ಕರಾವಳಿ

ವದಂತಿಗಳಿಗೆ ಕಿವಿಗೊಡದೆ ಶಾಂತಿ ಕಾಪಾಡಲು ಸಹಕರಿಸಿ : ಸಂಸದ ನಳಿನ್‌ಕುಮಾರ್ ಮನವಿ

Pinterest LinkedIn Tumblr

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ಕಾಪಾಡಲು ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತದ ಜತೆ ಜನತೆ ಸಹಕರಿಸ ಬೇಕು. ಸಮಾಜಘಾತಕ ಶಕ್ತಿಗಳು ಹರಡುವ ಯಾವುದೇ ವದಂತಿಗಳಿಗೆ ಕಿವಿಗೊಡಬಾರದು. ಕಾಂಗ್ರೆಸ್ ಪಕ್ಷದ ನಾಯಕರು ಗಲಭೆಗೆ ಪ್ರಚೋದಿಸುವ ಹೇಳಿಕೆ ನೀಡುವುದನ್ನು ತಕ್ಷಣ ನಿಲ್ಲಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್‌ಕುಮಾರ್ ಕಟೀಲ್ ವಿನಂತಿಸಿದ್ದಾರೆ.

ಕೆಲವರು ಗಲಭೆಗೆ ಪ್ರಚೋದಿಸಿದ ಕಾರಣ ಮಂಗಳೂರಿನಲ್ಲಿ ಎರಡು ಜೀವ ಬಲಿಯಾಗಿದೆ. ಇಂತಹ ಘಟನೆಗಳು ದುರದೃಷ್ಟಕರ. ಮೃತರ ಕುಟುಂಬಕ್ಕೆ ಸರ್ಕಾರ ಸೂಕ್ತ ನ್ಯಾಯ ಒದಗಿಸಲಿದೆ. ಕಾಂಗ್ರೆಸ್ ನಾಯಕರು ಇಂತಹ ಸಂದರ್ಭದಲ್ಲೂ ರಾಜಕೀಯ ಲಾಭ ಪಡೆಯಲು ಅಸಂಬದ್ದ ಹೇಳಿಕೆ ನೀಡುತ್ತಿದ್ದಾರೆ. ಶಾಂತಿ ಕಾಪಾಡುವುದು ಎಲ್ಲರ ಕರ್ತವ್ಯ. ಆದರೆ ಕಾಂಗ್ರೆಸ್ ನಾಯಕರು ಇನ್ನಷ್ಟು ಅಶಾಂತಿ ಸೃಷ್ಟಿಸಲು ಯತ್ನಿಸುತ್ತಿರುವುದು ಖಂಡನೀಯ ಎಂದು ಅವರು ಹೇಳಿದ್ದಾರೆ.

ಮಂಗಳೂರು ನಗರ ಶಿಕ್ಷಣ ಹಾಗೂ ಉದ್ಯಮದ ಪ್ರಮುಖ ನಗರವಾಗಿ ದೇಶದಲ್ಲೇ ಗುರುತಿಸಿಕೊಂಡಿದೆ. ಇಂತಹ ಹಿಂಸಾಚಾರದ ಕೃತ್ಯಗಳಿಂದ ನಗರದ ಹೆಸರಿಗೆ ದಕ್ಕೆಯಾಗುತ್ತಿದೆ. ಉದ್ವಿಗ್ನ ಪರಿಸ್ಥಿತಿಯನ್ನು ಸದ್ಯ ನಿಯಂತ್ರಣಕ್ಕೆ ತರಲು ಪೊಲೀಸರು ಯಶಸ್ವಿಯಾಗಿದ್ದಾರೆ. ಇನ್ನು ಅಹಿತಕರ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಲು ಎಲ್ಲರ ಸಹಕಾರ ಅಗತ್ಯ ಎಂದು ಸಂಸದರು ತಿಳಿಸಿದ್ದಾರೆ.

Comments are closed.