ಕರಾವಳಿ

ಕುಡ್ಲದ ನದಿಗಳ ಸ್ವಚ್ಛತೆಗೆ ಹಸಿರು ದಳದೊಂದಿಗೆ ಎಪಿಡಿ ಒಪ್ಪಂದ

Pinterest LinkedIn Tumblr

ಮಂಗಳೂರು, ಅಕ್ಟೋಬರ್,26: ದಕ್ಷಿಣ ಕನ್ನಡದ ಜೀವನಾಡಿಗಳಾದ ನೇತ್ರಾವತಿ ಮತ್ತು ಗುರುಪುರ ನದಿಗಳನ್ನು ಸ್ವಚ್ಛಗೊಳಿಸುವ ದೀರ್ಗಾವದಿ ಯೋಜನೆಗೆ ಮಂಗಳೂರಿನ ಎಪಿಡಿ ಫೌಂಡೇಶನ್ ಬೆಂಗಳೂರಿನ ಹಸಿರು ದಳದೊಂದಿಗೆ ಒಪ್ಪಂದಕ್ಕೆ ಸಹಿ ಮಾಡಿದೆ.

ಮಂಗಳೂರು ಮೂಲದ ಪರಿಸರ ಪರ ಕೆಲಸ ಮಾಡುತ್ತಿರುವ ಸರಕಾರೇತರ ಸಂಸ್ಥೆ ಆಂಟಿ ಪೋಲ್ಯೂಷನ್ ಡ್ರೈವ್ ಫೌಂಡೇಶನ್ (ಎಪಿಡಿ ಪ್ರತಿಷ್ಠಾನ) ಬೆಂಗಳೂರು ಮೂಲದ ಹಸಿರು ದಳ ಅವರೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಮಂಗಳೂರಿನ ಎರಡು ಜೀವನಾಡಿಗಳಾದ ನೇತ್ರಾವತಿ ಮತ್ತು ಗುರುಪುರ ನದಿಗಳನ್ನು ಸ್ವಚ್ಛಗೊಳಿಸುವ ದೀರ್ಘಾವಧಿಯ ಯೋಜನೆಯನ್ನು ಪ್ರಾರಂಭಿಸಲಿದೆ.

ಯೋಜನೆಗಾಗಿ ಜಂಟಿಯಾಗಿ ಕೆಲಸ ಮಾಡುವ ಪರಸ್ಪರ ತಿಳುವಳಿಕೆ ಪತ್ರಕ್ಕೆ (ಎಂಒಯು) ಬೆಂಗಳೂರಿನ ಹಸಿರು ದಳದ ಸಹ-ಸಂಸ್ಥಾಪಕಿ ಮತ್ತು ಕಾರ್ಯನಿರ್ವಾಹಕ ನಿರ್ದೇಶಕಿ ಶ್ರೀಮತಿ ನಳಿನಿ ಶೇಖರ್ ಮತ್ತು ಎಪಿಡಿ ಸಂಸ್ಥಾಪಕ ಮುಖ್ಯಸ್ಥ ಅಬ್ದುಲ್ಲಾ ಎ. ರೆಹಮಾನ್ ಅವರು ಅಕ್ಟೋಬರ್ ೪, ೨೦೧೯ ರಂದು ಸಹಿ ಹಾಕಿದರು. ನಳಿನಿ ಶೇಖರ್ ಮತ್ತು ಅವರ ತಂಡವು ಎಪಿಡಿ ತಂಡದೊಂದಿಗೆ ಜಂಟಿಯಾಗಿ ಮಂಗಳೂರಿನ ಎರಡೂ ನದಿಗಳ ಸಮೀಕ್ಷೆಯನ್ನು ಮೋಟಾರು ದೋಣಿ ಮೂಲಕ ಕೈಗೊಂಡಿದ್ದರು.

