ಕರಾವಳಿ

ಕೆ.ಪ್ರಕಾಶ್‌ ಶೆಟ್ಟಿ ಅವರ ಸಾಧನೆ ಅನನ್ಯ, ಅವರು ಸಮಾಜಕ್ಕೆ ನೀಡಿದ ಕೊಡುಗೆ ಅವಿಸ್ಮರಣೀಯ ; ಮುಖ್ಯಮಂತ್ರಿ ಬಿಎಸ್‌ವೈ

Pinterest LinkedIn Tumblr

ಮಂಗಳೂರು, ಡಿಸೆಂಬರ್.26: ಎಂಆರ್‌ಜಿ ಗ್ರೂಪ್‌ನ ಅಧ್ಯಕ್ಷ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಕೊರಂಗ್ರಪಾಡಿ .ಪ್ರಕಾಶ್ ಶೆಟ್ಟಿಯವರಿಗೆ 60 ವರ್ಷ ತುಂಬಿದ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳಿಂದ ಬಂಗ್ರ ಕೂಳೂರಿನ ಗೋಲ್ಡ್‌ ಫಿಂಚ್‌ ಮೈದಾನದಲ್ಲಿ ಬುಧವಾರ ಆಯೋಜಿಸಲಾದ “ಪ್ರಕಾಶಾಭಿನಂದನ-60ರ ಸಂಭ್ರಮ’ ಕಾರ್ಯಕ್ರಮವನ್ನು ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಮುಖ್ಯಮಂತ್ರಿಗಳು ಸಮಾಜದ ಋಣವನ್ನು ನೆನಪಿಟ್ಟು ಸಮಾಜಕ್ಕೆ ಕೊಡುಗೆ ನೀಡುತ್ತಿರುವ ಉದ್ಯಮಿ ಪ್ರಕಾಶ್ ಶೆಟ್ಟಿ, ಪರಿಶ್ರಮದಿಂದ ಸಾಮಾನ್ಯ ಹಂತದಿಂದ ಎತ್ತರಕ್ಕೆ ಏರಿದ ಸಾಧಕ. ನಿರಂತರ ಪರಿಶ್ರಮ ಮತ್ತು ದೂರದೃಷ್ಟಿಯಿಂದ ಉದ್ಯಮ ಕ್ಷೇತ್ರದಲ್ಲಿ ಯಶಸ್ವೀ ನಾಯಕನಾಗಿ ಬೆಳೆದ ಕೆ. ಪ್ರಕಾಶ್‌ ಶೆಟ್ಟಿ ಅವರು ಸಮಾಜಕ್ಕೆ ನೀಡಿದ ಕೊಡುಗೆ ಅವಿಸ್ಮರಣೀಯ. ಅವರ ಅನನ್ಯ ಸಾಧನೆ ಮತ್ತು ವ್ಯಕ್ತಿತ್ವ ಮಾದರಿ ಎಂದು ಹೇಳಿದರು.

ನಿಟ್ಟೆ ವಿ.ವಿ. ಕುಲಾಧಿಪತಿ ಎನ್‌. ವಿನಯ ಹೆಗ್ಡೆ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪಮುಖ್ಯಮಂತ್ರಿ ಡಾ| ಸಿ.ಎನ್‌. ಅಶ್ವತ್ಥ ನಾರಾಯಣ, ಗೃಹಸಚಿವ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್‌, ಸಚಿವರಾದ ಸಿ.ಟಿ. ರವಿ, ಕೋಟ ಶ್ರೀನಿವಾಸ ಪೂಜಾರಿ, ಸಂಸದೆ ಶೋಭಾ ಕರಂದ್ಲಾಜೆ, ನಟರಾದ ಕ್ರೇಜಿಸ್ಟಾರ್ ವಿ. ರವಿಚಂದ್ರನ್‌, ರಾಕಿಂಗ್ ಸ್ಟಾರ್ ಯಶ್‌, ನಟಿಯರಾದ ಹರಿಪ್ರಿಯಾ, ಕಾವ್ಯಾ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು.

