ಕುಂದಾಪುರ: ಕುಂದಾಪುರ ಉಪವಿಭಾಗಕ್ಕೆ ನೂತನವಾಗಿ ಎಎಸ್ಪಿ ಆಗಿ ಬಂದ ಹರಿರಾಂ ಶಂಕರ್ ಪೊಲೀಸ್ ವ್ಯವಸ್ಥೆಯನ್ನು ಜನಸ್ನೇಹಿಯನ್ನಾಗಿಸಲು ಹೊರಟಿದ್ದಾರೆ, ಅಷ್ಟೇ ಅಲ್ಲ ಅಪರಾಧ ನಿಯಂತ್ರಣಕ್ಕಾಗಿ ಮತ್ತು ಕಡಿವಾಣಕ್ಕಾಗಿ ವಿಭಿನ್ನ ಹಾಗೂ ವಿಶಿಷ್ಟ ಯೋಜನೆಗಳನ್ನು ರೂಪಿಸಿ ಕುಂದಾಪುರವನ್ನು ಇಲಾಖೆಯಲ್ಲಿ ಮಾದರಿಯನ್ನಾಗಿಸಲು ಹೊರಟಿದ್ದಾರೆ. ಸದ್ಯ ಅವರು ’ಸೇಫ್ ಕುಂದಾಪುರ ಪ್ರಾಜೆಕ್ಟ್’ ಎಂಬ ಹೊಸ ಯೋಜನೆಗೆ ಕೈ ಹಾಕಿದ್ದು ಜನರಲ್ಲಿ ಪೊಲೀಸ್ ಇಲಾಖೆ ಬಗ್ಗೆ ವಿಶ್ವಾಸವೊಂದು ಗರಿಗೆದರಿದೆ.



‘ಸೇಫ್ ಕುಂದಾಪುರ ಪ್ರಾಜೆಕ್ಟ್’ ಏನು?
ಇದೊಂದು ವಿಭಿನ್ನ ಹಾಗೂ ಕಠಿಣ ಯೋಜನೆ ಹಾಗೂ ಆಲೋಚನೆ ಅಂದರೆ ತಪ್ಪಾಗಲಾರದು. ಖಾಸಗಿ ಸಹಭಾಗಿತ್ವದಲ್ಲಿ ಪೊಲೀಸರ ಮಾರ್ಗದರ್ಶನದಲ್ಲಿ ನಡೆಯುವ ಕಾರ್ಯಾಚರಣೆಯಿದು. ದೇವಸ್ಥಾನ, ಅಂಗಡಿ, ಮನೆ, ಫ್ಲ್ಯಾಟ್ ಸೇರಿದಂತೆ ಆಯಕಟ್ಟಿನ ಸ್ಥಳಗಳಲ್ಲಿ ಸಿಸಿ ಟಿವಿ ಅಳವಡಿಸುವುದು ಪ್ರಥಮ ಹಂತವಾದರೆ ಅಳವಡಿಸಿದ ಸಿಸಿ ಟಿವಿ ಪೂಟೇಜ್‌ಗಳನ್ನು (ದೃಶ್ಯಾವಳಿಯನ್ನು) ಸಂಸ್ಥೆಯು ರಾತ್ರಿ 8 ರಿಂದ ಬೆಳಿಗ್ಗೆ 6 ಗಂಟೆಯವರೆಗೆ ಸತತವಾಗಿ ಹದ್ದಿನ ಕಣ್ಣಿಟ್ಟು ಕಾಯುವುದು ಕಾರ್ಯಾಚರಣೆಯ ಇನ್ನೊಂದು ಹಂತ. ಈ ಕಾರ್ಯಾಚರಣೆ ಸಂಪೂರ್ಣ ನಂಬಲರ್ಹವಾಗಿದ್ದು ಸಿಸಿ ಟಿವಿ ಪೂಟೇಜ್‌ನ ಲೈವ್ ವೀಕ್ಷಣೆ ಹೊರತು ಯಾವುದೇ ರೆಕಾರ್ಡ್ ಇರಲ್ಲ. ಸದ್ಯ 5 ಎಲ್‌ಇಡಿ ಟಿವಿ, ಲ್ಯಾಪ್‌ಟಾಪ್ ಮೂಲಕ ನಿತ್ಯದ ಮಾನಿಟರಿಂಗ್ ವ್ಯವಸ್ಥೆಯನ್ನು ಸೈನ್ ಇನ್ ಸೆಕ್ಯೂರಿಟಿ ಸಂಸ್ಥೆ ಕುಂದಾಪುರದ ಅಂಕದಕಟ್ಟೆಯಲ್ಲಿ ಮಾಡುತ್ತಿದ್ದು ಇದರ ವ್ಯವಸ್ಥಾಪಕ ಕೃಷ್ಣ ಅವರ ತಂಡ ಪೊಲೀಸರ ಮಾರ್ಗದರ್ಶನದಲ್ಲಿ ರಾತ್ರಿ ಸಿಸಿ ಟಿವಿ ಕಣ್ಗಾವಲು ಕಾಯುತ್ತದೆ. ಈಗಾಗಲೇ 60ಕ್ಕೂ ಅಧಿಕ ಸಿಸಿ ಟಿವಿ ಅಳವಡಿಕೆ ಕಾರ್ಯವಾಗಿದೆ.