ಹಸಿರು ದಳ ಸಂಸ್ಥೆಯು ಕರ್ನಾಟಕ, ತಮಿಳುನಾಡು ಮತ್ತು ಆಂಧ್ರ ಪ್ರದೇಶ ರಾಜ್ಯಗಳ ಹಲವಾರು ನಗರಗಳಲ್ಲಿ ಪರಿಣಾಮಕಾರಿ ಘನತ್ಯಾಜ್ಯ ನಿರ್ವಹಣೆಯಲ್ಲಿ ವ್ಯಾಪಕ ಪರಿಣತಿಯನ್ನು ಹೊಂದಿದೆ. ಅವರನ್ನು ಮಂಗಳೂರಿಗೆ ಕರೆತರುವ ಮೂಲಕ, ಘನ ತ್ಯಾಜ್ಯ ನಿರ್ವಹಣೆಯ ಪರೀಕ್ಷಿತ ಮತ್ತು ಸುವ್ಯವಸ್ಥಿತ ಮಾದರಿಯಿಂದ ನಮ್ಮ ನಗರವು ಪ್ರಯೋಜನ ಪಡೆಯುತ್ತದೆ ಎಂದು ಎಪಿಡಿ ಸ್ಥಾಪಕ ಮುಖ್ಯಸ್ಥ ಅಬ್ದುಲ್ಲಾ ಎ. ರೆಹಮಾನ್ ಹೇಳಿದರು.

2010 ರಲ್ಲಿ ಪ್ರಾರಂಭವಾದ ಹಸಿರು ದಳ ಸಮಾಜದಲ್ಲಿ ಬದಲಾವಣೆಗಾಗಿ ಕೆಲಸ ಮಾಡುವ ಸಂಸ್ಥೆಯಾಗಿದ್ದು, ತ್ಯಾಜ್ಯ ನಿರ್ವಹಣೆಯೊಂದಿಗೆ ಕಸ ಹೆಕ್ಕುವ ಮಂದಿಯ ಪ್ರಗತಿಗಾಗಿ ಕೂಡ ಶ್ರಮಿಸುತ್ತಿದೆ. ಸಂಸ್ಥೆಯು ಪ್ರಸ್ತುತ ಆರು ಪ್ರಮುಖ ನಗರಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿದೆ. ಎಪಿಡಿ ತಂಡ ಮತ್ತು ಹಸಿರು ದಳ ಕಳೆದ ಮೂರು ತಿಂಗಳಿಂದ ಈ ಸಹಯೋಗ ಕಾರ್ಯಕ್ರಮದ ರೂಪುರೇಷೆಗಳನ್ನು ಸಿದ್ಧಪಡಿಸುತ್ತಿದೆ. ಎರಡು ಸಂಸ್ಥೆಗಳ ಸಹಯೋಗದ ಮುಂದಿನ ಹಂತವಾಗಿ ಮೂರು ತಿಂಗಳಲ್ಲಿ ನದಿ ಪ್ರದೇಶದ ವೈಜ್ಞಾನಿಕ ಅಧ್ಯಯನ ಮತ್ತು ಅನುಷ್ಠಾನಕ್ಕೆ ಕ್ರಿಯಾ ಯೋಜನೆ ರೂಪಿಸಲಾಗುವುದು.

ಪ್ಲಾಸ್ಟಿಕ್ ತ್ಯಾಜ್ಯ ನೀರಿನ ಮೂಲಗಳೊಂದಿಗೆ ಸೇರುವುದನ್ನು ತಪ್ಪಿಸುವ ಮೊದಲ ರಕ್ಷಣಾ ಕವಚವಾಗಿ ಕಸ ತೆಗೆಯುವವರು ಕೆಲಸ ಮಾಡುತ್ತಾರೆ ಎಂದು ಹಸಿರು ದಳ ಅಭಿಪ್ರಾಯಹೊಂದಿದೆ. ನಗರದ ಘನತ್ಯಾಜ್ಯ ನಿರ್ವಹಣೆಗೆ ಅವರ ಕೊಡುಗೆಗೆ ಮಾನ್ಯತೆ ನೀಡುವುದು ಮತ್ತು ಚಿಂದಿ ಅಯಿಯುವವರು ಹಾಗೂ ತ್ಯಾಜ್ಯ ನಿರ್ವಹಣಾ ಕಾರ್ಮಿಕರಿಗೆ ಪೂರಕ ಆದಾಯ ವ್ಯವಸ್ಥೆಯನ್ನು ಮಾಡಿಕೊಡುವ ಅಗತ್ಯ ಇದೆ ಎನ್ನುತ್ತಾರೆ ದಳದ ಕಾರ್ಯನಿರ್ವಾಹಕ ನಿರ್ದೇಶಕಿ ಶ್ರೀಮತಿ ನಳಿನಿ ಶೇಖರ್.

