ರಾಷ್ಟ್ರೀಯ

ಸ್ವೀಡನ್​ ರಾಜ-ರಾಣಿಯ ಘನತೆ, ಗಾಂಭೀರ್ಯ ಮತ್ತು ಸರಳತೆಗೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆಯ ಮಹಾಪೂರ

Pinterest LinkedIn Tumblr

ನವದೆಹಲಿ : ಸ್ವೀಡನ್​ ರಾಜ ಕಿಂಗ್​ ಕಾರ್ಲ್​ XVI ಗಸ್ಟಾಫ್​​ ಮತ್ತು ರಾಣಿ ಸಿಲ್ವಿಯಾ 5 ದಿನಗಳ ಭಾರತ ಪ್ರವಾಸ ಮಾಡಲು ಇಂದು ಬೆಳಗ್ಗೆ ರಾಷ್ಟ್ರ ರಾಜಧಾನಿ ದೆಹಲಿಗೆ ಬಂದಿಳಿದಿದ್ಧಾರೆ. ಇದರಲ್ಲಿ ಅಂತದ್ದೇನು ವಿಶೇಷವಿದೆ ಎಂದು ನೀವು ಕೇಳಬಹುದು. ಹೌದು, ಇವರ ಭಾರತ ಭೇಟಿ ವಿಶಿಷ್ಟವಾಗಿದೆ. ಅದಕ್ಕಾಗಿಯೇ ಇವರಿಬ್ಬರ ನಡತೆಯನ್ನು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಶ್ಲಾಘಿಸಿದ್ದಾರೆ. ಇದಕ್ಕೆ ಕಾರಣವೇನು? ಇಲ್ಲಿದೆ ಉತ್ತರ.

ಈ ರಾಯಲ್​ ದಂಪತಿ ಸ್ಟಾಕ್​ಹೊಮ್​​ನಿಂದ ಭಾರತಕ್ಕೆ ಸಾಮಾನ್ಯರಂತೆ ಏರ್​ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸಿದ್ಧಾರೆ. ಇಷ್ಟೇ ಅಲ್ಲದೇ ತಾವು ಸ್ವೀಡೆನ್​ನ ರಾಜ-ರಾಣಿ ಎಂಬ ಗರ್ವವಿಲ್ಲದೇ ತಾವೇ ತಮ್ಮ ಲಗ್ಗೇಜ್​ನ್ನು ಹೊತ್ತು ಬಂದಿದ್ಧಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗುತ್ತಿದ್ದು, ನೆಟ್ಟಿಗರು ಹಾಡಿ ಹೊಗಳುತ್ತಿದ್ದಾರೆ. ಏರ್​ ಇಂಡಿಯಾ ಸಂಸ್ಥೆ ಸ್ವೀಡನ್​ ರಾಜ-ರಾಣಿ ದೆಹಲಿ ಏರ್​ಪೋರ್ಟ್​​ಗೆ ಆಗಮಿಸಿದ ಫೋಟೋಗಳನ್ನು ಹಾಕಿ ಟ್ವೀಟ್​ ಮಾಡಿದೆ. ಜೊತೆಗೆ ಸ್ವೀಡನ್​ ರಾಯಲ್​ ದಂಪತಿ ಏರ್​ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸಿದ್ದು ಹೆಮ್ಮೆಯ ಕ್ಷಣ ಎಂದು ಟ್ವೀಟ್​​ನಲ್ಲಿ ಬರೆಯಲಾಗಿದೆ.

ಸ್ವೀಡನ್​ ರಾಜ-ರಾಣಿಯ ಘನತೆ, ಗಾಂಭೀರ್ಯ ಮತ್ತು ಸರಳತೆಗೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆಯ ಮಹಾಪೂರ ಹರಿದು ಬರುತ್ತಿದೆ. ಸ್ವೀಡೆನ್​ ರಾಜ ಏರ್​ಪೋರ್ಟ್​​ನಲ್ಲಿ ತಮ್ಮ ಬ್ಯಾಗ್​ನ್ನು ತಾವೇ ಹೊತ್ತು ತಂದಿರುವುದು ಎಲ್ಲರಿಗೂ ಸ್ಪೂರ್ತಿಯಾಗಿದೆ ಮತ್ತು ವಿನಮ್ರತೆಯಿಂದ ಕೂಡಿದೆ ಎಂದು ನೆಟ್ಟಿಗರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಇಂದು ಬೆಳಗ್ಗೆ ದೆಹಲಿಗೆ ಆಗಮಿಸಿದ ಸ್ವೀಡೆನ್​ ರಾಜ-ರಾಣಿಗೆ ರಾಷ್ಟ್ರಪತಿ ಭವನದಲ್ಲಿ ವಿದ್ಯುಕ್ತ ಸ್ವಾಗತ ಮಾಡಲಾಯಿತು. ಇವರು ದೆಹಲಿಯ ಕೆಂಪುಕೋಟೆ, ಜಾಮಾ ಮಸೀದಿ ಮತ್ತು ಮಹಾತ್ಮ ಗಾಂಧೀಜಿ ಸ್ಮಾರಕಕ್ಕೆ ಭೇಟಿ ನೀಡಿದ್ಧಾರೆ. ಈ ಭೇಟಿಯ ವೇಳೆ ಸ್ವೀಡನ್​ ರಾಜ ಭಾರತದ ರಾಷ್ಟ್ರಪತಿ ರಾಮನಾಥ ಕೋವಿಂದ್​ ಅವರನ್ನು ಭೇಟಿ ಮಾಡಲಿದ್ದಾರೆ. ಇನ್ನು, ದೆಹಲಿ ಹೊರತುಪಡಿಸಿ, ಮುಂಬೈ ಮತ್ತು ಉತ್ತರಾಖಂಡಕ್ಕೂ ಸ್ವೀಡನ್​ ರಾಜ-ರಾಣಿ ಭೇಟಿ ನೀಡಲಿದ್ದಾರೆ.

Comments are closed.