ಶಾಸಕರಾದ ಸುನಿಲ್‌ ಕುಮಾರ್‌, ಹಾಲಾಡಿ ಶ್ರೀನಿವಾಸ ಶೆಟ್ಟಿ, ಡಾ| ವೈ. ಭರತ್‌ ಶೆಟ್ಟಿ, ವೇದವ್ಯಾಸ ಕಾಮತ್‌, ಸಂಜೀವ ಮಠಂದೂರು, ರಾಜೇಶ್‌ ನ್ಯಾಕ್‌, ಹರೀಶ್‌ ಪೂಂಜ, ಸುಕುಮಾರ ಶೆಟ್ಟಿ, ಗಣ್ಯರಾದ ಅಮರನಾಥ ಶೆಟ್ಟಿ, ಪ್ರಮೋದ್‌ ಮಧ್ವರಾಜ್‌, ಅಭಯಚಂದ್ರ, ಅಜಿತ್‌ ಕುಮಾರ್‌ ರೈ ಮಾಲಾಡಿ, ಐಕಳ ಹರೀಶ್‌ ಶೆಟ್ಟಿ, ಎ. ಸದಾನಂದ ಶೆಟ್ಟಿ, ಎ.ಜೆ. ಶೆಟ್ಟಿ, ಡಾ| ಮೋಹನ ಆಳ್ವ, ಸದಾಶಿವ ಭಂಡಾರಿ ಸಕಲೇಶಪುರ, ಧರ್ಮಪಾಲ ದೇವಾಡಿಗ, ಸುರೇಶ್‌ ಭಂಡಾರಿ ಕಡಂದಲೆ ಉಪಸ್ಥಿತರಿದ್ದರು.

ಪ್ರಕಾಶಾಭಿನಂದನ ಸಮಿತಿ ಅಧ್ಯಕ್ಷ ಸುರೇಶ್‌ ಶೆಟ್ಟಿ ಗುರ್ಮೆ ಸ್ವಾಗತಿಸಿದರು. ಈ ಕಾರ್ಯಕ್ರಮದ ಪೂರ್ವ ಭಾವಿಯಾಗಿ 100ಕ್ಕೂ ಮಿಕ್ಕಿ ಅಶಕ್ತರಿಗೆ ಮತ್ತು 66 ವಿದ್ಯಾರ್ಥಿಗಳಿಗೆ ಸುಮಾರು ಒಂದು ಕೋಟಿ ರೂಗಳಿಗೆ ಅಧಿಕ ಮೊತ್ತದ ಸಹಾಯ ಧನವನ್ನು ಡಿ.19ರಂದು ಬಂಗ್ರ ಕೂಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿತರಿಸಲಾಗಿದೆ. 18 ಜನ ವಿವಿಧ ಕ್ಷೇತ್ರದ ಸಾಧಕರಿಗೆ ಇಂದು ಸನ್ಮಾನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈಗಾಗಲೇ ಪ್ರಕೃತಿ ವಿಕೋಪ ಪರಿಹಾರ ನಿದಿಗೆ ಸರಕಾರಕ್ಕೆ ರೂ.1 ಕೋಟಿ ದೇಣಿಗೆಯನ್ನು ಪ್ರಕಾಶ್ ಶೆಟ್ಟಿಯವರು ನೀಡಿರುತ್ತಾರೆ. ಮಾತ್ರವಲ್ಲದೇ ಅವರಿಗೆ ರಾಜ್ಯ ಪ್ರಶಸ್ತಿ ನೀಡುವ ಸಂದರ್ಭ ರಾಜ್ಯ ಸರಕಾರ ನೀಡಿದ ರೂ. ಒಂದು ಲಕ್ಷಕ್ಕೆ ತಮ್ಮ ವೈಯಕ್ತಿಕ ನೆಲೆಯಿಂದ ರೂ. 25 ಲಕ್ಷವನ್ನು ಸೇರಿಸಿ ಒಟ್ಟು 26 ಲಕ್ಷ ರೂಪಾಯಿಯನ್ನು ಬೆಳ್ತಂಗಡಿಯ ನೆರೆ ಪರಿಹಾರಕ್ಕೆ ದೇಣಿಗೆಯಾಗಿ ನೀಡಿದ್ದಾರೆ ಎಂದು ಸುರೇಶ್‌ ಶೆಟ್ಟಿ ಗುರ್ಮೆ ತಿಳಿಸಿದರು.