ಎಪಿಡಿ ಫೌಂಡೇಶನ್ ಲಾಭರಹಿತ ಸಂಸ್ಥೆಯಾಗಿದ್ದು, ಪರಿಸರ ಸಂರಕ್ಷಣಾ ಚಟುವಟಿಕೆಗಳ ಮೂಲಕ ಸಾರ್ವಜನಿಕ ಆರೋಗ್ಯವನ್ನು ಸುಧಾರಿಸುವಲ್ಲಿ ಕೆಲಸ ಮಾಡುತ್ತಿದೆ. ವಾಯುಮಾಲಿನ್ಯ, ಘನತ್ಯಾಜ್ಯ ನಿರ್ವಹಣೆ ಮತ್ತು ನೈರ್ಮಲ್ಯ ಇದರ ಪ್ರಮುಖ ಕಾರ್ಯಕ್ಷೇತ್ರಗಳು. ಸ್ವಚ್ಛ ಭಾರತ್ ಕಾರ್ಯಕ್ರಮ ಆರಂಭವಾದ ದಿನವೇ ೨ ಅಕ್ಟೋಬರ್ ೨೦೧೪ ರಂದು ಎಪಿಡಿ ಸ್ಥಾಪಿಸಲಾಯಿತು. ಇದು ಆರಂಭದಲ್ಲಿ ಫೇಸ್‌ಬುಕ್ ಪುಟವಾಗಿ ಪ್ರಾರಂಭವಾಯಿತು. ೨೦೧೫ ರಲ್ಲಿ ಎನ್‌ಜಿ‌ಒ ಆಗಿ ನೋಂದಾಯಿಸಲ್ಪಟ್ಟಿತು. ಎಪಿಡಿ ಪ್ರತಿಷ್ಠಾನವು ಸಂಶೋಧನೆ, ದತ್ತಾಂಶ ಸಂಗ್ರಹ, ನಡವಳಿಕೆಯ ಬದಲಾವಣೆ ಮತ್ತು ಅಡ್ವಕೆಸಿ ಕೆಲಸ ಮಾಡುತ್ತದೆ.

ಹಿನ್ನೆಲೆ ಮತ್ತು ವಿವರಗಳು : ಮಂಗಳೂರಿನ ಜಲಮೂಲಗಳು ದಕ್ಷಿಣ ಕನ್ನಡದ ಹೆಮ್ಮೆ ಆಗಿವೆ. ಗುರುಪುರ ಮತ್ತು ನೇತ್ರಾವತಿ ಎರಡು ನದಿಗಳು ಐತಿಹಾಸಿಕವಾಗಿ ಸ್ಥಳೀಯ ಆರ್ಥಿಕತೆಗೆ ಕೊಡುಗೆ ನೀಡುವ ಮೂಲಕ ಅಸಂಖ್ಯಾತರಿಗೆ ಜೀವನೋಪಾಯವನ್ನು ಕಂಡುಕೊಳ್ಳಲು ಸಹಾಯ ಮಾಡಿದ ಜೀವನದಿಗಳಾಗಿವೆ.

