀ ಹರಿನಾರಾಯಣದಾಸ ಅಸ್ರಣ ಅವರು ಮಾತನಾಡಿ, ಶ್ರೀ ಕ್ಷೇತ್ರಕ್ಕೆ ಬರುವ ಭಕ್ತರ ವಾಹನವನ್ನು ನಿಲ್ಲಿಸಲು ದೇವಸ್ಥಾನದ ನಾಲ್ಕು ದಿಕ್ಕುಗಳಲ್ಲಿ 19 ಕಡೆಗಳಲ್ಲಿ ಅಂದಾಜು 40 ಎಕರೆ ಜಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆಯಿದ್ದು, ಅಲ್ಲಿಂದ ಭಕ್ತರನ್ನು ದೇವಸ್ಥಾನಕ್ಕೆ ಕರೆತರಲು ಪ್ರತ್ಯೇಕ ವಾಹನ ವ್ಯವಸ್ಥೆಯನ್ನು ಸಮಿತಿಯೇ ಉದಾರಿಗಳ ಸಹಕಾರದಿಂದ ಮಾಡಿದೆ. ಪಾರ್ಕಿಂಗ್ ಸ್ಥಳಗಳಲ್ಲಿ ಶೌಚಾಲಯ, ಕುಡಿಯುವ ನೀರು, ತಾತ್ಕಾಲಿಕ ತಂಗುದಾಣಗಳ ವ್ಯವಸ್ಥೆಯಾಗುತ್ತಿದೆ. ಒಟ್ಟು ೫,೦೦೦ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಪಾರ್ಕಿಂಗ್ ಸ್ಥಳಗಳಿಗೆ ಗಂಗಾ, ಯಮುನಾ, ಕಾವೇರಿ. ಇತ್ಯಾದಿ ಪ್ರಸಿದ್ಧ ನದಿಗಳ ಹೆಸರನ್ನು ಇಡಲಾಗಿದೆ.

ರಸ್ತೆಗಳ ಅಗಲೀಕರಣ: ಕಿನ್ನಿಗೋಳಿ-ಉಲ್ಲಂಜೆ-ಕಟೀಲು, ಬಜಪೆ-ಕಟೀಲು, ಮೂರುಕಾವೇರಿ-ಕಟೀಲು ಈ ಮಾರ್ಗವನ್ನು ಸುಮಾರು 25 ಕೋಟಿ ವೆಚ್ಚದಲ್ಲಿ ಅಗಲ ಮಾಡುತ್ತಿದ್ದು ಈಗಾಗಲೇ ಹುಣಸೇಕಟ್ಟೆಯಿಂದ ಕಟೀಲುವರೆಗಿನ ಕೆಲಸ ಮುಕ್ತಾಯ ಹಂತದಲ್ಲಿದೆ. ತಾತ್ಕಾಲಿಕ ಬೈಪಾಸ್ ರಸ್ತೆಗಳನ್ನೂ ನಿರ್ಮಿಸಲಾಗಿದೆ. ಕಟೀಲಿನ ಸಂಪರ್ಕ ರಸ್ತೆಗಳನ್ನು ಅಗಲೀಕರಣಗೊಳಿಸಿ ಅಭಿವೃದ್ಧಿಪಡಿಸಲಾಗಿದೆ.

ಕುದುರು (ಭ್ರಾಮರೀವನ) ಅಭಿವೃದ್ಧಿ: ಮೂಲಸ್ಥಾನವಾದ ಕುದುರುವಿನಲ್ಲಿ ನಾಗಮಂಡಲ, ಕೋಟಿಜಪಯಜ್ಞ, ಸಹಸ್ರಚಂಡಿಕಾಯಾಗ ನಡೆಯಲಿದೆ. ಈ ಹಿನ್ನೆಲೆಯಲ್ಲಿ ನಾಗಮಂಡಲ ಮಂಟಪ, ಯಾಗಮಂಟಪ ಸಿದ್ಧವಾಗಿದೆ. ಕುದುರುವಿನಲ್ಲಿ ಯಾವುದೇ ಯಂತ್ರಗಳನ್ನು ಬಳಸದೇ ಶ್ರಮದಾನದಿಂದ ಮಣ್ಣುಹಾಕಿ ಸಮದಟ್ಟು ಮಾಡುವ ಕೆಲಸವಾಗಿದೆ. ನವಗ್ರಹ, ರಾಶಿವನಗಳ ಗಿಡಗಳನ್ನು ಯಜ್ಞದ ಮೂಲಕ ಆರಾಧನೆ ಮಾಡಿ ಮುಂದೆ ನಕ್ಷತ್ರವನ, ನವಗ್ರಹವನ ನಿರ್ಮಾಣವಾಗುವ ಹಿನ್ನೆಲೆಯಲ್ಲಿ ವೃಕ್ಷಪೂಜೆ, ವೃಕ್ಷದಾನ ಇತ್ಯಾದಿ ವ್ಯವಸ್ಥೆಗೆ ಅಣಿಯಾಗಿದೆ.