ಏನು ಉಪಯೋಗ?
ಸೈನ್ ಇನ್ ಸೆಕ್ಯೂರಿಟಿ ತಂಡವು ಬೇಡಿಕೆಯುಳ್ಳ ಗ್ರಾಹಕರಿಗೆ ಸಿಸಿ ಟಿವಿಯನ್ನು ಅತ್ಯಂತ ಕಮ್ಮಿ ಬೆಲೆಯಲ್ಲಿ ಅಳವಡಿಸುವುದಲ್ಲದೇ ಮಾಸಿಕವಾಗಿ ಕೈಗೆಟುಕುವ ದರವನ್ನು ನಿರ್ವಹಣಾ ವೆಚ್ಚವಾಗಿ ಪಡೆಯುತ್ತದೆ. ಹೀಗೆ ಗ್ರಾಹಕರಿಗೆ ಅಳವಡಿಸುವ ಸಿಸಿ ಟಿವಿ ದೃಶ್ಯವನ್ನು ಸಂಸ್ಥೆಯಲ್ಲಿ ರಾತ್ರಿಯಿಂದ ಬೆಳೆಗ್ಗೆಯವರೆಗೆ ತಂಡ ವೀಕ್ಷಿಸುತ್ತದೆ. ಈ ತಂಡಕ್ಕೆ ಮಾರ್ಗದರ್ಶಕರಾಗಿ ಓರ್ವ ಪೊಲೀಸ್ ಸಿಬ್ಬಂದಿ ಕೂಡ ಇರುತ್ತಾರೆ. ಅಕಸ್ಮಾತ್ ಸಿಸಿ ಟಿವಿ ದೃಶ್ಯಾವಳಿ ವೀಕ್ಷಣೆ ವೇಳೆ ಯಾವುದೇ ಅಪರಿಚಿತ, ಅನುಮಾನಾಸ್ಪದ ವ್ಯಕ್ತಿ ಕಂಡು ಬಂದರೆ ಅಥವಾ ಯಾವುದೇ ಕಾನೂನು ಬಾಹಿರ ಚಟುವಟಿಕೆ ಆ ವ್ಯಾಪ್ತಿಯಲ್ಲಿ ಕಂಡರೆ ಪೊಲೀಸರು ಕೂಡಲೇ ಸನ್ನದ್ಧರಾಗುತ್ತಾರೆ. ಅಲ್ಲದೇ ಸಿಸಿ ಟಿವಿ ಅಳವಡಿಸಿಕೊಂಡ ಮಾಲಿಕನಿಗೂ ಸಂದೇಶ ಹೋಗುತ್ತದೆ. ಹೀಗಾಗಿ ಅಪರಾಧ ಪ್ರಕರಣಗಳನ್ನು ಮಟ್ಟಹಾಕಲು ಇದೊಂದು ಉತ್ತಮ ಪ್ರಯತ್ನವಾಗಿದ್ದು ಈ ಆರಂಭಿಕ ಹೆಜ್ಜೆ ಯಶಸ್ವಿಯಾಗುವ ಎಲ್ಲಾ ಲಕ್ಷಣ ಕಂಡುಬರುತ್ತಿದೆ.
ಸಿ.ಸಿ. ಟಿವಿ ಕಂಟ್ರೋಲ್ ರೂಂ ಕಚೇರಿ ಉದ್ಘಾಟನೆ
ಕುಂದಾಪುರದ ಅಂಕದಕಟ್ಟೆಯಲ್ಲಿರುವ ಸಿ.ಸಿ. ಟಿವಿ ಕಂಟ್ರೋಲ್ ರೂಂ ಕಚೇರಿಯನ್ನು ಉಡುಪಿ ಜಿಲ್ಲಾ ಎಸ್ಪಿ ನಿಶಾ ಜೇಮ್ಸ್ ಬುಧವಾರದಂದು ಉದ್ಘಾಟಿಸಿದರು. ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಶೆಟ್ಟಿ ಶುಭಶಂಸನೆಗೈದರು. ಕುಂದಾಪುರ ಎಎಸ್ಪಿ ಹರಿರಾಂ ಶಂಕರ್ ಪ್ರಸ್ತಾವನೆಗೈದರು. ಕುಂದಾಪುರ ಸಿಪಿಐ ಮಂಜಪ್ಪ, ಪಿಎಸ್‌ಐ ಹರೀಶ್ ಆರ್., ಕೋಟೇಶ್ವರ ಗ್ರಾ.ಪಂ ಉಪಾಧ್ಯಕ್ಷ ಉದಯ, ಕುಂದಾಪುರ ಎಎಸ್ಪಿ ಅವರ ಪತ್ನಿ ಅನಂತಾ, ಸೈನ್ ಇನ್ ಸೆಕ್ಯೂರಿಟಿ ಸಂಸ್ಥೆಯ ವ್ಯವಸ್ಥಾಪಕ ಕೃಷ್ಣ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಪತ್ರಕರ್ತ ವಸಂತ ಗಿಳಿಯಾರ್ ನಿರೂಪಿಸಿದರು.
