ಕರಾವಳಿ

ಪೊಲೀಸ್ ವಿಚಾರಣೆ ಮುಗಿಸಿ ತಡರಾತ್ರಿ ಮನೆಗೆ ಬಂದಿದ್ದ ಯುವಕ ಬೆಳಿಗ್ಗೆ ಸಿಕ್ಕಿದ್ದು ಹೆಣವಾಗಿ

Pinterest LinkedIn Tumblr

ಕುಂದಾಪುರ: ಯುವತಿಯೊಬ್ಬಳು ನೀಡಿದ ದೂರು ಅರ್ಜಿಯ ಹಿನ್ನೆಲೆ ವಿಚಾರಣೆಗೆಂದು ಪೊಲೀಸ್ ಠಾಣೆಗೆ ಯುವಕನೋರ್ವನನ್ನು ಠಾಣೆಗೆ ಕರೆದೊಯ್ದಿದ್ದು ಆತ ತಡರಾತ್ರಿ ಮನೆಗೆ ಬಂದಿದ್ದು ಮುಂಜಾನೆ ಆತನ ಶವವು ಛಿದ್ರಗೊಂಡ ಸ್ಥಿತಿಯಲ್ಲಿ ರೈಲು ಹಳಿ ಮೇಲೆ ಪತ್ತೆಯಾದ ಘಟನೆ ನಡೆದಿದೆ. ಬೈಂದೂರು ಪೊಲೀಸ್ ಠಾಣೆ ವ್ಯಾಪ್ತಿಯ ನಾಗೂರು ಕಿರಿಮಂಜೇಶ್ವರ ಕಳ್ಳಂಗಡಿ ಎಂಬಲ್ಲಿ ಯುವಕನ ಶವ ಪತ್ತೆಯಾಗಿದ್ದು ಪೊಲೀಸರ ವಿರುದ್ಧ ಯುವಕನ ಕುಟುಂಬಿಕರು ಆಕ್ರೋಷ ವ್ಯಕ್ತಪಡಿಸಿ ಮಂಗಳವಾರ ಮಧ್ಯಾಹ್ನ ೨ ಗಂಟೆಯವರೆಗೂ ಶವವನ್ನು ರೈಲು ಹಳಿ ಪಕ್ಕವೇ ಇಟ್ಟು ನ್ಯಾಯಕ್ಕಾಗಿ ಪ್ರತಿಭಟಿಸಿದರು.

( ಮೃತ ರಾಮ ಪೂಜಾರಿ)

ಕಿರಿಮಂಜೇಶ್ವರ ಶಾಲೆಬಾಗಿಲು ನಿವಾಸಿ ರಾಮ ಪೂಜಾರಿ (32) ಮೃತ ದುರ್ದೈವಿಯಾಗಿದ್ದು ಉಡುಪಿ ಹೆಚ್ಚುವರಿ ಎಸ್ಪಿ ಕುಮಾರಚಂದ್ರ ಅವರು ಸಮಗ್ರ ತನಿಖೆ ನಡೆಸಿ ಸೂಕ್ತ ನ್ಯಾಯ ಕೊಡಿಸುವ ಭರವಸೆಯನ್ನು ನೀಡಿದ ಬಳಿಕ ಶವವನ್ನು ಮರಣೋತ್ತರ ಪರೀಕ್ಢೆಗಾಗಿ ರವಾನಿಸಲಾಯಿತು.

 

ಯುವತಿ ವಿಚಾರದಲ್ಲಿ ತನಿಖೆ!
ಚಾಲಕ ವೃತ್ತಿ ಮಾಡಿಕೊಂಡಿದ್ದ ರಾಮ ಪೂಜಾರಿ ಆಟೋ ಹಾಗೂ ಓಮ್ನಿ ಚಾಲಕನಾಗಿದ್ದ. ಈತನ ಮೇಲೆ ಯುವತಿಯೊಬ್ಬಳು ತನಗೆ ಕಿರುಕುಳ ನೀಡುತ್ತಿದ್ದ ಬಗ್ಗೆ ದೂರು ನೀಡಿದ್ದಳು. ಆಕೆ ನೀಡಿದ ದೂರಿನ ಅನ್ವಯ ಗಂಗೊಳ್ಳಿ ಪೊಲೀಸರು ರಾಮನನ್ನು ವಿಚಾರಣೆಗಾಗಿ ಕರೆದೊಯ್ದಿದ್ದರು. ಬಳಿಕ ಅಲ್ಲಿಂದ ಕುಂದಾಪುರ ಎಎಸ್ಪಿ ಕಚೇರಿಗೆ ಕರೆದೊಯ್ದು ತಡರಾತ್ರಿಯವರೆಗೂ ವಿಚಾರಣೆ ನಡೆದಿತ್ತು. 9 ಗಂಟೆಗೆ ರಾಮನ ಸೋದರನಿಗೆ ಕರೆ ಮಾಡಿದ ಪೊಲೀಸರು ಬೈಂದೂರು ಪೊಲೀಸ್ ಠಾಣೆಗೆ ಬಂದು ಆತನನ್ನು ಕರೆದೊಯ್ಯಲು ತಿಳಿಸಿದ್ದರಂತೆ. ಅಂತೆಯೇ ಸೋದರ ಅಲ್ಲಿಗೆ ತೆರಳಿ ತಡರಾತ್ರಿ ಸುಮಾರು 11.30ಕ್ಕೆ ರಾಮನನ್ನು ಮನಗೆ ಕರೆದುಕೊಂಡು ಬಂದಿದ್ದರು ಎನ್ನಲಾಗಿದೆ. ಬೆಳಿಗ್ಗೆ ಮನೆಯಿಂದ ರಾಮ ಕಾಣೆಯಾಗಿದ್ದು ಸುಮಾರು 7.30ರ ಬಳಿಕ ಕಿರಿಮಂಜೇಶ್ವರದ ರೈಲು ಹಳಿ ಬಳಿ ಶವವೊಂದು ಪತ್ತೆಯಾಗಿದ್ದು ಸಮೀಪವೇ ರಾಮನ ಬೈಕ್ ಪತ್ತೆಯಾಗಿತ್ತು. ಇದರಿಂದ ರಾಮ ಅಲ್ಲಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ತಿಳಿದುಬಂದಿತ್ತು.