ಇತರ ವ್ಯವಸ್ಥೆಗಳು: ಬ್ರಹ್ಮಕಲಶೋತ್ಸವಕ್ಕೆ ಬರುವ ಭಕ್ತರಿಗೂ ವಿಶೇಷ ವ್ಯಕ್ತಿಗಳಿಗೂ, ಅತಿಥಿಗಳಿಗೂ, ಕಲಾವಿದರಿಗೂ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ನಿಗದಿತ ಪಾಸ್ ವ್ಯವಸ್ಥೆ ಮಾಡಲಾಗಿದೆ. ಉತ್ಸವ ಸಂದರ್ಭದಲ್ಲಿ ಯಾವುದೇ ಅವಘಡ, ಅಚಾತುರ್ಯ ನಡೆಯಬಾರದೆಂಬ ಉದ್ದೇಶದಿಂದ ತೊಡಗಿಕೊಳ್ಳುವ ಎಲ್ಲಾ ಸ್ವಯಂಸೇವಕರಿಗೂ ಐಡಿ ಕಾರ್ಡ್ ವ್ಯವಸ್ಥೆ ಮಾಡಲಾಗಿದೆ. ಅಲ್ಲಲ್ಲಿ ಸಿಸಿ ಕ್ಯಾಮೆರಾ, ಕುಡಿಯುವ ನೀರು, ಕಾರ್ಯಕ್ರಮವನ್ನು ನೋಡುವುದಕ್ಕೆ ಎಲ್‌ಇಡಿ ವ್ಯವಸ್ಥೆಯನ್ನು ಅಳವಡಿಸಲಾಗುತ್ತಿದೆ.

ಕೋಟಿಜಪಯಜ್ಞ: ಈಗಾಗಲೇ ಒಂದು ತಿಂಗಳಿಂದ ಹಗಲು ಭಜನೆ ಪ್ರಾರಂಭವಾಗಿದ್ದು ಫೆಬ್ರವರಿ4ರವರೆಗೆ ಮುಂದುವರಿಯುತ್ತದೆ. ಕೋಟಿಜಪಯಜ್ಞದ ಸಂದರ್ಭದಲ್ಲಿ ಹತ್ತಾರು ಸಾವಿರ ಭಕ್ತರಿಗೆ ಜಪಯಜ್ಞದ ದೀಕ್ಷೆ ನೀಡಿದ್ದು, ಅವರೆಲ್ಲರೂ ಜಪದಲ್ಲಿ ತೊಡಗಿಕೊಂಡಿದ್ದಾರೆ. ದಿನಾಂಕ 22.01.2020 ರಂದು ದೀಕ್ಷೆ ನೀಡುವ ಕೊನೆಯ ದಿನವಾಗಿದ್ದು ಭಕ್ತಾದಿಗಳು ಇದನ್ನು ಗಮನಿಸಬೇಕಾಗಿ ಕೋರಲಾಗಿದೆ. ಈಗಾಗಲೇ ಕೋಟಿ ಸಂಖ್ಯೆಯ ಜಪನಡೆದಿದ್ದು ಇನ್ನೂ ಮುಂದುವರಿಯುತ್ತಿದೆ. ಕೋಟಿಜಪಯಜ್ಞದ ಅಂಗವಾಗಿ ದಿನಾಂಕ 02.02.2020 ರಂದು ಜಪಸಮರ್ಪಣೆ, ಪ್ರಸಾದ ವಿತರಣೆ ನಡೆಯಲಿದೆ ಎಂದು ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಆಡಳಿತ ಸಮಿತಿ ಅಧ್ಯಕ್ಷ ಹಾಗೂ ಅನುವಂಶಿಕ ಮೊಕ್ತೇಸರರಾದ ಸನತ್ ಕುಮಾರ್ ಶೆಟ್ಟಿ ಕೊಡೆತ್ತೂರು, ಅನುವಂಶಿಕ ಮೊಕ್ತೇಸರರು ಹಾಗೂ ಅನುವಂಶಿಕ ಅರ್ಚಕ ವಾಸುದೇವ ಆಸ್ರಣ್ಣ, ಸಮಿತಿ ಪದಾಧಿಕಾರಿಗಳಾದ ಡಾ|| ಆಶಾಜ್ಯೋತಿ ರೈ, ಶ್ರೀಮತಿ ಕಸ್ತೂರಿ ಪಂಜ, ಕೊಡೆತ್ತೂರುಗುತ್ತು ಸುಧೀರ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

Comments are closed.