ಕರಾವಳಿ

ಸಂಘದ ಅಭಿವೃದ್ಧಿ ಯೋಜನೆಗಳನ್ನು ಪೂರ್ಣಗೊಳಿಸಲು ಚುನಾವಣೆಯಲ್ಲಿ ಮತ್ತೆ ಸ್ಪರ್ಧಿಸುತ್ತಿದ್ದೇನೆ ; ಹಾಲಿ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ರೈ

Pinterest LinkedIn Tumblr

ಮಂಗಳೂರು, ಡಿಸೆಂಬರ್.06: ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷನಾಗಿ ನನ್ನ ಅವಧಿಯಲ್ಲಿ ನಾನು ಸಾಕಷ್ಟು ಕೆಲಸ ಮಾಡಿದ್ದೇನೆ. ಇದೀಗ ನಡೆಯಲಿರುವ ಸಂಘದ ಅಧ್ಯಕ್ಷರ ಚುನಾವಣೆಯಲ್ಲಿ ನಾನು ಮರು ಆಯ್ಕೆಗಾಗಿ ಈ ಬಾರಿ ಕೂಡ ನಾಮಪತ್ರ ಸಲ್ಲಿಸಿದ್ದೇನೆ ಎಂದು ಬಂಟರ ಯಾನೆ ನಾಡವರ ಮಾತೃ ಸಂಘದ ಹಾಲಿ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ರೈ ತಿಳಿಸಿದರು.

ನಗರದ ಮಾಲಾಡಿ ಎಸ್ಟೇಟ್ ನಲ್ಲಿ ಶುಕ್ರವಾರ ಸಂಜೆ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂಟರ ಸಂಘದ ಅಧ್ಯಕ್ಷನಾಗಿ ನನ್ನ ಅವಧಿಯಲ್ಲಿ ಸಾಕಷ್ಟು ಕೆಲಸ ಆಗಿದೆ. ಮರವೂರಿನಲ್ಲಿ ಬಂಟರ ಸಂಘದ ವಿದ್ಯಾ ಸಂಸ್ಥೆ ಗಳನ್ನು ಸ್ಥಾಪಿಸಲು ಒಂದು ಎಕರೆ ಎಂಟು ಸೆಂಟ್ಸ್ ಜಾಗವನ್ನು ದಾನವಾಗಿ ನೀಡಿದ್ದೇನೆ. ಬಂಟರ ಯಾನೆ ನಾಡವರ ಮಾತೃ ಸಂಘದ ಅಭಿವೃದ್ಧಿ ಯೋಜನೆಗಳನ್ನು ಪೂರ್ಣಗೊಳಿಸಲು 2019ರ ಚುನಾವಣೆಯಲ್ಲಿ ಮತ್ತೆ ಸ್ಪರ್ಧಿಸುತ್ತಿದ್ದೇನೆ ಎಂದು ಹೇಳಿದರು.

ಈ ಬಾರಿ ನಾನು ಚುನಾವಣೆ ಯಲ್ಲಿ ಸ್ಪರ್ಧಿಸುವ ಉದ್ದೇಶ ಹೊಂದಿರಲಿಲ್ಲ. ಆದರೆ ಸಂಘದ ಎಲ್ಲಾ ಸದಸ್ಯರ ಒಕ್ಕೊರಲ ಅಭಿಪ್ರಾಯದಂತೆ ನಾನು ಚುನಾವಣಾ ಕಣಕ್ಕಿಳಿಯ ಬೇಕಾಯಿತು. ಅಂತಿಮವಾಗಿ ನನ್ನೊಂದಿಗೆ ಇದ್ದವರು ಮನ್ಸೂಚನೆ ಇಲ್ಲದೆ ಪ್ರತಿಸ್ಪರ್ಧಿಯಾಗಿ ನಾಮಪತ್ರ ಸಲ್ಲಿಸಿರುವ ಕಾರಣ ಅನಿವಾರ್ಯವಾಗಿ ಚುನಾವಣೆ ನಡೆಯುತ್ತಿದೆ ಎಂದು ಅಜಿತ್ ಕುಮಾರ್ ರೈ ಅನಿವಾರ್ಯವಾಗಿ ಚುನಾವಣೆ ನಡೆಯುತ್ತಿರುವ ಬಗ್ಗೆ ಸ್ಪಷ್ಟಣೆ ನೀಡಿದರು.

ಬಂಟ್ಸ್ ಹಾಸ್ಟೇಲ್ ನ ಹಳೆ ಸಭಾ ಭವನ ಕೆಡವಿ ಸುಮಾರು 200ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲು ಯೋಜನೆ ಹಾಕಿರುವ ಬಂಟರ ಸಭಾಭವನ ಯೋಜನೆ ಕೈ ಬಿಟ್ಟಿಲ್ಲ. ಅದು ಪ್ರಗತಿಯಲ್ಲಿದೆ ಎಂದು ಪತ್ರಕರ್ತರ ಪ್ರಶ್ನೆಗೆ ಮಾಲಾಡಿ ಅಜಿತ್ ಕುಮಾರ್ ರೈ ಪ್ರತಿಕ್ರಿಯೆ ನೀಡಿದರು.

100 ವರ್ಷಗಳ ಹಿಂದೆ ಈ ಜಾಗದ ನೊಂದಣಿಯಾಗಿರುವುದರಿಂದ ಕಳೆದ ಮೂರು ವರ್ಷಗಳಲ್ಲಿ ಈ ಜಾಗಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಮತ್ತೆ ತಯಾರಿಸಲು ಕಾಲಾವಕಾಶ ಬೇಕಾಗಿತ್ತು. ಅದಾದನಂತರ, ಕಟ್ಟಡ ಕಟ್ಟಲು ಅಗತ್ಯವಿರುವ ಕೆಲವೊಂದು ಪರವಾನಿಗೆಗಳನ್ನು ಪಡೆಯಲು ಇಷ್ಟು ಕಾಲ ಬೇಕಾಯಿತು. ಕೊನೆಹಂತದಲ್ಲಿ ಅಗತ್ಯವಿರುವ ಇನ್ನು ಒಂದು ಪರವಾನಿಗೆ ಸಿಕ್ಕಿದ ಕೂಡಲೇ ಭವನ ನಿರ್ಮಾಣ ಕಾರ್ಯ ಆರಂಭವಾಗಲಿದೆ. ಇದಕ್ಕಾಗಿ ನಾವು ಸರಕಾರ ಅಥವಾ ಬ್ಯಾಂಕ್ ಸಾಲ ಪಡೆಯುವುದಿಲ್ಲ. ನಮ್ಮಲ್ಲೇ ಕೆಲವರು ಹಣ ಹಾಕಿ ಭವನ ನಿರ್ಮಾಣದ ಕಾರ್ಯ ಮುಂದುವರಿಸುತ್ತೇವೆ ಎಂದು ಮಾಲಾಡಿ ಅಜಿತ್ ಕುಮಾರ್ ರೈ ಸ್ಪಷ್ಟಣೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಕಾರ್ಯಕಾರಿ ಸಮಿತಿಯ ಇತರ ಸ್ಪರ್ಧಿಗಳಾದ ಜಯರಾಮ ಸಾಂತ, ವಸಂತ ಶೆಟ್ಟಿ, ರವೀಂದ್ರನಾಥ ಎಸ್ ಶೆಟ್ಟಿ ಮುಂತಾದವರು ಪಾಲ್ಗೊಂಡಿದ್ದರು.

Comments are closed.