ಕರಾವಳಿ

ಉಳ್ಳಾಲದಲ್ಲಿ ದುಷ್ಕರ್ಮಿಗಳ ತಂಡದಿಂದ ಯುವಕನ ಕೊಲೆ : ಕೊಲೆ ಮಾಡಿದ ವ್ಯಕ್ತಿಯಿಂದಲೇ ಪೊಲೀಸರಿಗೆ ಮಾಹಿತಿ?..

Pinterest LinkedIn Tumblr

ಮಂಗಳೂರು : ದುಷ್ಕರ್ಮಿಗಳ ತಂಡವೊಂದು ಯುವಕನೋರ್ವನ ಮೇಲೆ ತಲ್ವಾರ್ ದಾಳಿ ನಡೆಸಿ ಬರ್ಬರವಾಗಿ ಹತ್ಯೆಗೈದ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ನಡೆದಿದೆ.

ಹತ್ಯೆಗೀಡಾದ ಯುವಕನನ್ನು ಕಾಸರಗೋಡು – ಕುಂಬ್ಳೆ ಪುತ್ತಿಗೆ ನಿವಾಸಿ ಸುದರ್ಶನ್(22) ಎಂದು ಗುರುತಿಸಲಾಗಿದೆ. ಮೃತ ವ್ಯಕ್ತಿಯ ಕಿಸೆಯಲ್ಲಿ ಗುರುತಿನ ಚೀಟಿಯೊಂದು ಪೊಲೀಸರಿಗೆ ಸಿಕ್ಕಿದ್ದು, ಅದರಲ್ಲಿ ಕುಂಬ್ಳೆ ಪುತ್ತಿಗೆ ನಿವಾಸಿ ಎಂದು ಇರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಸುದರ್ಶನ್ ನನ್ನು ಹತ್ಯೆ ನಡೆಸಿದ ಬಳಿಕ ತೊಕ್ಕೊಟ್ಟು ಸಮೀಪದ ಕಾಪಿಕಾಡಿನಲ್ಲಿರುವ ಕೃಷಿ ಸಂಶೋಧನಾ ಕೇಂದ್ರದ ಎದುರುಗಡೆ ಎಸೆದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ತಡರಾತ್ರಿ ಸುಮಾರು 11 ಗಂಟೆ ಸುಮಾರಿಗೆ ಕೆಂಪು ಬಣ್ಣದ ಕಾರಿನಲ್ಲಿ ಬಂದ ಆರೋಪಿಗಳ ತಂಡ ಸುದರ್ಶನ್ ಶವವನ್ನು ಕಾಪಿಕಾಡು ಬಳಿಯಿರುವ ಕೃಷಿ ಸಂಶೋಧನಾ ಕೇಂದ್ರದ ಎದುರುಗಡೆ ಎಸೆದು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ನವಂಬರ್ 29ರ ಶುಕ್ರವಾರ ಸುಮಾರು ೫ರಿಂದ ೧೦ ಗಂಟೆಯ ಮಧ್ಯೆ ನಡೆದಿರ ಬೇಕೆಂದು ಪೊಲೀಸರು ಶಂಕಿಸಿದ್ದಾರೆ.

ತೊಕ್ಕೊಟ್ಟು ಲಾಡ್ಜ್ ಒಂದರಲ್ಲಿ ಕೆಲಸ ಮಾಡುತ್ತಿರುವ ರಕ್ಷಿತ್ ಎಂಬಾತ ಕೊಲೆ ಮಾಡಿರುವ ಮಾಹಿತಿ ಪೊಲೀಸರಿಗೆ ಲಭಿಸಿದೆ. ರಕ್ಷಿತ್ ಗೆ ಸಂಬಂಧಿಸಿದ ವೀಡಿಯೊ ಒಂದನ್ನು ಸುದರ್ಶನ್ ವೈರಲ್ ಮಾಡಿದ್ದ ಎಂದು ಹೇಳಲಾಗುತ್ತಿದೆ. ಈ ಕಾರಣಕ್ಕೆ ರಕ್ಷಿತ್ ಕೊಲೆ ಮಾಡಿರುವ ಬಗ್ಗೆ ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ. ಸುದರ್ಶನ್ ನನ್ನು ಬೇರೆ ಸ್ಥಳದಲ್ಲಿ ಕೊಲೆ ಮಾಡಿ ನಂತರ ಇಲ್ಲಿಗೆ ತಂದು ಹಾಕಿರುವ ಬಗ್ಗೆ ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.

ಇನ್ನೊಂದು ಮೂಲಗಳ ಪ್ರಕಾರ ರೌಡಿ ರಕ್ಷಿತ್ ಸುದರ್ಶನ್ ಮೃತದೇಹವನ್ನು ಎಸೆದು ಬಳಿಕ ಉಳ್ಳಾಲ ಪೊಲೀಸ್ ಠಾಣೆಗೆ ಕರೆ ಮಾಡಿ ತಾನು ಹತ್ಯೆ ನಡೆಸಿರುವ ಬಗ್ಗೆ ತಿಳಿಸಿದ್ದಾನೆ ಎನ್ನಲಾಗಿದೆ. ತಾನು ರಕ್ಷಿತ್ ಎಂಬುದಾಗಿ ತಿಳಿಸಿದ ಆರೋಪಿ ಹತ್ಯೆ ನಡೆಸಿರುವುದಾಗಿ ತಿಳಿಸಿದ್ದಾನೆ. ಹಾಗೂ ತನ್ನ ಪ್ರಿಯತಮೆಗೆ ಕಿರುಕುಳ ನೀಡುತ್ತಿದ್ದ ಆತ ಎಚ್ಚರಿಕೆ ನೀಡಿದ ಬಳಿಕವೂ ತನ್ನ ಚಾಳಿ ನಿಲ್ಲಿಸಿರಲಿಲ್ಲ. ಇದೇ ಕಾರಣಕ್ಕೆ ಹತ್ಯೆ ನಡೆಸಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಅಲ್ಲದೆ, ಶನಿವಾರದಂದು ತಾನೇ ಠಾಣೆಗೆ ಬಂದು ಶರಣಾಗುವುದಾಗಿ ಪೊಲೀಸರಿಗೆ ತಿಳಿಸಿದ್ದಾನೆ ಎಂದು ಮಾಹಿತಿ ಲಭ್ಯವಾಗಿದೆ.

ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತೊಕ್ಕೊಟ್ಟು ನಿವಾಸಿ ಡಿ.ಕೆ.ರಕ್ಷಿತ್ ನಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.

Comments are closed.