ಸಮಾರಂಭದಲ್ಲಿ ಪ್ರಕಾಶಾಭಿನಂದನ ಸಮಿತಿ ಪರವಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಗಣ್ಯರು ಸಾಧಕ, ಉದ್ಯಮಿ ಪ್ರಕಾಶ್ ಶೆಟ್ಟಿ -ಪತ್ನಿ ಆಶಾ ಶೆಟ್ಟಿ ದಂಪತಿಗಳನ್ನು ಸನ್ಮಾನಿಸಿದರು. ಪ್ರಕಾಶ್‌ ಶೆಟ್ಟಿ ಅವರ ಪುತ್ರ ಗೌರವ್‌ ಶೆಟ್ಟಿ ಮತ್ತು ಸೊಸೆ ಅನುಷ್ಕಾ ಶೆಟ್ಟಿ ಉಪಸ್ಥಿತರಿದ್ದರು.

ಸಮ್ಮಾನಕ್ಕೆ ಉತ್ತರಿಸಿ ಮಾತನಾಡಿದ ಪ್ರಕಾಶ್‌ ಶೆಟ್ಟಿ, ಪಕ್ಷಾತೀತ ಮತ್ತು ಜಾತ್ಯತೀತವಾಗಿ ಕಾರ್ಯಕ್ರಮ ನಡೆಯಬೇಕು ಎಂಬುದು ನನ್ನ ನಿರೀಕ್ಷೆಯಾಗಿದ್ದು, ಅದು ಈಡೇರಿದೆ. ಬಡತನದಿಂದ ಬಂದ ನನಗೆ ತಂದೆ, ತಾಯಿ ಮತ್ತು ನನ್ನ ಮನೆತನ ನೀಡಿದ ಮಾರ್ಗದರ್ಶನದಿಂದ ಸಾಧನೆ ಮಾಡಲು ಸಾಧ್ಯವಾಗಿದೆ. ಬದುಕು ಸಾರ್ಥಕವಾಗಿದೆ ಎಂದರು. ದೇಶ-ವಿದೇಶಗಳ ವಿವಿಧ ಸಮುದಾಯಗಳ ಸಾವಿರಾರು ಜನರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಆಕರ್ಷಕ ವೇದಿಕೆಯಲ್ಲಿ ನಡೆದ ವಿವಿಧ ಕಾರ್ಯಕ್ರಮಗಳು ಗಮನಸೆಳೆದವು.

ಕಾರ್ಯಕ್ರಮದಲ್ಲಿ ಪ್ರಕಾಶ್‌ ಶೆಟ್ಟಿ ಅವರ ಬಗ್ಗೆ ಪ್ರತಾಪ್‌ ಶೆಟ್ಟಿ ಅವರು ಬರೆದ ಅಭಿನಂದನ ಗ್ರಂಥವ (ಹೊಂಬೆಳಕನ್ನು ಪುಸ್ತಕ) ವನ್ನು ಮುಖ್ಯ ಮಂತ್ರಿ ಬಿ.ಎಸ್ ಯಡಿಯೂರಪ್ಪ ಬಿಡುಗಡೆಗೊಳಿಸಿದರು.

ಡಾ.ಅಮೃತ ಸೋಮೇಶ್ವರ, ಡಾ.ಬಿ.ಎಂ.ಹೆಗ್ಡೆ, ಡಾ.ಚಂದ್ರ ಶೇಖರ ಶೆಟ್ಟಿ, ಡಾ.ಸುನಿತಾ ಶೆಟ್ಟಿ,ಅಪ್ಪಣ್ಣ ಹೆಗ್ಡೆ, ಜಯ ಸುವರ್ಣ, ಆರ್.ಎನ್.ಶೆಟ್ಟಿ, ಜಗನ್ನಾಥ ಶೆಟ್ಟಿ, ಎಂ.ಎನ್.ರಾಜೇಂದ್ರ ಕುಮಾರ್, ಎಲ್.ಜಿ.ಸೋನ್ಸ್,ಶಿಮಂತೂರು ನಾರಾಯಣ ಶೆಟ್ಟಿ, ಗೋವಿಂದ ಭಟ್ ಸೂರಿಕು ಮೇರು,ಬನ್ನಂಜೆ ಸಂಜೀವ ಸುವರ್ಣ, ಕೋಟೇಶ್ವರ ಲಕ್ಷ್ಮಿ ನಾರಾಯಣ ಆಚಾರ್ಯ,ಬೋಳ ಸುಬ್ಬಯ್ಯ ಶೆಟ್ಟಿ, ಸಾರಾ ಅಬೂಬಕ್ಕರ್,ನಾರಾಯಣ ರಾವ್ ಪಡುಬಿದ್ರಿ ,ನಗರ ನಾರಾಯಣ ಶೆಣೈ ಮೊದಲಾದ ಸಾಧಕರನ್ನು ತಲಾ ಒಂದು ಲಕ್ಷ ರೂಗಳ ಚಿನ್ನದ ನಾಣ್ಯ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