ಲೈವ್ ಮಾನಿಟರಿಂಗ್ ವ್ಯವಸ್ಥೆ ಮೂಲಕ ರಾತ್ರಿಯಿಡೀ ವೀಕ್ಷಣೆ ಮಾಡುತ್ತಿರುವ ತಂಡವು ಅಂತಹ ಘಟನೆಗಳಾದಲ್ಲಿ ಪೊಲೀಸರು, ಬೀಟ್ ಸಿಬ್ಬಂದಿಗೆ ಮಾಹಿತಿ ನೀಡುತ್ತಾರೆ. ಕುಂದಾಪುರದಲ್ಲಿ ಇಂತಹ ಒಂದು ಮಹತ್ತರವಾದ ಯೋಜನೆ ಪ್ರಾಯೋಗಕವಾಗಿ ಆರಂಭಿಸಿದ್ದು ನಿಜಕ್ಕೂ ಶ್ಲಾಘನೀಯ. ಸಾರ್ವಜನಿಕರ ಕ್ಷೇಮದ ನಿಟ್ಟಿನಲ್ಲಿ ಇದೊಂದು ಅಪರೂಪದ ವ್ಯವಸ್ಥೆಯಾಗಿದೆ. ಇದು ಇಲಾಖೆಯ ಹಿಡಿತಲಿದ್ದು ಕುಂದಾಪುರದ ರೆಸ್ಫಾನ್ಸ್ ಗಮನಿಸಿ ಇಡೀ ಜಿಲ್ಲೆಗೆ ಇದನ್ನು ವಿಸ್ತರಿಸುವ ಬಗ್ಗೆ ಪೊಲೀಸ್ ಇಲಾಖೆ ಚಿಂತನೆ ನಡೆಸುತ್ತದೆ.
– ನಿಶಾ ಜೇಮ್ಸ್, ಉಡುಪಿ ಎಸ್ಪಿ
ಕುಂದಾಪುರದ ಜನರು ಪೊಲೀಸರ ಎಲ್ಲಾ ಉತ್ತಮ ಕೆಲಸದ ಜೊತೆ ಕೈಜೋಡಿಸುತ್ತಿದ್ದಾರೆ. ಸೇಫ್ ಕುಂದಾಪುರ ಪ್ರಾಜೆಕ್ಟ್ ಎನ್ನುವುದು ಅಪರಾಧ ತಡೆಗೆ ಪೊಲೀಸ್ ಇಲಾಖೆ ಕಂಡುಕೊಂಡ ನೂತನ ಕ್ರಮವಾಗಿದೆ. ಇದರಿಂದ ಅಪರಾಧ ನಡೆಯುವ ಮೊದಲೇ ತಡೆಯಲು ಸುಲಭ ದಾರಿಯಾಗಿದೆ. ಸಿಸಿ ಟಿವಿ ಅಳವಡಿಕೆ ಬಗ್ಗೆ, ಸಿಸಿ ಟಿವಿಯಲ್ಲಿ ಚಿತ್ರೀಕರಣವಾಗಲು ಲೈಟಿಂಗ್ ವ್ಯವಸ್ಥೆ ಬಗ್ಗೆಯೂ ಪೊಲೀಸರು ನಿಗಾ ವಹಿಸಿದ್ದಾರೆ. ಈ ಯೋಜನೆ ಯಶಸ್ವಿಯಾಗಲು ಪೊಲೀಸ್ ಇಲಾಖೆ ಜೊತೆಗೆ ಸಾರ್ವಜನಿಕರು ಸ್ಪಂದಿಸಬೇಕಿದೆ.
-ಹರಿರಾಂ ಶಂಕರ್ (ಕುಂದಾಪುರ ಉಪವಿಭಾಗದ ಎಎಸ್ಪಿ)
(ಚಿತ್ರ, ವರದಿ- ಯೋಗೀಶ್ ಕುಂಭಾಸಿ)
Comments are closed.