ಕರಾವಳಿ

ಪ್ರಧಾನಿಯಿಂದ ಸಾಂಕೇತಿಕವಾಗಿ ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆದ ಬೇಳೂರು ಮಹಿಳೆ

Pinterest LinkedIn Tumblr

ಉಡುಪಿ: ಕೇಂದ್ರ ಸರ್ಕಾರವು 2018-2019 ನೇ ಸಾಲಿನ ಆಯವ್ಯಯದಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್‍ನ ಸೌಲಭ್ಯವನ್ನು ಮೀನುಗಾರರಿಗೆ, ಮೀನು ಕೃಷಿಕರಿಗೆ ವಿಸ್ತರಿಸುವ ಬಗ್ಗೆ ಘೋಷಿಸಿರುತ್ತದೆ.  ಆರ್.ಬಿ.ಐ ಮಾರ್ಗಸೂಚಿಯಂತೆ ಸುಸ್ತಿದಾರರಲ್ಲದ ಮೀನುಗಾರರು, ಮೀನು ಕೃಷಿಕರು (ವೈಯುಕ್ತಿಕ, ಗುಂಪು, ಪಾಲುದಾರಿಕೆ, ಗುತ್ತಿಗೆ ಕೃಷಿ, ಸ್ವ-ಸಹಾಯ ಗುಂಪುಗಳು, ಜೆಎಲ್‍ಜಿ ಸಂಘಗಳು, ಮಹಿಳಾ ಗುಂಪುಗಳು) ಈ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ. ಕಿಸಾನ್ ಕ್ರೆಡಿಟ್ ಕಾರ್ಡ್‍ನ ಉದ್ದೇಶ ಮೀನುಗಾರಿಕಾ ಚಟುವಟಿಕೆಗಳಲ್ಲಿ ತೊಡಗಿರುವ ಮೀನುಗಾರರಿಗೆ ದುಡಿಯುವ ಬಂಡವಾಳ ಒದಗಿಸುವುದಾಗಿದೆ. ಪಂಜರ ಮೀನು ಕೃಷಿ, ಸಿಗಡಿ, ಕಲ್ಲ, ಪಚ್ಚಿಲೆ ಕೃಷಿ ಇತ್ಯಾದಿಗಳನ್ನು ಕೈಗೊಳ್ಳುತ್ತಿರುವ ಮೀನು ಕೃಷಿಕರು ಮತ್ತು ದೋಣಿ ಹೊಂದಿರುವ ಮೀನುಗಾರರು ಅವರ ಅವಶ್ಯಕತೆಗೆ ತಕ್ಕಂತೆ ಗರಿಷ್ಠ 380000 ರೂ. ವರೆಗೆ ಸಾಲವನ್ನು ಪಡೆದುಕೊಳ್ಳಬಹುದಾಗಿದೆ.

ಈ ಹಿನ್ನಲೆಯಲ್ಲಿ ಮೀನುಗಾರರ ಮೊದಲ ಕಿಸಾನ್ ಕ್ರೆಡಿಟ್ ಕಾರ್ಡ್‍ನ್ನು ಕುಂದಾಪುರ ತಾಲೂಕಿನ ಬೇಳೂರು ಗ್ರಾಮದ ಮಾಲತಿ, ಕೋಂ ರಾಘವೇಂದ್ರ ಇವರು ಸಾಂಕೇತಿಕವಾಗಿ ಜನವರಿ 2 ರಂದು ತುಮಕೂರಿನಲ್ಲಿ ನಡೆದ ಪಿಎಂ ಕಿಸಾನ್ ಸಮ್ಮಾನ್ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿಗಳಿಂದ ಪಡೆದಿರುತ್ತಾರೆ. ಇವರಿಗೆ 30000 ರೂ. ಸಾಲದ ಮಿತಿಯಾಗಿ ಶೇ.7 ಬಡ್ಡಿಯಲ್ಲಿ ಕಾರ್ಪೋರೇಷನ್ ಬ್ಯಾಂಕ್ ಕೋಟತಟ್ಟು ಶಾಖೆ ಮಂಜೂರು ಮಾಡಿರುತ್ತದೆ. ಈ ಸಮಾರಂಭದಲ್ಲಿ ಉತ್ತರ ಕನ್ನಡ ಜಿಲ್ಲೆಯ ಪಂಜರ ಕೃಷಿ ಫಲಾನುಭವಿಗೆ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ದೋಣಿ ಮಾಲಕರಿಗೆ ಕೂಡ ಪ್ರಧಾನ ಮಂತ್ರಿಗಳು ಸಾಂಕೇತಿಕವಾಗಿ ಕಿಸಾನ್ ಕ್ರೆಡಿಟ್ ಕಾರ್ಡ್‍ನ್ನು ವಿತರಿಸಿರುತ್ತಾರೆ.
ಉಡುಪಿ ಜಿಲ್ಲೆಯಲ್ಲಿ ಕೆಸಿಸಿ ನ ನೋಂದಣಿಯ ವಿಶೇಷ ಅಭಿಯಾನ ನಡೆಸಿದ್ದು, ಸುಮಾರು 10000 ದಷ್ಟು ಅರ್ಜಿಗಳನ್ನು ಇಲಾಖೆಯಿಂದ ಬ್ಯಾಂಕ್‍ಗಳಿಗೆ ಸಲ್ಲಿಸಲಾಗಿರುತ್ತದೆ. ಪ್ರಧಾನ ಮಂತ್ರಿಗಳ ಕಾರ್ಯಕ್ರಮದ ಪೂರ್ವಭಾವಿಯಾಗಿ ಇಡೀ ರಾಜ್ಯದಲ್ಲಿ ಮಂಜೂರಾದ 1140 ಕಾರ್ಡ್‍ಗಳಲ್ಲಿ ಅತೀ ಹೆಚ್ಚು 528 ಕಾರ್ಡ್‍ಗಳು ಉಡುಪಿ ಜಿಲ್ಲೆಯಿಂದ ಮಂಜೂರಾಗಿರುತ್ತವೆ ಎಂದು ಮೀನುಗಾರಿಕಾ ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.

Comments are closed.