ಆದರೆ, ಇಂದು ಈ ನದಿಗಳು ಅರಬೀ ಸಮುದ್ರಕ್ಕೆ ಮಾಲಿನ್ಯ ಮತ್ತು ತ್ಯಾಜ್ಯಗಳನ್ನು ಕೊಂಡೊಯ್ಯುವ ವಾಹಕಗಳಾಗಿವೆ. ನದಿಗಳಲ್ಲಿನ ರಾಸಾಯನಿಕ ಮಾಲಿನ್ಯವು ಅನೇಕ ಮೂಲಗಳನ್ನು ಹೊಂದಿದ್ದರೂ, ಮಂಗಳೂರಿನಲ್ಲಿ ಪ್ರತಿಯೊಬ್ಬ ನಾಗರಿಕನು ನೇರವಾಗಿ ಅಥವಾ ಪರೋಕ್ಷವಾಗಿ ಕೊಡುಗೆ ನೀಡುವ ಮೂಲವೆಂದರೆ ಘನ ತ್ಯಾಜ್ಯವನ್ನು ಹೊರಹಾಕುವುದು, ಅಡಿಗೆ ತ್ಯಾಜ್ಯ, ಪ್ರಾಣಿಗಳ ತ್ಯಾಜ್ಯ ಮುಂತಾದ ಜೈವಿಕ ವಿಘಟನೀಯ ಮತ್ತು ಪ್ಲಾಸ್ಟಿಕ್, ಬಟ್ಟೆಯಂತಹ ಜೈವಿಕ ವಿಘಟನೀಯ ತ್ಯಾಜ್ಯ, ಲೋಹ ಇತ್ಯಾದಿ. ಸಾಗರದಲ್ಲಿ ಪ್ಲಾಸ್ಟಿಕ್ ಶೇಖರಣೆ ಆಗುವುದನ್ನು ಜಾಗತಿಕ ಬಿಕ್ಕಟ್ಟು ಎಂದು ಪರಿಗಣಿಸಲಾಗಿದೆ. ಪ್ರಸ್ತುತ ಮಾಲಿನ್ಯದ ಪ್ರಮಾಣ ಗಮನಿಸಿದರೆ ೨೦೫೦ ರ ವೇಳೆಗೆ ಪ್ಲಾಸ್ಟಿಕ್ ಮೀನುಗಳ ಪ್ರಮಾಣವನ್ನು ಮೀರಿಸುತ್ತದೆ ಎಂದು ಆತಂಕಪಡಲಾಗಿದೆ.

ನೀರಿನಲ್ಲಿ ಘನತ್ಯಾಜ್ಯ ಸೇರುವುದು ಕಳಪೆ ಕಸ ನಿರ್ವಹಣಾ ಅಭ್ಯಾಸ, ನಾಗರಿಕರ ಅಜ್ಞಾನ, ನಿರ್ಲಕ್ಷ್ಯ ಮತ್ತು ಕೆಟ್ಟ ಅಭ್ಯಾಸಗಳ ಪರಿಣಾಮವಾಗಿದೆ. ನಾಗರಿಕರ ಸಕ್ರಿಯ ಭಾಗವಹಿಸುವಿಕೆಯೊಂದಿಗೆ ಬದಲಾವಣೆಯ ಮಾಡುವುದು ಅನಿವಾರ್ಯವಾಗಿದೆ.

ಸಮುದ್ರಕ್ಕೆ ಪ್ಲಾಸ್ಟಿಕ್ ಸೇರುವುದನ್ನು ತಪ್ಪಿಸಲು ತುರ್ತು ಕ್ರಮ ಕೈಗೊಳ್ಳುವ ಅವಶ್ಯಕತೆ ಇದೆ, ನಾವು ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಾಗಿದೆ. ಆದುದರಿಂದ, ನಾಗರಿಕರು, ಸರ್ಕಾರ ಮತ್ತು ಚುನಾಯಿತ ಪ್ರತಿನಿಧಿಗಳ ಸಹಯೋಗದೊಂದಿಗೆ ಈ ಸಮಸ್ಯೆಯನ್ನು ಪರಿಹರಿಸಲು ಎಪಿಡಿ‌ಎಫ್ ಮತ್ತು ಹಸಿರು ದಳ ಒಟ್ಟಾಗಿ ಈ ಕಾರ್ಯಕ್ರಮವನ್ನು ಪ್ರಾರಂಭಿಸಿದೆ.

