ಕರಾವಳಿ

ಗೋಲಿಬಾರ್ ಪ್ರಕರಣ : ನಗರಕ್ಕೆ ಆಗಮಿಸಿದ ಸಿಐಡಿ ಪೊಲೀಸರ ತಂಡದಿಂದ ತನಿಖೆ ಆರಂಭ

Pinterest LinkedIn Tumblr

ಮಂಗಳೂರು, ಡಿಸೆಂಬರ್. 27: ಪೌರತ್ವ ಕಾಯ್ದೆ ತಿದ್ದುಪಡಿಸಿ ವಿರೋಧಿಸಿ ನಗರದಲ್ಲಿ ಡಿ.19ರಂದು ನಡೆದ ಪ್ರತಿಭಟನೆ ಹಾಗೂ ಹಿಂಸಾಚಾರ ಸಂದರ್ಭ ನಡೆದ ಗೋಲಿಬಾರ್ ಪ್ರಕರಣದ ತನಿಖೆಯನ್ನು ರಾಜ್ಯ ಸರಕಾರ ಸಿಐಡಿ ಮತ್ತು ಮ್ಯಾಜಿಸ್ಟ್ರೇಯಲ್‌ಗೆ ನೀಡಿರುವ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆ ನಡೆಸಲು ಸಿಐಡಿ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಷಹಾಪುರ್‌ವಾಡ್ ನೇತೃತ್ವದ ತಂಡ ಗುರುವಾರ ಮಂಗಳೂರಿಗೆ ಆಗಮಿಸಿದೆ.

ಪೌರತ್ವ ಕಾಯ್ದೆ ತಿದ್ದುಪಡಿಸಿ ವಿರೋಧಿಸಿ ನಡೆದ ಪ್ರತಿಭಟನೆ ವೇಳೆ ಗೋಲಿಬಾರ್‌ನಲ್ಲಿ ಇಬ್ಬರು ಮೃತಪಟ್ಟಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಪೊಲೀಸರು 12 ಮಂದಿಯನ್ನು ಬಂಧಿಸಿದ್ದು, 30ಕ್ಕೂ ಅಧಿಕ ಮಂದಿಯನ್ನು ವಿಚಾರಣೆ ನಡೆಸಿದ್ದಾರೆ.

ಹಿಂಸಾಚಾರ ನಡೆದ ನೆಲ್ಲಿಕಾಯಿ ರಸ್ತೆ, ಬಂದರು, ಬೀಬಿ ಅಲಾಬಿ ರಸ್ತೆ, ರಾವ್‌ ಆಂಡ್‌ ರಾವ್‌ ಸರ್ಕಲ್‌, ಅಜೀಜುದ್ದೀನ್‌ ರಸ್ತೆ ಸೇರಿದಂತೆ ಸುತ್ತಮುತ್ತ ಪ್ರದೇಶಗಳ ಸಿಸಿಟಿವಿ ಕ್ಯಾಮೆರಾಗಳ ಚಿತ್ರಣವನ್ನು ವಶಕ್ಕೆ ಪಡೆದಿದ್ದು ಸಾಮಾಜಿಕ ಜಾಲತಾಣದಲ್ಲಿದ್ದ ದಾಖಲೆಗಳನ್ನು ಸಂಗ್ರಹ ಮಾಡಿದ್ದಾರೆ.

ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಆರೋಪಿಗಳ ಪತ್ತೆಗೆ ಈಗಾಗಲೇ ಎಸಿಪಿ, ಇನ್‌ಸ್ಪೆಕ್ಟರ್‌ಗಳು, ಸಬ್‌ ಇನ್‌ಸ್ಪೆಕ್ಟರ್‌ಗಳ ನೇತೃತ್ವದಲ್ಲಿ ಒಟ್ಟು 10 ತಂಡಗಳನ್ನು ರಚಿಸಿ ಕಾರ್ಯನಿರ್ವಹಿಸುತ್ತಿದೆ. ಸಿಐಡಿ ತಂಡವು ಈ ತಂಡಗಳ ಸಹಕಾರ ಪಡೆದುಕೊಳ್ಳುವ ಸಾಧ್ಯತೆಯಿದೆ.

ನಗರದಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆಯ ಸಮಗ್ರ ತನಿಖೆ ರಾಜ್ಯ ಸರಕಾರ ಸಿಐಡಿ ಮತ್ತು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ನೇತೃತ್ವದಲ್ಲಿ ಮ್ಯಾಜಿಸ್ಟ್ರೇಟ್‌ಗೆ ವಹಿಸಿತ್ತು. ಮ್ಯಾಜಿಸ್ಟ್ರೇಟ್ ತಂಡ ಇಂದಿನಿಂದ ತನಿಖೆ ಆರಂಭಿಸಲಿದೆ.

ಸಿಐಡಿ ಎಸ್ಪಿ ರಾಹುಲ್‌ ಕುಮಾರ್‌ ತಂಡದಲ್ಲಿ ಒಟ್ಟು ಐವರು ಅಧಿಕಾರಿಗಳಿದ್ದು, ತನಿಖೆಯನ್ನು ಇಂದಿನಿಂದ ಆರಂಭ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ. ಈಗಾಗಲೇ ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ನಡೆದ ತನಿಖೆಯ ಎಲ್ಲಾ ದಾಖಲೆಗಳನ್ನು ಸಿಐಡಿ ತಂಡ ವಶಕ್ಕೆ ಪಡೆದುಕೊಂಡು ತನಿಖೆ ನಡೆಸಲಿದೆ ಎಂದು ತಿಳಿದು ಬಂದಿದೆ.

Comments are closed.