ಕುಟುಂಬಿಕರ ಆಕ್ರೋಷ…ಪೊಲೀಸರ ಮೇಲೆ ಆರೋಪ…
ಬೈಂದೂರಿನಲ್ಲಿ ದಾಖಲಾದ ಪ್ರಕರಣಕ್ಕೆ ಗಂಗೊಳ್ಳಿ ಪೊಲೀಸರು ಮಫ್ತಿಯಲ್ಲಿ ಬಂದು ರಾಮನನ್ನು ಕರೆದೊಯ್ದಿದ್ದು ಮಾತ್ರವಲ್ಲದೇ ಒಂದಷ್ಟು ಪೊಲೀಸರು ರಾಮನ ಮೇಲೆ ಗಂಭೀರ ಹಲ್ಲೆ ನಡೆಸಿದ್ದಾರೆ. ಅವರ ದೌರ್ಜನ್ಯದಿಂದ ನೊಂದು ರಾಮ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕುಟುಂಬಿಕರು ಆರೋಪಿಸಿದ್ದಾರೆ. ರಾಮ ಪೂಜಾರಿಯ ಚೈನ್, ಮೊಬೈಲ್ ಕಿತ್ತಿಟ್ಟುಕೊಳ್ಳಲಾಗಿದೆ ಅಲ್ಲದೇ ಅಣ್ಣನ ಬಗ್ಗೆ ವಿಚಾರಿಸಿದ್ದಕ್ಕೆ ‘ನಿನ್ನ ಅಣ್ಣನ ಹೆಣ ಮನೆಗೆ ಕಳಿಸುತ್ತೇವೆ’ ಎಂದು ಪೊಲೀಸ್ ಸಿಬ್ಬಂದಿಯೋರ್ವರು ತನಗೆ ಅವಾಜ್ ಹಾಕಿದ್ದಾರೆಂದು ಸೋದರ ಸ್ಥಳಕ್ಕಾಗಮಿಸಿದ ಎಡಿಶನಲ್ ಎಸ್ಪಿ ಎದುರು ಆರೋಪಿಸಿದ್ದಾರೆ. ಸೂಕ್ತ ನ್ಯಾಯಕ್ಕೆ ಬಿಲ್ಲವ ಮುಖಂಡರು ಕೂಡ ಆಗ್ರಹ ಮಾಡಿದರು.

ಶವವಿಟ್ಟು ಪ್ರತಿಭಟನೆ..ನ್ಯಾಯಕ್ಕೆ ಆಗ್ರಹ…
ಕಾನೂನು ಕೈಗೆತ್ತಿಕೊಂಡ ಪೊಲೀಸರ ವಿರುದ್ಧ ಕ್ರಮಕೈಗೊಳ್ಳಬೇಕು. ರಾಮ ಪೂಜಾರಿ ವಿರುದ್ಧ ದೂರು ನೀಡಿದವರ ಪೂರ್ವಾಪರ ವಿಚಾರಣೆ ನಡೆಸಬೇಕು. ರಾಮ ಪೂಜಾರಿಯದ್ದು ಆತ್ಮಹತ್ಯೆಯೇ ಆಗಿದ್ದರೆ ಅದಕ್ಕೆ ಪ್ರಚೋದನೆ‌ ನೀಡಿದವರ ಮೇಲೆ ಕ್ರಮವಾಗಬೇಕು. ತಮಗೆ ಸೂಕ್ತ ನ್ಯಾಯ ಒದಗಿಸುವವರೆಗೂ ಶವವನ್ನು ತೆಗೆಯುವುದಿಲ್ಲ ಎಂದು ಕುಟುಂಬಿಕರು ಒಅಟ್ಟು ಹಿಡಿದರು. ಇಲಾಖಾ ತನಿಖೆ ನಡೆಸಿ ಸೂಕ್ತ ಕ್ರಮಕೈಗೊಳ್ಳುವ ಭರವಸೆಯನ್ನು ಹೆಚ್ಚುವರಿ ಎಸ್ಪಿ ಕುಮಾರಚಂದ್ರ ಅವರು ನೀಡಿದ ಬಳಿಕ ಮಧ್ಯಾಹ್ನ 2.30ರ ಸುಮಾರಿಗೆ ಶವವನ್ನು ಆಂಬುಲೆನ್ಸ್ ಮೂಲಕ ಘಟನಾ ಸ್ಥಳದಿಂದ ಆಸ್ಪತ್ರೆಗೆ ರವಾನಿಸಲಾಯಿತು.

