ಕರಾವಳಿ

ಮಂಗಳೂರು ವಿಮಾನ ನಿಲ್ದಾಣದಲ್ಲಿ 2 ಕೋ.ರೂ. ಮೌಲ್ಯದ ಚಿನ್ನ ವಶ: ಒಂದು ದಶಕದ ಅವಧಿಯಲ್ಲಿ ಅತೀಹೆಚ್ಚು ಮೌಲ್ಯದ ಚಿನ್ನ ಪತ್ತೆ

Pinterest LinkedIn Tumblr

ಮಂಗಳೂರು: ವಿದೇಶದಿಂದ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 5 ಕೆಜಿ ಬಂಗಾರವನ್ನು ಮಂಗಳೂರು ವಿಮಾನ ನಿಲ್ದಾಣದ ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್‌ಐ) ಅಧಿಕಾರಿಗಳು ಸೋಮವಾರ ಪತ್ತೆ ಹಚ್ಚಿ ವಶಪಡಿಸಿಕೊಂಡು ಕಂಪನಿಯೊಂದರ ನಿರ್ದೇಶಕ ಸಹಿತ ಇಬ್ಬರನ್ನು ಬಂಧಿಸಿದ್ದಾರೆ.

ಉಡುಪಿಯ ಮೆಸರ್ಸ್‌ ಸ್ವರೂಪ್‌ ಮಿನರಲ್‌ ಪ್ರೈ.ಲಿ. ಎಂಬ ಕಂಪೆನಿಯ ಮನೋಹರ್‌ ಕುಮಾರ್‌ ಪೂಜಾರಿ ಮತ್ತು ಮಂಗಳೂರಿನ ಅಶೋಕನಗರ ನಿವಾಸಿ ಲೋಹಿತ್‌ ಶ್ರೀಯಾನ್‌ ಬಂಧಿತ ಆರೋಪಿಗಳು.

ಬಂಧಿತ ಆರೋಪಿಗಳು 2 ಕೋ.ರೂ. ಮೌಲ್ಯದ ಚಿನ್ನವನ್ನು ಮಂಗಳೂರು ವಿಮಾನ ನಿಲ್ದಾಣದ ಏರ್‌ ಕಾರ್ಗೊ ಕಾಂಪ್ಲೆಕ್ಸ್‌ನಲ್ಲಿ ಯಂತ್ರೋಪಕರಣ ಹೆಸರಿನಲ್ಲಿ ಅಕ್ರಮವಾಗಿ ಕಳ್ಳ ಸಾಗಣಿಕೆ ಮಾಡುತ್ತಿದ್ದರೆಂದು ಆರೋಪಿಸಲಾಗಿದೆ.

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಏರ್ ಕಾರ್ಗೋ ಕಾಂಪ್ಲೆಕ್ಸ್‌ನಲ್ಲಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಮನೋಹರ್ ಕುಮಾರ್‌ನನ್ನು ಬೆಂಗಳೂರಿನಲ್ಲಿ ಬಂಧಿಸಿದರೆ, ಲೋಹಿತ್‌ನನ್ನು ಮಂಗಳೂರಿನಲ್ಲಿ ಬಂಧಿಸಲಾಗಿದೆ. ಬೆಂಗಳೂರು ಮತ್ತು ಮಂಗಳೂರು ಡಿಆರ್‌ಐ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಡಿಆರ್‌ಐ ಉಪ ನಿರ್ದೇಶಕ ಶ್ರೇಯಸ್ ಕೆ.ಎಂ. ತಿಳಿಸಿದ್ದಾರೆ.

ಆರೋಪಿಗಳು ಗಣಿ ಉದ್ಯಮದಲ್ಲಿ ಬಳಸುವ ಲೋಹದ ಕನ್ವೆಯರ್ ಡ್ರೈವ್ ಚೈನ್‌ನ ಒಳಭಾಗದಲ್ಲಿರಿಸಿ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದರು ಎನ್ನಲಾಗಿದೆ. ಸ್ವರೂಪ್ ಮಿನರಲ್ ಕಂಪನಿ ಮೈನಿಂಗ್ ಕನ್ವೆಯರ್ ಡ್ರೈವ್ ಚೈನ್ ಆಮದು ಮಾಡಿಕೊಳ್ಳುತ್ತಿದ್ದು, ಸರಕು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿತ್ತು. ಅದರೊಳಗೆ ಚಿನ್ನ ಅಡಗಿಸಿಟ್ಟು ಸಾಗಾಟ ಮಾಡುತ್ತಿರುವ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಲಭಿಸಿತ್ತು. ಈ ಮಾಹಿತಿ ಆಧರಿಸಿ ಸರಕನ್ನು ಸ್ಕ್ಯಾನ್ ಮಾಡಲಾಗಿದ್ದು, ತಾಂತ್ರಿಕ ಸಿಬ್ಬಂದಿ ಮತ್ತು ಲೇಥ್ ಬಳಸಿ ಅದನ್ನು ತೆರೆಯಲಾಯಿತು.

ಬಜಪೆಯ ಸ್ಥಳೀಯ ಯಂತ್ರಗಳು ಹಾಗೂ ಲೇಥ್‌ ಮೆಷಿನ್‌ಗಳನ್ನು ಬಳಸಿ ಮೈನಿಂಗ್‌ ಕನ್ವೇಯರ್‌ ಬೆಲ್ಟ್ನ ಒಳಭಾಗದಲ್ಲಿ ಐದು ವೃತ್ತಾಕಾರದ ಚಿನ್ನದ ತಟ್ಟೆಗಳನ್ನು ಅಡಗಿಸಿಡಲಾಗಿದ್ದ 24 ಕ್ಯಾರೆಟ್‌ ಗುಣಮಟ್ಟದ ಒಟ್ಟು 4.995 ಕೆ.ಜಿ. ಚಿನ್ನವನ್ನು ಹೊರ ತೆಗೆಯಲಾಯಿತು. ಅಧಿಕೃತ ಚಿನ್ನಾಭರಣ ವ್ಯಾಪಾರಿಗಳಿಂದ ಇದನ್ನು ಪರಿಶೀಲಿಸಿ ಚಿನ್ನವೆಂದು ಖಾತ್ರಿ ಪಡಿಸಲಾಯಿತು. ಮಂಗಳೂರು ವಿಮಾನ ನಿಲ್ದಾಣದಲ್ಲಿ ಒಂದು ದಶಕದ ಅವಧಿಯಲ್ಲಿ ವಶಪಡಿಸಿಕೊಳ್ಳಲಾದ ಅತೀಹೆಚ್ಚು ಮೌಲ್ಯದ ಅಕ್ರಮ ಚಿನ್ನ ಕಳ್ಳಸಾಗಣೆ ಪ್ರಕರಣ ಇದಾಗಿದೆ.

Comments are closed.