ಹಸಿರು ದಳ ಮತ್ತು ಎಪಿಡಿ‌ಎಫ್ ಜಂಟಿಯಾಗಿ ಮಂಗಳೂರಿನ ಸುಮಾರು 30 ಕಿಲೋಮೀಟರ್ ವ್ಯಾಪ್ತಿಯಲ್ಲಿ ಕಸ ಸೋರಿಕೆ ಸ್ಥಳಗಳನ್ನು ಗುರುತಿಸಿವೆ. ಸೂಕ್ತವಾದ ಘನತ್ಯಾಜ್ಯ ನಿರ್ವಹಣೆಯಿಂದ ನೀರಿನ ಮಾಲಿನ್ಯವನ್ನು ಪರಿಹರಿಸಲು ಉದ್ದೇಶಿಸಲಾಗಿದೆ.

ಮಂಗಳೂರು ಮತ್ತು ಸುತ್ತಮುತ್ತಲಿನಲ್ಲಿ ತ್ಯಾಜ್ಯ ಮರುಬಳಕೆ ಉದ್ಯಮವನ್ನು ವ್ಯವಸ್ಥಿತಗೊಳಿಸುವ ಅಗತ್ಯವಿದೆ. ಅನೌಪಚಾರಿಕ ತ್ಯಾಜ್ಯ ಆರ್ಥಿಕತೆಯನ್ನು ಕಸ ತೆಗೆಯುವವರ ಸಹಾಯದಿಂದ ಸುವ್ಯವಸ್ಥಿತಗೊಳಿಸಲು ಈ ಕಾರ್ಯಕ್ರಮ ಪ್ರಯತ್ನಿಸಲಿದೆ.

ಆರಂಭಿಕ ತಂತ್ರಗಳು : ಮಂಗಳೂರಿನ ನಾಗರಿಕರ ಸಹಯೋಗದೊಂದಿಗೆ ಜಾಗೃತಿ ಅಭಿಯಾನ ನದಿಗಳನ್ನು ಕಲುಷಿತಗೊಳಿಸಲು ಕಾರಣವಾಗಿರುವ ವಾರ್ಡ್‌ಗಳಲ್ಲಿ ಉತ್ತಮ ತ್ಯಾಜ್ಯ ಬೇರ್ಪಡಿಸುವಿಕೆಗಾಗಿ ಎಂಸಿಸಿ ಮತ್ತು ಇತರ ನಗರ ಸ್ಥಳೀಯ ಸಂಸ್ಥೆಗಳೊಂದಿಗೆ ಕೆಲಸ ಮಾಡುವುದು.

ತ್ಯಾಜ್ಯ ಆಯ್ದುಕೊಳ್ಳುವವರು ಮತ್ತು ಇತರ ತ್ಯಾಜ್ಯ ಕಾರ್ಮಿಕರ ಸೇವೆಗಳನ್ನು ಸಂಘಟಿಸಿ ಮತ್ತು ವೃತ್ತಿಪರಗೊಳಿಸಿ ತ್ಯಾಜ್ಯವನ್ನು ತೆಗೆದುಕೊಳ್ಳುವವರಿಗೆ ತ್ಯಾಜ್ಯ ಉದ್ಯಮಿಗಳಾಗಲು ಅವಕಾಶವನ್ನು ಸೃಷ್ಟಿಸುವುದು.

ಜಲಮೂಲಗಳ ಅಭಿಯಾನ ಮತ್ತು ಸ್ವಚ್ಛ ಗೊಳಿಸುವಿಕೆ. ಈ ಬೃಹತ್ ಪ್ರಯತ್ನದಲ್ಲಿ ಭಾಗವಹಿಸಲು ಮತ್ತು ಸಹಕರಿಸಲು ಮತ್ತು ಗುರುಪುರ ಮತ್ತು ನೇತ್ರಾವತಿ ನದಿಗಳ ಹಿರಿಮೆಯನ್ನು ಮರಳಿ ತರಲು ನಾಗರಿಕರನ್ನು, ಚುನಾಯಿತ ಪ್ರತಿನಿಧಿಗಳ ಬೆಂಬಲ ಮತ್ತು ಎಂಎಂಸಿ ಮತ್ತು ಉಳ್ಳಾಲ ಪುರಸಭೆಯ ಬೆಂಬಲವನ್ನು ಕೋರಲಾಗಿದೆ.

ಸಂಪರ್ಕಿಸಿ : ದೂರವಾಣಿ: 0824 – 4267008, ಇಮೇಲ್: office@antipollution.org

Comments are closed.