ಕರಾವಳಿ

ಮಂಗಳೂರಿಗೆ 24 ಗಂಟೆ ಕುಡಿಯುವ ನೀರು ; ರೂ.792.42 ಕೋಟಿ ವೆಚ್ಚದಲ್ಲಿ “ಜಲಸಿರಿ” ಯೋಜನೆ

Pinterest LinkedIn Tumblr

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮುಂದಿನ 30 ವರ್ಷಗಳ ಅಗತ್ಯತೆಯನ್ನು ಪರಿಗಣಿಸಿ ಎಬಿಡಿ ನೆರವಿನ 2ನೇ ಹಂತದ ‘’ಜಲಸಿರಿ” ಯೋಜನೆಯಡಿ ರೂ.792.42 ಕೋಟಿವೆಚ್ಚದಲ್ಲಿ 24×7 ಕುಡಿಯುವ ನೀರು ಸರಬರಾಜು ವ್ಯವಸ್ಥೆಯನ್ನು ಉನ್ನತೀಕರಣಗೊಳಿಸಲು ಉದ್ಧೇಶಿಸಲಾಗಿದೆ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮಾತ್ ತಿಳಿಸಿದರು.

ಪಕ್ಷದ ಜಿಲ್ಲಾ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೆಯುಡಿಐಡಿಎಫ್‌ಸಿ ವತಿಯಿಂದ ಎಬಿಡಿ ನೆರವಿನ ಕ್ವಿಮಿಪ್ ಯೋಜನೆಯಡಿ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿ ಕುಟುಂಬಕ್ಕೂ ದಿನದ 24 ಗಂಟೆಯೂ ಕುಡಿಯುವ ನೀರು ಪೂರೈಸುವ ನಿಟ್ಟಿನಲ್ಲಿ ಈ ಕಾಮಗಾರಿಯ ಯೋಜನೆ ರೂಪಿಸಲಾಗಿದೆ ಎಂದರು.

ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವಂತಹ ಕೆರೆಗಳನ್ನು ಅಭಿವೃದ್ಧಿಪಡಿಸಲು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಮೂಡ) ಇಲಾಖೆಯ ಅನುದಾನದಡಿ 3.65 ಕೋಟಿ ಅನುದಾನ ಬಿಡುಗಡೆಯಾಗಿದೆ.

ಅಂತರ್ಜಲ ಕುಸಿತದ ಪರಿಣಾಮಗಳನ್ನು ಸಮರ್ಥವಾಗಿ ಎದುರಿಸಲು ಕೆರೆಗಳ ಅಭಿವೃದ್ಧಿ ಸದ್ಯದ ಅವಶ್ಯಕತೆಯಾಗಿದೆ. ಆ ನಿಟ್ಟಿನಲ್ಲಿ ಸದ್ಯ 8 ಕೆರೆಗಳ ಅಭಿವೃದ್ಧಿ ಕಾಮಗಾರಿಗೆ ಯೋಜನೆ ರೂಪಿಸಿದ್ದು, ಕಾಮಗಾರಿ ಪ್ರಾರಂಭವಾಗಲಿದೆ. ಹಾಗೂ ಸಾರ್ವಜನಿಕರು ಪ್ರತಿದಿನ ಬೆಳಿಗ್ಗೆ -ಸಾಯಂಕಾಲ ವಾಯುವಿಹಾರಕ್ಕೆ ಅನುಕೂಲವಾಗುವಂತೆ ಈ ಕೆಳಕಂಡ ಕೆರೆಗಳನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಯೋಜನೆ ಸಿದ್ಧಪಡಿಸಲಾಗಿದೆ ಎಂದವರು ವಿವರ ನೀಡಿದರು.

೧. ಕದ್ರಿ ಕೈಬಟ್ಟಲು ಕೆರೆ ಅಭಿವೃದ್ಧಿ ರೂ,೯೦.೦೦ ಲಕ್ಷ
೨. ಜೋಗಿಮಠ ಕೆರೆ ಅಭಿವೃದ್ಧಿ ರೂ,೮೦.೦೦ ಲಕ್ಷ
೩. ಕುಲಶೇಖರ ಕೆರೆ ಅಭಿವೃದ್ಧಿ ರೂ,೭೦.೦೦ ಲಕ್ಷ
೪. ಜಪ್ಪಿನಮೊಗರು ಕಂರ್ಬಿಸ್ಥಾನ ಶ್ರೀ ವೈದ್ಯನಾಥ ದೇವಸ್ಥಾನದ ಕೆರೆ ಅಭಿವೃದ್ಧಿ ರೂ,೨೫.೦೦ ಲಕ್ಷ
೫. ಜಲ್ಲಿಗುಡ್ಡ ಕೆರೆ ಅಭಿವೃದ್ಧಿ ರೂ,೬೫.೦೦ ಲಕ್ಷ
೬. ಕುದ್ರೋಳಿ ನಡುಪಳ್ಳಿ ಜುಮ್ಮಾ ಮಸೀದಿ ವಠಾರದ ಕೆರೆ ಅಭಿವೃದ್ಧಿ ರೂ,೨೫.೦೦ ಲಕ್ಷ
೭. ಬಜಾಲು ಗ್ರಾಮದ ಕುಂದೋಡಿಯಲ್ಲಿರುವ ಕೆರೆ ಅಭಿವೃದ್ಧಿ ರೂ,೧೦.೦೦ ಲಕ್ಷ
೮. ಬೈರಾಡಿಕೆರೆ ಅಭಿವೃದ್ಧಿ ಕಾಮಗಾರಿಗೆ ೧.೩೦ ಕೋಟಿ ಬಿಡುಗಡೆಯಾಗಿ ಕಾಮಗಾರಿ ಚಾಲನೆಯಲ್ಲಿದ್ದು, ಮುಂದೆ ಹೆಚ್ಚುವರಿಯಾಗಿ ಸರಿಸುಮಾರು ೭೦.೦೦ ಲಕ್ಷಗಳ ವರೆಗೆ ಅಗತ್ಯವಿರುವುದರಿಂದ ಮುಂದಿನ ಅನುದಾನದ ಲಭ್ಯತೆ ಮೇರೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ವೇದವ್ಯಾಸ ಕಾಮಾತ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಪ್ರಮುಖರಾದ ನಿತಿನ್ ಕುಮಾರ್, ರವಿಶಂಕರ್ ಮಿಜಾರ್, ಸಂಜಯ್ ಪ್ರಭು, ಭಾಸ್ಕರ ಚಂದ್ರ ಮುಂತಾದವರು ಉಪಸ್ಥಿತರಿದ್ದರು.

Comments are closed.