ಪೊಲೀಸರು ಹೇಳೋದೇನು?
ರಾಮ ಪೂಜಾರಿ ಎಂಬಾತ ತನ್ನ ಖಾಸಗಿ ವಿಡಿಯೋ ಇಟ್ಟುಕೊಂಡು ಅದನ್ನು ತೋರಿಸಿ ಬೆದರಿಸುತ್ತಿದ್ದಾನೆ ಎಂದು ಯುವತಿಯೊಬ್ಬಳು ದೂರು ನೀಡಿದ್ದಳು. ಆಕೆ ನೀಡಿದ ದೂರಿನ ಹಿನ್ನೆಲೆ ರಾಮ ಪೂಜಾರಿಯನ್ನು ಕರೆಯಿಸಿ ವಿಚಾರಣೆ ನಡೆಸಿದ್ದೇವೆ. ಆತನ ಬಳಿಯಿದ್ದ ಮೊಬೈಲ್ ಫೋನ್ ಹಾಗೂ ಮೆಮೊರಿ ಕಾರ್ಡಿನಲ್ಲಿ ಆಕೆ ಹೇಳಿದಂತೆ ವಿಡಿಯೋ ಲಭಿಸಿತ್ತು. ಯುವತಿ ಪ್ರಕರಣ ದಾಖಲು ಮಾಡಿದಲ್ಲಿ ತನಗೆ ಸಮಸ್ಯೆಯಾಗುವ ಬಗ್ಗೆ ತಿಳಿಸಿದ್ದರಿಂದ ರಾಮ ಪೂಜಾರಿ ಮೇಲೆ ಕೇವಲ ಪೆಟ್ಟಿ ಕೇಸು ದಾಖಲಿಸಿದ್ದು ಮೆಮೊರಿ ಕಾರ್ಡ್ ವಶಪಡಿಸಿಕೊಂಡು ಕಾನೂನು ಪ್ರಕಾರವಾಗಿ ಹೇಳಿಕೆ ಪಡೆದು ಆತನ ಸೋದರ ಜೊತೆ ಮನೆಗೆ ಕಳಿಸಲಾಗಿತ್ತು. ಮಂಗಳವಾರ ಮುಂಜಾನೆ ರಾಮ ಪೂಜಾರಿ ಶವ ರೈಲು ಹಳಿಯಲ್ಲಿ ಪತ್ತೆಯಾಗಿದ್ದು ಈ ಬಗ್ಗೆ ಮರಣೋತ್ತರ ಪರೀಕ್ಷೆ ನಡೆಸಿ ಸೂಕ್ತ ಕ್ರಮಕೈಗೊಳ್ಳಲಾಗುತ್ತದೆ. ಅಲ್ಲದೇ ಈ ಪ್ರಕರಣದಲ್ಲಿ ಯಾವುದೇ ಸಂಸವಿದ್ದರೆ ದೂರು ನೀಡಿದರೂ ಅಂತವರ ವಿರುದ್ಧ ಕಾನೂನು ಪ್ರಕಾರ ಕ್ರಮಕೈಗೊಳ್ಳುತ್ತೇವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಸ್ಥಳದಲ್ಲಿ ಬಂದೋಬಸ್ತ್..
ನೂರಾರು ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದ ಹಿನ್ನೆಲೆ ಸ್ಥಳದಲ್ಲಿ ಬಿಗು ಬಂದೋಬಸ್ತ್ ಏರ್ಪಡಿಸಲಾಗಿತ್ತು. ಕುಂದಾಪುರ ಎಎಸ್ಪಿ ಹರಿರಾಂ ಶಂಕರ್, ಕುಂದಾಪುರ ಸಿಪಿಐ ಗೋಪಿಕ್ರಷ್ಣ, ಬೈಂದೂರು ಸಿಪಿಐ ಸುರೇಶ್ ನಾಯ್ಕ್, ವಿವಿಧ ಠಾಣೆಯ ಪಿಎಸ್ಐಗಳು, ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು. ಡಿಎಆರ್ ವಾಹನ ಸ್ಥಳದಲ್ಲಿ ನಿಯೋಜಿಸಲಾಗಿತ್ತು.

(ವರದಿ- ಯೋಗೀಶ್ ಕುಂಭಾಸಿ)

Comments are closed.