ಕರಾವಳಿ

ಪಣಂಬೂರು ಬೀಚ್ : 3 ದಿನಗಳ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಚಾಲನೆ

Pinterest LinkedIn Tumblr

ಮಂಗಳೂರು, ಜನವರಿ.18: ಕರಾವಳಿ ಉತ್ಸವದ ಪ್ರಯುಕ್ತ ಅಂತಾರಾಷ್ಟ್ರೀಯ ಗಾಳಿಪಟ ಹಾರಾಟಗಾರರಿಂದ ಪಣಂಬೂರು ಬೀಚಿನಲ್ಲಿ ಮೂರು ದಿನಗಳ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವವನ್ನು ಹಮ್ಮಿಕೊಳ್ಳಲಾಗಿದ್ದು, ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ಶುಕ್ರವಾರ ಸಂಜೆ ಚಾಲನೆ ನೀಡಿದರು.

ಈ ಸಂದರ್ಭ ಮೂಡಾ ಆಯುಕ್ತ ಶ್ರೀಕಾಂತ್, ಕಂದಾಯ ಉಪ ಆಯುಕ್ತೆ ಗಾಯತ್ರಿ ನಾಯಕ್, ಆರ್‌ಎಫ್‌ಒ ಶ್ರೀಧರ್, ಜಿಲ್ಲಾ ವಾರ್ತಾಧಿಕಾರಿ ಖಾದರ್ ಶಾ ಮತ್ತಿತರರು ಉಪಸ್ಥಿತರಿದ್ದರು.

ಕಣ್ಮನ ಸೆಳೆದ ವಿವಿಧ ಅಕೃತಿಯ ಗಾಳಿಪಟಗಳು :

ಕುದುರೆ, ಮೊಸಳೆ, ವಿವಿಧ ಬಗೆಯ ಸಮುದ್ರ ಜೀವಿಗಳು, ಕೆಲವು ಹಣ್ಣು-ಹಂಪಲು ಮಾದರಿಗಳು ಸಮುದ್ರ ತೀರದ ನೀಲಿಯ ಆಗಸದಲ್ಲಿ ಸ್ವಚ್ಛಂದವಾಗಿ ಹಾರಾಡುತ್ತ ಹಕ್ಕಿಗಳಾದವು. ಹಾವಿನಾಕಾರದಲ್ಲಿ ಸುಯ್ಯನೆ ಗಾಳಿಯಲ್ಲಿ ಚುರುಕಾಗಿ ಓಡಾಡುವ ಭಾರೀ ಉದ್ದದ ಹಾವಿನಾಕಾರದ ಗಾಳಿಪಟವಂತೂ ನೋಡುಗರನ್ನು ಮೈನವಿರೇಳಿಸುತ್ತಾ ಸೆಳೆಯುತ್ತಿತ್ತು. ಚಿತ್ರ ವಿಚಿತ್ರ ಬಗೆಯ ಗಾಳಿಪಟಗಳನ್ನು ಹಾರಿಸಿ ಕರಾವಳಿಯ ಜನರ ಮೆಚ್ಚುಗೆಗೆ ಪಾತ್ರರಾದರು.

ಮೂರು ದಿನಗಳ ಕಾಲ ಪಣಂಬೂರಿನಲ್ಲಿ ನೋಡುಗರ ಕಣ್ಮನ ಸೆಳೆಯಲಿವೆ. ಅಮೆರಿಕ, ಥೈಲ್ಯಾಂಡ್, ನೆದರ್‌ಲ್ಯಾಂಡ್ ಚೀನಾ ಸೇರಿದಂತೆ 10ಕ್ಕೂ ಹೆಚ್ಚು ದೇಶಗಳಿಂದ ಗಾಳಿಪಟ ಹಾರಿಸುವವರು ಆಗಮಿಸಿದ್ದಾರೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾದ ಹಲವು ಗಾಳಿಪಟ ಹಾರಿಸುವವರು ಉತ್ಸವದಲ್ಲಿ ಪಾಲ್ಗೊಂಡು ತಾವು ತಂದ ಗಾಳಿಪಟಗಳ ಹಾರಾಟ ನಡೆಸಿದರು.

ಥೈಲ್ಯಾಂಡ್ ಗಣಪತಿ ಗಾಳಿಪಟವೂ ವಿಶೇಷ ಆಕರ್ಷಣೆಗೆ ಪಾತ್ರವಾಯಿತು. ದೇಶ ವಿದೇಶಗಳ ಒಟ್ಟು 20 ತಂಡಗಳು ಭಾಗವಹಿ ಸಿವೆ. ಪ್ರತಿ ತಂಡಗಳೂ 10-15 ಗಾಳಿಪಟಗಳನ್ನು ತಂದಿದ್ದು, ಇನ್ನೆರಡು ದಿನಗಳ ಕಾಲ ಪಣಂಬಯುರು ಕಡಲತೀರದಲ್ಲಿ ನೂರಾರು ಗಾಳಿಪಟಗಳು ಜನರ ಮನಸ್ಸನ್ನು ಸೂರೆಗೊಳಿಸಲಿವೆ.

Comments are closed.