ಪ್ರಧಾನ ಸಂಚಾಲಕ ಸಂತೋಷ್‌ ವಿ. ಶೆಟ್ಟಿ ಸಮ್ಮಾನಪತ್ರ ವಾಚಿಸಿದರು. ಜಯಕರ ಶೆಟ್ಟಿ ಇಂದ್ರಾಳಿ ವಂದಿಸಿದರು. ಅನುಶ್ರೀ, ರೂಪೇಶ್‌ ಶೆಟ್ಟಿ, ನಿತೇಶ್‌ ಶೆಟ್ಟಿ ಎಕ್ಕಾರ್‌ ಕಾರ್ಯಕ್ರಮ ನಿರೂಪಿಸಿದರು.

ಪ್ರಕಾಶಾಭಿನಂದನ ಸಮಿತಿಯ ಪ್ರಮುಖರಾದ ಸುರೇಶ್‌ ಶೆಟ್ಟಿ ಪಡುಬಿದ್ರಿ, ಎಂ. ಸುರೇಶ್‌ಚಂದ್ರ ಶೆಟ್ಟಿ, ಮನೋಹರ್‌ ಎಸ್‌. ಶೆಟ್ಟಿ, ಪುರುಷೋತ್ತಮ ಪಿ. ಶೆಟ್ಟಿ, ಜಿ. ಸುಧೀರ್‌ ಹೆಗ್ಡೆ ಬೈಲೂರು, ದೇವಾನಂದ ಎಂ. ಶೆಟ್ಟಿ, ದೇವಿಪ್ರಸಾದ್‌ ಶೆಟ್ಟಿ ಬೆಳಪು, ಅರವಿಂದ ಪೂಂಜಾ ಮೂಲ್ಕಿ, ನಿಟ್ಟೆ ರವಿರಾಜ್‌ ಶೆಟ್ಟಿ ಉಪಸ್ಥಿತರಿದ್ದರು.

ಸಾಂಸ್ಕೃತಿಕ ವೈಭವ – ವಿಶೇಷ ಆಕರ್ಷಣೆ

ಸಮಾರಂಬಭದಲ್ಲಿ ಪಟ್ಲ ಸತೀಶ್ ರವರ ತಂಡದಿಂದ ಯಕ್ಷಗಾನ ವೈಭವ,ಆಳ್ವಾಸ್ ನುಡಿಸಿರಿ, ವಿರಾಸತ್ ಸಾಂಸ್ಕೃತಿಕ ತಂಡದಿಂದ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ಹಾಗೂ ಅರ್ಜುನ್ ಜನ್ಯ ಮತ್ತು ವಿಜಯಪ್ರಕಾಶ್ ತಂಡದವರಿಂದ ನಡೆದ ಸಂಗೀತಾ ರಂಸಮಂಜರಿ ಕಾರ್ಯಕ್ರಮ ವಿಶೇಷ ಆಕರ್ಷಣೆಯಾಗಿತ್ತು.

ಉಟ ಉಪಚಾರ – ಅಚ್ಚುಕಟ್ಟಾದ ವ್ಯವಸ್ಥೆ

ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರಿಗೂ ಸಂಜೆ ಚಾ,ಕಾಫಿ ತಿಂಡಿ ಹಾಗೂ ರಾತ್ರಿ ಸಸ್ಯಾಹಾರಿ ಹಾಗೂ ಮಾಂಸಹಾರಿ ಭೋಜನದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಲಾಗಿತ್ತು. ಕಾರ್ಯಕ್ರಮಕ್ಕೆ ಆಗಮಿಸಿ ಪ್ರತಿಯೊಬ್ಬರಿಗೂ ಅವರು ಕುಳಿತಲ್ಲಿಯೇ ಕುಡಿಯುವ ನೀರಿನ ಬಾಟಲನ್ನು ವಿತರಿಸುವುದು ಕಂಡು ಬಂತು.

__Sathish Kapikad

Comments are closed.