ಕರಾವಳಿ

ಬ್ರಹ್ಮಾವರ ಕಾಲೇಜು ವಿದ್ಯಾರ್ಥಿನಿ ಪ್ರಥ್ವಿ‌ ಪೂಜಾರಿ ಆತ್ಮಹತ್ಯೆ ಕೇಸ್; ಆರೋಪಿ ದೋಷಮುಕ್ತ

Pinterest LinkedIn Tumblr

ಉಡುಪಿ: 2011ರಲ್ಲಿ ಉಡುಪಿ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದ್ದ ರಾಷ್ಟ್ರೀಯ ಕ್ರೀಡಾಪಟು ಪೃಥ್ವಿ ಪೂಜಾರಿ ಅಂಪಾರು (17) ಆತ್ಮಹತ್ಯೆ ಪ್ರಕರಣದ ಆರೋಪಿಯನ್ನು ಉಡುಪಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಡಿ.2ರಂದು ದೋಷಮುಕ್ತಗೊಳಿಸಿ ಆದೇಶ ನೀಡಿದೆ.

ಈ ಪ್ರಕರಣದ ಆರೋಪಿ ಬ್ರಹ್ಮಾವರ ಆಕಾಶವಾಣಿ ನಿವಾಸಿ ಮಿಸ್ಬಾನ್ ಹುಸೈನ್ (30) ಎಂಬಾತ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪವನ್ನು ಎದುರಿಸುತ್ತಿದ್ದು‌ ಸದ್ಯ ಆರೋಪದಿಂದ ಮುಕ್ತನಾಗಿದ್ದಾನೆ.

ಅಂಪಾರಿನ ಶೇಖರ್ ಪೂಜಾರಿ ಎನ್ನುವರ ಮಗಳು ಪ್ರಥ್ಬಿ ಬ್ರಹ್ಮಾವರ ಖಾಸಗಿ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದು ಪೋಲ್‌ವಾಲ್ಟ್‌ನಲ್ಲಿ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದ‌ ಈಕೆ 2011ರ ಸೆ.27ರಂದು ವಾರಂಬಳ್ಳಿ ಯಲ್ಲಿರುವ ಹಾಸ್ಟೆಲ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ಆತ್ಮಹತ್ಯೆಗೂ‌ ಮೊದಲು ತಾನು ಬರೆದಿದ್ದ ಡೆತ್ ನೋಟಿನಲ್ಲಿ ಬ್ರಹ್ಮಾವರದ ಮಿಸ್ಬಾನ್, ನನ್ನನ್ನು ಪ್ರೀತಿಸುವಂತೆ ಒತ್ತಾಯಿಸುತ್ತಿದ್ದ ಎಂದಿತ್ತು. ಅದರಂತೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ (ಸೆಕ್ಷನ್ 306)/ಅಡಿಯಲ್ಲಿ ಮಿಸ್ಬಾನ್ ವಿರುದ್ಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಕುಂದಾಪುರ ಸಹಾಯಕ ಪೊಲೀಸ್ ಅಧೀಕ್ಷಕರಾಗಿದ್ದ ಡಾ. ರಾಮ್ ನಿವಾಸ್ ಸೆಪಾಟ್ ತನಿಖೆ ನಡೆಸಿ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು. ನಿಗೂಢ ಆತ್ಮಹತ್ಯೆ ಪ್ರಕರಣದ ಕುರಿತು ನ್ಯಾಯ‌‌ ಒದಗಿಸುವಂತೆ ಆಗ್ರಹಿಸಿ ಬಿಲ್ಲವ ಸಂಘಟನೆಗಳು‌ ಮತ್ತು ರಾಜಕೀಯ ಪಕ್ಷಗಳು ಪ್ರತಿಭಟನೆ ನಡೆಸಿತ್ತು.

ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯ 24 ಸಾಕ್ಷಿಗಳ ವಿಚಾರಣೆಯನ್ನು ನಡೆಸಿದ್ದು ಜಿಲ್ಲಾ ನ್ಯಾಯಾಧೀಶ ಸಿ.ಎಂ.ಜೋಷಿ ಅವರು ಆರೋಪಿ ವಿರುದ್ಧದ ಆರೋಪ ಸಾಬೀತು ಪಡಿಸುವಲ್ಲಿ ಪ್ರಾಸಿಕ್ಯೂಶನ್ ವಿಫಲವಾಗಿದೆ ಎಂದು ಅಭಿಪ್ರಾಯಪಟ್ಟು ಆರೋಪಿಯನ್ನು ಖುಲಾಸೆಗೊಳಿಸಿ ಆದೇಶ ನೀಡಿದ್ದಾರೆ.

ಆರೋಪಿ ಪರ ಕುಂದಾಪುರದ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ ವಾದ ಮಂಡಿಸಿದ್ದಾರೆ.

Comments are closed.